ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುವವರು ತಮ್ಮ ಸೇವಾವಧಿಯಲ್ಲಿ ಜನ ಸಾಮಾನ್ಯರೊಡನೆ ಗೌರವದಿಂದ ನಡೆದುಕೊಂಡು ಅವರ ಸಮಸ್ಯೆ ಮತ್ತು ಸಂಕಷ್ಟಗಳಿಗೆ ಸ್ಪಂದಿಸಿದರೆ ಸರ್ವರು ಅವರನ್ನು ಸದಾಕಾಲ ನೆನೆಯುತ್ತಾರೆ ಎಂದು ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಹೇಳಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ಕಳೆದ ಎರಡು ವರ್ಷಗಳಿಂದ ಗ್ರೇಡ್- 2 ತಹಸೀಲ್ದಾರರಾಗಿ ಕಾರ್ಯ ನಿರ್ವಹಿಸಿ ತಮ್ಮ 36 ವರ್ಷಗಳ ಸುದೀರ್ಘ ಸೇವೆಯಿಂದ ನಿವೃತ್ತರಾದ ಕೆ.ಎಸ್. ಬಾಲಸುಬ್ರಮಣ್ಯ ಅವರಿಗೆ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಕೆ.ಆರ್. ನಗರ ತಾಲೂಕು ಕಚೇರಿಗೆ ಸೇವೆಗೆ ಬಂದ ನಂತರ ಗ್ರೇಡ್- 2 ತಹಸೀಲ್ದಾರರು ನಮಗೆ ಸರ್ಕಾರಿ ಸೇವೆಯ ವಿಚಾರದಲ್ಲಿ ಹಲವು ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ನೀಡಿದ್ದು ಇಂತಹವರು ಎಲ್ಲರಿಗೂ ಮಾದರಿ ಎಂದು ಪ್ರಶಂಶಿಸಿದರು.ಕೆ.ಎಸ್. ಬಾಲಸುಬ್ರಹ್ಮಣ್ಯ ಅವರು ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕೆಲಸ ಮಾಡುವಾಗ ಸರ್ಕಾರಿ ಆಸ್ತಿ ರಕ್ಷಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು ಈ ವಿಚಾರದಲ್ಲಿ ಅವರು ಅಭಿನಂದನೆಗೆ ಅರ್ಹರು. ಕಿರಿಯ ಅಧಿಕಾರಿಗಳು ಹಿರಿಯರ ಸೇವಾ ಮನೋಭಾವನೆಯನ್ನು ಅರ್ಥ ಮಾಡಿಕೊಂಡು ಅದನ್ನು ಅನುಸರಿಸಬೇಕು ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಗ್ರೇಡ್ - 2 ತಹಸೀಲ್ದಾರ್ ಕೆ. ಎಸ್. ಬಾಲಸುಬ್ರಮಣ್ಯ ತಮ್ಮ ಸೇವಾವಧಿಯಲ್ಲಿ ಸಹಕಾರ ನೀಡಿದ ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕು ಕಚೇರಿಯ ಇಲಾಖೆಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.ಸಾಲಿಗ್ರಾಮ ತಹಸೀಲ್ದಾರ್ ನರಗುಂದ್, ಭೂ ಮಾಪನಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಕಂಠಶರ್ಮ, ಹುಣಸೂರು ಉಪ ವಿಭಾಗಾಧಿಕಾರಿಗಳ ಕಚೇರಿಯ ವ್ಯವಸ್ಥಾಪಕ ಎಂ.ಎಸ್. ಯದುಗಿರೀಶ್, ಉಪ ಖಜಾನಾಧಿಕಾರಿ ಪುಟ್ಟರಾಜು, ಶಿರಸ್ತೇದಾರ್ ಅಸ್ಲಾಂ ಭಾಷಾ ಮಾತನಾಡಿದರು.
ಈ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾದ ಕೆ.ಎಸ್. ಬಾಲಸುಬ್ರಮಣ್ಯ ಮತ್ತು ಕುಟುಂಬದವರನ್ನು ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕು ಕಚೇರಿಯ ಸಿಬ್ಬಂದಿ ಆತ್ಮೀಯವಾಗಿ ಅಭಿನಂದಿಸಿ ಬೀಳ್ಕೊಟ್ಟರು.ಸಾಲಿಗ್ರಾಮ ತಾಲೂಕು ಕಚೇರಿಯ ಶಿರಸ್ತೇದಾರ್ ಮಹೇಶ್, ಕಂದಾಯಾಧಿಕಾರಿ ಸಂತೋಷ್, ಕೆ.ಆರ್. ನಗರ ತಾಲೂಕು ಕಚೇರಿ ಸಿಬ್ಬಂದಿ ಸಣ್ಣಸ್ವಾಮಿ, ಧ್ರುವರಾಜು ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.