ಮಾರ್ಚ್ 10ರಿಂದ ಹಾವೇರಿಯಲ್ಲಿ ಸರ್ಕಾರಿ ನೌಕರರ ಕ್ರೀಡಾಕೂಟ

| Published : Feb 28 2025, 12:46 AM IST

ಸಾರಾಂಶ

ಮಾ. 10ರಂದು ಉದ್ಘಾಟನಾ ಕಾರ್ಯಕ್ರಮ ಜರುಗಲಿದ್ದು, ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಾವೇರಿ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಮಾ. 10 ಮತ್ತು 11ರಂದು ಸರ್ಕಾರಿ ನೌಕರರ ಕ್ರೀಡಾಕೂಟವನ್ನು ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ. 10ರಂದು ಉದ್ಘಾಟನಾ ಕಾರ್ಯಕ್ರಮ ಜರುಗಲಿದ್ದು, ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಬಾರಿ ಕ್ರೀಡಾಕೂಟದಲ್ಲಿ 1200ಕ್ಕೂ ಹೆಚ್ಚು ಸರ್ಕಾರಿ ನೌಕರರು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು. ಈ ಬಾರಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕ್ರೀಡಾ ಕೋಟಾ ಅಡಿ ನೇಮಕಗೊಂಡವರು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ ಎಂದು ಮಾಹಿತಿ ನೀಡಿದರು.ರಾಜ್ಯ ಸರ್ಕಾರದ ಅಡಿಯಲ್ಲಿ ಒಟ್ಟು 72 ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಕೆಲವೇ ಪ್ರಮುಖ ಇಲಾಖೆಗಳನ್ನು ಮಾತ್ರ ಪರಿಗಣಿಸಿ 42- 50 ಇಲಾಖೆ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ವರ್ಗಾವಣೆಯಾಗಿ ಹೊರಹೋಗುವ ಮತ್ತು ಬರುವ ಸಿಬ್ಬಂದಿ ಪರಿಗಣಿಸಿ 18-22 ಸಾವಿರ ನೌಕರರು ಜಿಲ್ಲೆಯಲ್ಲಿದ್ದಾರೆ. 2006ರ ಏ. 1ರಿಂದ ನೇಮಕಗೊಂಡವರು ಹೊಸ ಪಿಂಚಣಿ ವ್ಯಾಪ್ತಿಯಲ್ಲಿ ಇದ್ದು, ಅದನ್ನು ರದ್ದುಪಡಿಸಿ ಹಳೇಯ ಪಿಂಚಣಿ ಮರುಜಾರಿಗೆ ತರುವ ನಿಟ್ಟಿನಲ್ಲಿ ಹೋರಾಟ ಮಾಡುವುದೇ ಸಂಘದ ಮೊದಲ ಆದ್ಯತೆ ಆಗಿದೆ. ಜಿಲ್ಲೆಯಲ್ಲಿ ಬಹಳಷ್ಟು ಸರ್ಕಾರಿ ಕಚೇರಿಗಳಲ್ಲಿ ಖಾಲಿ ಹುದ್ದೆಗಳಿದ್ದು, ಅದರಿಂದ ಪ್ರಸ್ತುತ ನೌಕರರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದ್ದು ಖಾಲಿ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.ಪೊಲೀಸ್ ಇಲಾಖೆಗೆ ನೀಡಿರುವ ನಗದು ರಹಿತ ಆರೋಗ್ಯ ಭಾಗ್ಯ ಯೋಜನೆಯನ್ನು ಎಲ್ಲ ಸರ್ಕಾರಿ ನೌಕರರಿಗೂ ಜಾರಿಗೊಳಿಸುವ ಕುರಿತು ಸಿಎಂ, ಡಿಸಿಎಂ ಈಡೇರಿಸುವ ಭರವಸೆ ನೀಡಿದ್ದು, ಶೀಘ್ರವೇ ಕಾರ್ಯಪ್ರವರ್ತರಾಗಿ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು.ಸರ್ಕಾರಿ ನೌಕರರಿಗೆ ಕೆಲಸದ ಸಮಯದಲ್ಲಿ ಕಿರುಕುಳ, ತೊಂದರೆ ನಡೆದಾಗ ಅವರ ಪರವಾಗಿ ಸಂಘವು ಗಟ್ಟಿಯಾಗಿ ನಿಲ್ಲುತ್ತದೆ. ಸರ್ಕಾರಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನೌಕರರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.ಸಂಘದ ಜಿಲ್ಲಾ ಕಾರ್ಯದರ್ಶಿ ಜಿ.ಎಸ್. ಪಾಟೀಲ, ರಾಜ್ಯ ಸಮಿತಿ ಸದಸ್ಯ ಮುನೇಶ್ವರ ಚೂರಿ, ಜಿಲ್ಲಾ ಖಜಾಂಚಿ ದಾವಲಸಾಬ ಕಮಗಾಲ, ಕಾರ್ಯಾಧ್ಯಕ್ಷ ಎಚ್.ವೈ, ಬಾರ್ಕಿ ಮತ್ತು ಸಂತೋಷಕುಮಾರ ಪೂಜಾರ ಇತರರು ಇದ್ದರು. ಬೀದಿನಾಯಿಗಳ ಸ್ಥಳಾಂತರಕ್ಕೆ ಕ್ರಮ: ಆಕ್ಷೇಪಣೆಗೆ ಅವಕಾಶ

ಹಾವೇರಿ: ನಗರದಲ್ಲಿ ದಿನದಿಂದ ದಿನಕ್ಕೆ ಶ್ವಾನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶ್ವಾನಗಳು ಮಕ್ಕಳು ಮತ್ತು ವೃದ್ಧರ ಮೇಲೆ ದಾಳಿ ಮಾಡುತ್ತಿದ್ದು, ಇದರಿಂದ ಸಮಸ್ಯೆಯಾಗುತ್ತಿದೆ. ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದಂತೆ ಶ್ವಾನಗಳನ್ನು ಹಿಡಿದು ಅವುಗಳಿಗೆ ಯಾವುದೇ ಹಿಂಸೆ ನೀಡದೇ ದೂರದ ಪ್ರದೇಶದಲ್ಲಿ ಬಿಡಲು ಕ್ರಮ ವಹಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಣ ಕುರಿತು ಹಾವೇರಿ ನಗರಸಭೆ ವತಿಯಿಂದ 2024ರ ಅ. 15, ಡಿ. 10 ಹಾಗೂ ಜ. 2ರಂದು ಮೂರು ಬಾರಿ ಬೀದಿನಾಯಿಗಳ ಸಂತಾನಶಕ್ತಿ ಹರಣ ಮಾಡುವ ಕುರಿತು ಟೆಂಡರ್ ಕರೆಯಲಾಗಿತ್ತು. ಆದರೆ ಯಾವುದೇ ಎನ್‌ಜಿಒಗಳು ಭಾಗವಹಿಸಲಿಲ್ಲ. ಶ್ವಾನಗಳ ಹಾವಳಿ ಕುರಿತು ಹಾವೇರಿ ಜಿಲ್ಲಾ ಅಡ್ವೊಕೇಟ್ ಅಸೋಸಿಯೇಷನ್ ಹಾಗೂ ಸಾರ್ವಜನಿಕರಿಂದ ಬಂದ ದೂರುಗಳು ಹಿನ್ನೆಲೆ ಶ್ವಾನಗಳನ್ನು ಹಿಡಿದು ದೂರದ ಪ್ರದೇಶಗಳಿಗೆ ಬಿಡಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಏಳು ದಿನಗಳ ಒಳಗಾಗಿ ನಗರಸಭೆ ಕಚೇರಿಗೆ ದೂರುಗಳನ್ನು ಸಲ್ಲಿಸಬೇಕು. ತಪ್ಪಿದಲ್ಲಿ ಯಾವುದೇ ಅಕ್ಷೇಪಣೆಗಳಿಲ್ಲವೆಂದು ಭಾವಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.