ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಸರ್ಕಾರಿ ನೌಕರರು ರಾಜಕೀಯ ಬಿಟ್ಟು ರೈತರು ಮತ್ತು ಬಡವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.ಪಟ್ಟಣದ ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ರವೀಶ್ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದೆ ಕೆಲವು ಸರ್ಕಾರಿ ನೌಕರರು ಕೆಲವು ರಾಜಕೀಯ ಪಕ್ಷಗಳ ವಕ್ತಾರರಂತೆ ಕೆಲಸ ಮಾಡಿದ ಉದಾಹರಣೆ ಇವೆ. ಮುಂದಿನ ದಿನಗಳಲ್ಲಿ ನೌಕರರು ಇಂತಹ ಚಟುವಟಿಕೆಗಳಿಗೆ ಸ್ವಯಂ ಕಡಿವಾಣ ಹಾಕಿ ಕೊಳ್ಳುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದರು.ನೌಕರರ ಸಂಘದ ಪದಾಧಿಕಾರಿಗಳ ಚುನಾವಣೆ ನಂತರ ಎಲ್ಲಾ ಇಲಾಖೆ ನೌಕರರಿಗೂ ಅಧಿಕಾರದ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ಕೆಲವೊಂದು ಮಾನದಂಡ ಅನುಸರಿಸಲಾಗಿದೆ. ನಂತರದ ದಿನಗಳಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳಿಗೂ ಅವಕಾಶ ನೀಡಲಾಗುವುದು ಎಂದು ಹೇಳುವ ಮೂಲಕ ನೌಕರರ ಸಂಘದಲ್ಲಿ ತಮ್ಮ ಅಣತಿಯಂತೆ ಅಧಿಕಾರ ಹಂಚಿಕೆ ಸೂತ್ರ ರೂಪಿಸಲಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ.ನಾಗೇಶ್ ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ಏಳನೇ ವೇತನ ಆಯೋಗದ ಜಾರಿಯಿಂದ ನಿವೃತ್ತ ಸರ್ಕಾರಿ ತುಂಬಾ ಅನ್ಯಾಯವಾಗಿದೆ. ಇದರ ಲೋಪ ದೋಷವನ್ನು ಸರಿಪಡಿಸಬೇಕು ಎಂದು ಆಗ್ರಪಡಿಸಿದರು.ಸರ್ಕಾರ ಸಿಎನ್ ಆರ್ ನಿಯಮ ಜಾರಿಗೆ ತಂದಿದೆ. ಇದರಿಂದ ಪ್ರಾಥಮಿಕ ಶಾಲಾ ಅನ್ಯಾಯವಾಗುತ್ತಿದೆ. ಈ ನಿಯಮಕ್ಕೆ ತಿದ್ದುಪಡಿ ತರಬೇಕು ಹಾಗೂ ಏಳನೇ ವೇತನ ಆಯೋಗ ದಿಂದ ಸರ್ಕಾರಿ ನೌಕರರಿಗೆ ತುಂಬಾ ಅನ್ಯಾಯವಾಗುತ್ತಿದೆ ಸರ್ಕಾರ ಗಮನಹರಿಸಿ ಲೋಪ ಸರಿಪಡಿಸಬೇಕು ಒತ್ತಾಯಿಸಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಕಾಳಿರಯ್ಯ, ನಿಕಟ ಪೂರ್ವ ಅಧ್ಯಕ್ಷ ರವಿಕುಮಾರ್, ಸಂಘದ ನೂತನ ಖಜಾಂಚಿ ಜಿ.ಎನ್. ಸುರೇಶ್, ರಾಜ್ಯ ಪರಿಷತ್ ಸದಸ್ಯ ಪೂರ್ಣಚಂದ್ರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೆ.ಎಸ್.ದೇವರಾಜ್, ಮಾಜಿ ಅಧ್ಯಕ್ಷ ನಿಂಗರಾಜು, ಸಿಪಾಯಿ ಶ್ರೀನಿವಾಸ್, ನೌಕರ ಸಂಘದ ನೂತನ ಪದಾಧಿಕಾರಿಗಳು ಹಾಗೂ ನಿಕಟಪೂರ್ವ ಪದಾಧಿಕಾರಿಗಳು ಭಾಗವಹಿಸಿದ್ದರು.