ಸರ್ಕಾರ ಬಡಿದೆಬ್ಬಿಸುವ ಪತ್ರಿಕೋದ್ಯಮ ಮತ್ತೇ ಆರಂಭವಾಗಲಿ: ಟಿ.ವಿ ಶಿವಾನಂದನ್‌ ಕರೆ

| Published : Jul 22 2024, 01:17 AM IST

ಸರ್ಕಾರ ಬಡಿದೆಬ್ಬಿಸುವ ಪತ್ರಿಕೋದ್ಯಮ ಮತ್ತೇ ಆರಂಭವಾಗಲಿ: ಟಿ.ವಿ ಶಿವಾನಂದನ್‌ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜ ಸುಧಾರಣೆ, ಸಮಾನತೆ, ಸರ್ವಧರ್ಮೀಯವಾಗಿ ಇರುವಂಥ ಕೆಲಸ ಪತ್ರಿಕೋದ್ಯಮದ್ದಾಗಲಿ. ಇಂದು ಪತ್ರಕರ್ತರ ಸೇವೆ ವರ್ಣಿಸಲು ಸಾಧ್ಯವಿಲ್ಲ

ಕನ್ನಡಪ್ರಭ ವಾರ್ತೆ ಬೀದರ್

ಜನ ಸಾಮಾನ್ಯ ಹಾಗೂ ಅವರ ಸಂಕಷ್ಟಗಳನ್ನು ನಿರ್ಲಕ್ಷಿಸಿ ಆಡಳಿತ, ಉದ್ಯಮಗಳ ಲಾಲಿ ಹಾಡಿ ಓಲೈಸುವ ದುಸ್ಥಿತಿಗೆ ಬಂದಿರುವ ಪತ್ರಿಕಾ ಮಾಧ್ಯಮ ಈಗಲಾದರೂ ಬದಲಾಗಲಿ, ಈ ಹಿಂದಿನಂತೆ ಸರ್ಕಾರದ ಕಣ್ತೆರೆಸುವ, ಎಚ್ಚರಿಸುವತ್ತ ಸಾಗಲಿ ಎಂದು ಹಿರಿಯ ಪತ್ರಕರ್ತ, ಕಲಬುರಗಿ ಶರಣಬಸವ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಟಿ.ವಿ ಶಿವಾನಂದನ್‌ ಕರೆ ನೀಡಿದರು.

ಅವರು ನಗರದ ಪೋಲಾ ಕನ್ವೆನ್ಷನ್‌ ಹಾಲ್‌ನಲ್ಲಿ ವಚನ ಚಾರಿಟೇಬಲ್‌ ಸೊಸೈಟಿ ಬೀದರ್‌ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ವಚನಾನುಭವ ಎಲ್‌ಎಲ್‌ಪಿ ಉದ್ಘಾಟನೆ ಮಾಡಿ ಮಾತನಾಡಿ, ರಾಜಕಾರಣಿಗಳಿಗೆ, ಓದುಗರ ಅಭಿಲಾಶೆ ಕೊಂಡಿಯಾಗಿ ಪತ್ರಕರ್ತರಾದವರು ಕೆಲಸನಿರ್ವಹಿಸಬೇಕೆಂದು ಸಲಹೆ ನೀಡಿದರು.

ಒಂದು ಕಾಲದಲ್ಲಿ ಪತ್ರಿಕೆಯಲ್ಲಿ ಬಂದ ವರದಿ ಸರ್ಕಾರದ ಕಣ್ಣುತೆರೆಸಿ ಅನೇಕ ಯೋಜನೆ ಬದಲಾಯಿಸಿರುವ ಉದಾಹರಣೆಗೆ ಕಡಿಮೆಯೇನಿಲ್ಲ. ಇಂದಿನ ರಾಜಕೀಯ ಮುತ್ಸದ್ಧಿಗಳು, ಕೈಗಾರಿಕೆ ಉದ್ಯಮಿಗಳು ಪತ್ರಿಕೆಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತಿ ದ್ದಾರೆ. ಇಂಥ ಸ್ಥಿತಿಯಲ್ಲೂ ಬೆರಳೆಣಿಕೆ ಪತ್ರಿಕೆಗಳು ತಮ್ಮ ಬದ್ಧತೆ ಉಳಿಸಿಕೊಂಡಿವೆ ಎಂದು ತಿ‍ಳಿಸಿದರು.

ಹಿರಿಯ ಪತ್ರಕರ್ತ ಸದಾನಂದ ಜೋಶಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಾಮಾಜಿಕ ಬದ್ಧತೆ ಇದೀಗ ಕಾಲ ಬದಲಾದಂತೆ ಆರ್ಥಿಕ ಭದತ್ರೆಗಾಗಿ ವ್ಯವಹಾರ ಆರಂಭವಾಗಿದೆ. ಅಷ್ಟಕ್ಕೂ ಸಮಾಜದ ಎಲ್ಲಾ ಹಂತದ ಬದಲಾವಣೆಗೆ ಪತ್ರಿಕೆ ಪಾತ್ರ ಬಹುಮುಖ್ಯ. ಹೀಗಾಗಿ ಪತ್ರಕರ್ತರಾದವರು ತಾಳ್ಮೆ, ಸಹನೆ, ಸಮಾಜದ ಅಭಿವೃದ್ಧಿ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ವಚನ ಮಿಡಿಯಾ ಹೌಸ್‌ ವ್ಯವಸ್ಥಾಪಕ ನಿರ್ದೇಶಕರು ಪ್ರೊ. ಸಿದ್ದು ಯಾಪಲಪರವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಚನ ಚಾರಿಟೇಬಲ್‌ ಸೊಸೈಟಿ ಸಮಾನ ಮನಸ್ಕರೆಲ್ಲರೂ ಸೇರಿಕೊಂಡು ಸಾಮಾಜಿಕ, ಶೈಕ್ಷಣಿಕ, ಪರಿಸರ ಅಭಿವೃದ್ಧಿಗಾಗಿ ತನ್ನದೆಯಾದ ದಿಸೆಯಲ್ಲಿ ಕೆಲಸ ಮಾಡುತ್ತಿರುವ ಅವರ ಸಾಮಾಜಿಕ ಕಳಕಳಿ ಕಾರ್ಯ ಶ್ಲಾಘನೀಯ ಎಂದರು.

ವಚನ ಸಮೂಹ ಸಂಸ್ಥೆ ಸಹ ಮಾದ್ಯಮದಲ್ಲಿ ದಾಪುಗಾಲು ಹಾಕುತ್ತಿದೆ. ಸಮಾಜದ ಓರೆ ಕೋರೆ ತಿದ್ದಿ ತತ್ವಧಾರಿತ ಮೌಲ್ಯದ ಸುದ್ದಿ ಜನಮಾನಸ ಲೋಕಕ್ಕೆ ಮುಟ್ಟಿಸುವ ಪ್ರಮುಖ ಜವಾಬ್ದಾರಿ ಹೊಂದಲಾಗಿದೆ ಎಂದು ನುಡಿದರು. ಎಲ್‌ಎಲ್‌ಪಿ ಹೊಸ ಯೋಜನೆ ಬಗ್ಗೆ ಅಲ್ಲಮಪ್ರಭು ನಾವದಗೇರೆ ಮಾಹಿತಿ ನೀಡಿದರು. ನಿರ್ದೇಶಕ ಪ್ರಕಾಶ ಗಂದಿಗುಡೆ ಮಾತನಾಡಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿದ್ದ ಹುಲಸೂರಿನ ಡಾ. ಶಿವಾನಂದ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜ ಸುಧಾರಣೆ, ಸಮಾನತೆ, ಸರ್ವಧರ್ಮೀಯವಾಗಿ ಇರುವಂಥ ಕೆಲಸ ಪತ್ರಿಕೋದ್ಯಮದ್ದಾಗಲಿ. ಇಂದು ಪತ್ರಕರ್ತರ ಸೇವೆ ವರ್ಣಿಸಲು ಸಾಧ್ಯವಿಲ್ಲ. ಚಳಿ, ಮಳೆ, ಬಿಸಿಲೆನ್ನದೇ ಕಷ್ಟ ಕಾರ್ಪಣ್ಯ ಸಹಿಸಿಕೊಂಡು ಸಮಾಜಕ್ಕೆ ಸುದ್ದಿ ಮುಟ್ಟಿಸುವ ಕಾರ್ಯ ಸ್ಮರಣೀಯ, ಪತ್ರಿಕೆಗಳಿಗೆ ಸರ್ಕಾರದಿಂದ ಜಾಹೀರಾತುಗಳು ಹೆಚ್ಚಳವಾಗಬೇಕು, ಪತ್ರಕರ್ತರಿಗೆ ಸೌಲಭ್ಯ ಹೆಚ್ಚಿಸಬೇಕು ಜನಸಾಮಾನ್ಯ ಪತ್ರಿಕೆ ಖರೀದಿಸಿ ಓದಬೇಕು ಎಂದರು.

ವಚನ ಚಾರಿಟೇಬಲ್ ಸೊಸೈಟಿ ನಿಕಟಪೂರ್ವ ಅಧ್ಯಕ್ಷೆ ಲಿಂಗಾರತಿ ಅಲ್ಲಮಪ್ರಭು ನಾವದಗೇರೆ ಸೊಸೈಟಿ ವರದಿ ವಾಚನ ಮಾಡಿ ಅಧಿಕಾರವನ್ನು ನೂತನ ಅಧ್ಯಕ್ಷ ಡಾ. ಸುರೇಶ ಪಾಟೀಲ್‌ ಅವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಅಪ್ಪಾರಾವ್‌ ಸೌದಿ, ವೈಜಿನಾಥ ಸಜ್ಜನಶೆಟ್ಟಿ ಕನ್ನಡ ಭಾವ ಗೀತೆ ಹಾಡಿ ಮನರಂಜಿಸಿದರು. ವಚನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಶಿವಕುಮಾರ ಸಾಲಿ ಸ್ವಾಗತಿಸಿ ಶಿವಶಂಕರ ಟೋಕರೆ ನಿರೂಪಿಸಿದರೆ ಜಗನ್ನಾಥ ಶಿವಯೋಗಿ ವಂದಿಸಿದರು.

ಹಿರಿಯ ಪತ್ರಕರ್ತ ಗುರುರಾಜ ಕುಲಕರ್ಣಿಗೆ ಸನ್ಮಾನ:

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಗುರುರಾಜ ಕುಲಕರ್ಣಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಬೀದರ್‌ ಜಿಲ್ಲೆ ಪತ್ರಿಕೆ ವಿತರಣೆ ಮಾಡುವ 48 ಯುವಕರಿಗೆ ಜಾಕೆಟ್‌ ವಿತರಿಸಲಾಯಿತು, 12 ಜನ ಪತ್ರಿಕಾ ವಿತರಕರಿಗೆ, 5 ಜನ ಜಾಹೀರಾತು ಪ್ರತಿನಿಧಿಗಳಿಗೆ ಹಾಗೂ 3 ಜನ ಪ್ರಸರಾಂಗ ಪ್ರತಿನಿಧಿಗಳಿಗೆ ಹಾಗೂ 38 ಜನ ಹಿರಿಯ ಪತ್ರಿಕಾ ಸಂಪಾದಕ/ವರದಿಗಾರರಿಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು.