ದುಂಡಸಿಯಲ್ಲಿ ಸರ್ಕಾರಿ ಪ್ರೌಢಶಾಲೆ, ಪಿಯು ಕಾಲೇಜು ಪ್ರಾರಂಭ

| Published : Jan 10 2024, 01:46 AM IST / Updated: Jan 10 2024, 02:55 PM IST

ದುಂಡಸಿಯಲ್ಲಿ ಸರ್ಕಾರಿ ಪ್ರೌಢಶಾಲೆ, ಪಿಯು ಕಾಲೇಜು ಪ್ರಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ಡಿಸೆಂಬರ್ ಅಂತ್ಯದ ವೇಳೆಗೆ ಶಿಗ್ಗಾಂವಿ ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ನಳದ ನೀರು ಕೊಡುವ ಕಾರ್ಯ ಪೂರ್ಣಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ದುಂಡಸಿಯಲ್ಲಿ ಸರ್ಕಾರಿ ಪ್ರೌಢಶಾಲೆ ಇಲ್ಲದಿರುವುದಕ್ಕೆ ಬೇಸರವಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ಗ್ರಾಮದಲ್ಲಿ ಅರಟಾಳ ರುದ್ರಗೌಡರ ಹೆಸರಿನಲ್ಲಿ ಹೆಣ್ಣು ಮಕ್ಕಳ ಪ್ರೌಢಶಾಲೆ ಜೊತೆಗೆ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜು ಪ್ರಾರಂಭಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ತಾಲೂಕಿನ ತಡಸ ಗ್ರಾಮದಲ್ಲಿ ಗಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಜಲ ಜೀವನ ಮಿಷನ್ ಅಡಿಯಲ್ಲಿ ಮನೆ ಮನೆಗೆ ಗಂಗೆ ಯೋಜನೆಗೆ ಶಂಕುಸ್ಥಾಪನೆ ಮತ್ತು ಪ್ರವಾಸಿ ಮಂದಿರದ ನೂತನ ಕಟ್ಟಡ ಉದ್ಘಾಟನೆ, ದುಂಡಸಿ ಗ್ರಾಮದಲ್ಲಿ ಶಾಂತಿನಾಥ ತ್ಯಾಗಿ ಭವನ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲ ಜೀವನ ಮಿಷನ್ ಅಡಿ ತಾಲೂಕಿನ ತಡಸ ಗ್ರಾಮಕ್ಕೆ ₹3 ಕೋಟಿ ವೆಚ್ಚದಲ್ಲಿ ಸುಮಾರು ೨೫೦೦ ಮನೆಗಳಿಗೆ ನಳದ ಮೂಲಕ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುವುದು. 

ಮುಂದಿನ ಡಿಸೆಂಬರ್ ಅಂತ್ಯದ ವೇಳೆಗೆ ಶಿಗ್ಗಾಂವಿ ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ನಳದ ನೀರು ಕೊಡುವ ಕಾರ್ಯ ಪೂರ್ಣಗೊಳ್ಳಲಿದೆ. ದುಂಡಸಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಆಸ್ಪತ್ರೆಗೆ ವೈದ್ಯರು, ಶುಶ್ರೂಷಕಿಯರ ಜೊತೆಗೆ ಮೂಲಭೂತ ಸೌಲಭ್ಯ ಮತ್ತು ಆ್ಯಂಬ್ಯುಲೆನ್ಸ್ ಸೌಲಭ್ಯವನ್ನು ಶೀಘ್ರದಲ್ಲಿ ಕಲ್ಪಿಸಲಾಗುವುದು ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಸ್ವಾತಂತ್ರ‍್ಯ ಬಂದು ೭೦ ವರ್ಷ ಕಳೆದರೂ ರಾಜ್ಯದ ಬಹುತೇಕ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಇರಲಿಲ್ಲ. ಮೂರು ವರ್ಷದಲ್ಲಿ ೩೦ ಲಕ್ಷ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವ ಕೀರ್ತಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ ಎಂದರು.

ದುಂಡಸಿ ಗ್ರಾಪಂ ಅಧ್ಯಕ್ಷೆ ಖತೀಜಾಬಿ ಜಮಾದಾರ,ಗ್ರಾಪಂ ಸದಸ್ಯರಾದ ಬಸಯ್ಯ ಹಿರೇಮಠ, ಈರಣ್ಣ ಮಹಾಜನಶೆಟ್ಟರ, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಹುಣಸ್ಯಾಳ, ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ತಿಪ್ಪಣ್ಣ ಸಾತಣ್ಣವರ, ರಾಜಣ್ಣ ಗಂಜಿಗಟ್ಟಿ, ಶಿವಾನಂದ ಮ್ಯಾಗೇರಿ, ನರಹರಿ ಕಟ್ಟಿ, ವಿದ್ಯಾಶ್ರೀ ಅಕ್ಕಿ, ರೇಣುಕಾ ಮುಳಗುಂದ, ಬಾಹುಬಲಿ ಅಕ್ಕಿ, ಈರಣ್ಣ ಸಮಗೊಂಡ, ಪ್ರಭು ನಂಜಪ್ಪನವರ ಮತ್ತಿತರರಿದ್ದರು.