ಸರ್ಕಾರದಿಂದ ವಿದ್ಯಾರ್ಜನೆಗೆ ಹೆಚ್ಚಿನ ಮಹತ್ವ: ಎಚ್‌.ಡಿ. ತಮ್ಮಯ್ಯ

| Published : Oct 01 2024, 01:15 AM IST

ಸಾರಾಂಶ

ಚಿಕ್ಕಮಗಳೂರು, ವಿದ್ಯಾರ್ಥಿಗಳ ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆ ದೃಷ್ಟಿಯಿಂದ ಸರ್ಕಾರ ಹಾಗೂ ದಾನಿಗಳ ಸಹಕಾರದಿಂದ ಚಿಕ್ಕಿ, ಮೊಟ್ಟೆ ಹಾಗೂ ಬಾಳೆಹಣ್ಣನ್ನು ವಿತರಿಸುವ ಮೂಲಕ ವಿದ್ಯಾರ್ಜನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

- ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿದ್ಯಾರ್ಥಿಗಳ ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆ ದೃಷ್ಟಿಯಿಂದ ಸರ್ಕಾರ ಹಾಗೂ ದಾನಿಗಳ ಸಹಕಾರದಿಂದ ಚಿಕ್ಕಿ, ಮೊಟ್ಟೆ ಹಾಗೂ ಬಾಳೆಹಣ್ಣನ್ನು ವಿತರಿಸುವ ಮೂಲಕ ವಿದ್ಯಾರ್ಜನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಬಸವನಹಳ್ಳಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸೋಮವಾರ ಜಿಲ್ಲಾಡಳಿತ, ಜಿ.ಪಂ. ಶಾಲಾ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್‍ಜಿ ಫೌಂಡೇಷನ್ ಸಹಯೋಗದಲ್ಲಿ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ ಪ್ರಸಕ್ತ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾಭ್ಯಾಸದ ಸಂದರ್ಭದಲ್ಲಿ ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಗಟ್ಟಿಗೊಳಿಸುವ ಸಲುವಾಗಿ ಪೂರಕ ಪೌಷ್ಠಿಕಾಂಶವುಳ್ಳ ಆಹಾರಗಳನ್ನು ವಿತರಿಸಿ ಶಕ್ತಿ ತುಂಬುತ್ತಿದೆ. ಇದರಿಂದ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವ ಜೊತೆಗೆ ಆರೋಗ್ಯಪೂರ್ಣ ಬೆಳವಣಿಗೆ ಹೊಂದಲು ಸಹಕಾರಿ ಎಂದರು.

ಸರ್ಕಾರಿ ಶಾಲೆ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಉಚಿತ ಪುಸ್ತಕ, ಪೌಷ್ಟಿಕಾಂಶ ಆಹಾರ ಹಾಗೂ ಸಮವಸ್ತ್ರ ವಿತರಿಸಿ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಮಕ್ಕಳು ಸರ್ಕಾರಿ ಶಾಲೆ ಎಂಬ ಕೀಳರಿಮೆ ಇರಬಾರದು. ಅನೇಕ ಗಣ್ಯರು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪೂರೈಸಿ ಸಮಾಜ ಮುಂಚೂಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಪೌಷ್ಠಿಕ ಆಹಾರ ವಿತರಿಸುವ ಸಂಬಂಧ ಅಜೀಂ ಪ್ರೇಮ್‍ಜಿ ಫೌಂಡೇಷನ್ ಸರ್ಕಾರದೊಂದಿಗೆ ಜೊತೆಗೂಡಿ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಒಪ್ಪಂದ ಮೇರೆಗೆ ಪೌಷ್ಠಿಕಾಂಶ ಆಹಾರ ವಿತರಿಸುತ್ತಿದೆ ಎಂದ ಅವರು, ಶಾಲೆ ಹಳೆಯ ವಿದ್ಯಾ ರ್ಥಿಗಳ ಘಟಕ ಸ್ಥಾಪಿಸಿ ಮಕ್ಕಳಿಗೆ ಸ್ಪಂದಿಸುವಲ್ಲಿ ಮುಂದಾಗಬೇಕು ಎಂದು ಮನವಿ ಮಾಡಿದರು.

ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಕಾರ್ಯಕ್ರಮ ಉದ್ಘಾಟಿಸಿ ಮಾ ತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಕೇಂದ್ರ ಸರ್ಕಾರ ಪೋಷಣ್ ಅಭಿಯಾನ ಜಾರಿಗೊಳಿಸಿದೆ. ಅದರಂತೆ ಮಕ್ಕಳು ವಿದ್ಯಾಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದು ಅನೇಕರಿಗೆ ಆಸರೆ ಒದಗಿಸುವ ವೃತ್ತಿಯಲ್ಲಿ ತೊಡ ಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆ ತೊಡಗಿಸಿಕೊಂಡು ಕ್ರೀಯಾಶೀಲರಾಗಬೇಕು. ಆ ನಿಟ್ಟಿನಲ್ಲಿ ಹಂತ ಹಂತವಾಗಿ ಮುನ್ನಡೆದರೆ ಸಮಾಜದಲ್ಲಿ ಉತ್ತಮ ವೈದ್ಯ, ಇಂಜಿನಿಯರ್, ಐಎಎಸ್ ಅಥವಾ ಕೆಎಎಸ್ ಹುದ್ದೆ ಅಲಂಕರಿಸಬಹುದು. ಹೀಗಾಗಿ ಪಠ್ಯದಲ್ಲಿ ಬುದ್ಧಿಶಕ್ತಿ ಹೆಚ್ಚಿಸಿಕೊಳ್ಳಬೇಕು. ಶಾಲಾ ಶಿಕ್ಷಕರು ಕೂಡಾ ಮನೆ ಮಕ್ಕಳಂತೆ ವಿದ್ಯಾರ್ಥಿಗಳಿಗೆ ಅಭ್ಯಾಸಿಸುವುದು ಮುಖ್ಯ ಎಂದು ತಿಳಿಸಿದರು.

ಪಿಎಂ ಪೋಷಣ್‌ ಶಕ್ತಿ ಯೋಜನೆ ಶಿಕ್ಷಣಾಧಿಕಾರಿ ವೈ.ಬಿ.ಸುಂದರೇಶ್ ಮಾತನಾಡಿ, ಪಿಎಂ ಶಕ್ತಿ ಯೋಜನೆಯಡಿ ಬಿಸಿಯೂಟ ಜೊತೆಗೆ ಪೂರಕ ಪೌಷ್ಠಿಕಾಂಶ ಆಹಾರ, ರಾಗಿ ಮಾಲ್ಟ್‌ ನ್ನು ವಿತರಿಸುತ್ತಿದೆ. ಇದಕ್ಕೆ ಸರ್ಕಾರ ಸೇರಿದಂತೆ ದಾನಿಗಳ ಸಹಕಾರ ಅತ್ಯಂತ ಅವಶ್ಯವಿರುವ ಹಿನ್ನೆಲೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಇದೇ ವೇಳೆ ಶಾಲಾ ವಿದ್ಯಾರ್ಥಿಗಳಿಗೆ ಶೂಗಳು ವಿತರಿಸಲಾಯಿತು. ಬಳಿಕ ಶಾಸಕರು ವೈಯಕ್ತಿಕವಾಗಿ ಇಬ್ಬರು ಮಕ್ಕಳಿಗೆ ಸೈಕಲ್ ಖರೀದಿಸುವ ಸಂಬಂಧ 10 ಸಾವಿರ ರು. ದೇಣಿಗೆ ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್, ನಗರಸಭಾ ಸದಸ್ಯ ವರಸಿದ್ದಿ ವೇಣುಗೋಪಾಲ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಕೆ.ಪುಟ್ಟರಾಜು, ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ಕೆ.ತಾರಾನಾಥ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸಿ.ಎಸ್. ದಿವ್ಯಕುಮಾರ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರನಾಯ್ಕ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈರೇಗೌಡ, ತಾಲೂಕು ಅಧ್ಯಕ್ಷ ಕಿರಣ್‍ಕುಮಾರ್, ಮುಖಂಡರಾದ ಪರಮೇಶ್, ಗಂಗಾಧರಪ್ಪ, ಕೆ.ಎನ್.ಮಂಜುನಾಥ್, ಶ್ರೀನಿವಾಸ್ ಉಪಸ್ಥಿತರಿದ್ದರು. 30 ಕೆಸಿಕೆಎಂ 1ಚಿಕ್ಕಮಗಳೂರಿನ ಬಸವನಹಳ್ಳಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸೋಮವಾರ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ವಾಗಿ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು.