ಸಾರಾಂಶ
ಹುಬ್ಬಳ್ಳಿ: ಗ್ಯಾರಂಟಿ ಯೋಜನೆ ಮೂಲಕ ಜನತೆಗೆ ಎಲ್ಲವನ್ನೂ ಉಚಿತವಾಗಿ ನೀಡುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ಹೇಳಿದರು.
ಅವರು ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ತೈಲ ಬೆಲೆ ಏರಿಕೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಈಗ ಇದೇ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್‌ನ ಬೆಲೆ ಏರಿಕೆ ಮಾಡಿ ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿದೆ. ಇದು ಹೀಗೆಯೇ ಮುಂದುವರಿದಲ್ಲಿ ಬೇರೆ ರಾಜ್ಯಗಳಿಗೆ ಹೋಗಿ ಜನರು ಪೆಟ್ರೋಲ್, ಡೀಸೆಲ್ ತರುವ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ. ಸರ್ಕಾರ ಈ ಕೂಡಲೇ ತೈಲ ಬೆಲೆ ಏರಿಕೆಯನ್ನು ಹಿಂಪಡೆಯಬೇಕು. ಇಲ್ಲದೇ ಹೋದಲ್ಲಿ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಸಂಪೂರ್ಣ ವಿಫಲ: ಬೆಲೆ ಏರಿಕೆ ಇದೇ ರೀತಿ ಮುಂದುವರಿದಿದ್ದೇ ಆದಲ್ಲಿ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸಹ ಸರ್ಕಾರ ಪರದಾಡುವ ಪರಿಸ್ಥಿತಿ ಉಂಟಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಭವಿ ವ್ಯಕ್ತಿ ಎಂದು ಹೇಳುತ್ತಾರೆ. ಆದರೆ, ಈ ವಿಚಾರದಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಾಗಿ ಖಜಾನೆಯಲ್ಲಿನ ದುಡ್ಡು ವ್ಯವಿಯಿಸುತ್ತಿದೆ. ನಿತ್ಯದ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಈಗಾಗಲೇ ಕಾಂಗ್ರೆಸ್‌ನ ಶಾಸಕರೇ ಗ್ಯಾರಂಟಿ ಯೋಜನೆ ಏಕೆ ಮುಂದುವರಿಸುತ್ತೀರಿ ಎಂದು ಕೇಳುತ್ತಿದ್ದಾರೆ ಎಂದರು.
ರಾಜಕೀಯ ದ್ವೇಷ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ, ಯಡಿಯೂರಪ್ಪ ಅವರ ಮೇಲೆ ರಾಜ್ಯಸರ್ಕಾರ ಷಡ್ಯಂತ್ರ ಮಾಡುವ ಕೆಲಸ ಮಾಡುತ್ತಿದೆ. ಪ್ರಕರಣ ದಾಖಲಾದ ಸಂದರ್ಭದಲ್ಲಿ ಗೃಹ ಸಚಿವರೇ ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದಿದ್ದರು. ಇದೀಗ ವಾಲ್ಮೀಕಿ ನಿಗಮದ ಹಗರಣ, ನಾಗೇಂದ್ರ ರಾಜೀನಾಮೆ ಮುಚ್ಚಿಹಾಕಲು ಬಿಎಸ್‌ವೈ ಅವರ ವಿರುದ್ಧ ಷಡ್ಯಂತ್ರ ಹೂಡಲಾಗಿದೆ. ರಾಜಕೀಯ ದ್ವೇಷ ಸಾಧಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.ಹೈಕಮಾಂಡಿಗೆ ಬಿಟ್ಟ ವಿಷಯ: ಸಚಿವ ಸ್ಥಾನದ ತಪ್ಪಿದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ, ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಹುದೊಡ್ಡ ಅಂತರದ ಗೆಲವು ದೊರೆತಿದೆ. ಸಚಿವ ಸ್ಥಾನ ನೀಡುವುದು ಬಿಡುವುದು ಪ್ರಧಾನಮಂತ್ರಿ ಹಾಗೂ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಸಚಿವ ಸ್ಥಾನ ಕೈ ತಪ್ಪಿದೆ ಎಂದು ಹೇಳಲ್ಲ, ಸಂಸದನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.ಕಾನೂನು ಕೈಗೆತ್ತಿಕೊಳ್ಳಬಾರದು: ಯಾರು ಕೂಡಾ ಕಾನೂನು ಕೈಗೆತ್ತಿಕೊಳ್ಳಬಾರದು. ರೇಣುಕಾಸ್ವಾಮಿ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬಹುದಿತ್ತು. ಆರೋಪಿಗಳಿಗೆ ರಾಜ ಮರ್ಯಾದೆ ನೀಡುತ್ತಿರುವುದು ಕಂಡುಬಂದಿದ್ದು, ಇದು ಸಲ್ಲದು. ಸ್ಟಾರ್ ನಟರಾಗಲಿ ಮತ್ತು ಸಾಮಾನ್ಯ ಜನರಾಗಲಿ ಎಲ್ಲರಿಗೂ ಒಂದೇ ರೀತಿಯಲ್ಲಿ ನೋಡಿಕೊಳ್ಳಬೇಕು. ಕಾನೂನಿನ ಎದುರು ಯಾರೂ ದೊಡ್ಡವರಲ್ಲ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.