ಚೊಟ್ಟನಹಳ್ಳಿಯಲ್ಲಿ ಸರ್ಕಾರಿ ಭೂಮಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ: ಆರೋಪ

| Published : Dec 28 2023, 01:46 AM IST / Updated: Dec 28 2023, 01:47 AM IST

ಚೊಟ್ಟನಹಳ್ಳಿಯಲ್ಲಿ ಸರ್ಕಾರಿ ಭೂಮಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ: ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಚೊಟ್ಟನಹಳ್ಳಿಯ 23 ಎಕರೆ ಸರ್ಕಾರಿ ಭೂಮಿಯಲ್ಲಿ 20 ಕುಂಟೆ ಜಮೀನನ್ನು ಚೊಟ್ಟನಹಳ್ಳಿ ಗ್ರಾಪಂಗೆ ತ್ಯಾಜ್ಯ ವಿಲೇವಾರಿಗೆ ಮೀಸಲಾಗಿತ್ತು. ಉಳಿದ ಜಮೀನನ್ನು ಒಂದೇ ಕುಟುಂಬಕ್ಕೆ ಅಕ್ರಮವಾಗಿ ಪರಭಾರೆ ಮಾಡಿರುವ ಬಗ್ಗೆ ತನಿಖೆ ನಡೆಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ಚೊಟ್ಟನಹಳ್ಳಿಯಲ್ಲಿ ಸರ್ಕಾರಿ ಭೂಮಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಸಂಬಂಧ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಮಾಜಿ ಸದಸ್ಯ ಹನುಮಂತು ಒತ್ತಾಯಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಚೊಟ್ಟನಹಳ್ಳಿಯ 23 ಎಕರೆ ಸರ್ಕಾರಿ ಭೂಮಿಯಲ್ಲಿ 20 ಕುಂಟೆ ಜಮೀನನ್ನು ಚೊಟ್ಟನಹಳ್ಳಿ ಗ್ರಾಪಂಗೆ ತ್ಯಾಜ್ಯ ವಿಲೇವಾರಿಗೆ ಮೀಸಲಾಗಿತ್ತು. ಉಳಿದ ಜಮೀನನ್ನು ಒಂದೇ ಕುಟುಂಬಕ್ಕೆ ಅಕ್ರಮವಾಗಿ ಪರಭಾರೆ ಮಾಡಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಜೆಡಿಎಸ್‌ನಿಂದ ಒತ್ತಾಯಿಸುತ್ತೇವೆ ಎಂದರು.

ಕ್ಷೇತ್ರದಲ್ಲಿ ಜೆಡಿಎಸ್ ಆಸ್ತಿತ್ವವನ್ನು ಕುಂದಿಸುವ ಉದ್ದೇಶದಿಂದ ಜೆಡಿಎಸ್ ಟೌನ್ ಅಧ್ಯಕ್ಷ ಪ್ರಭು ಮೇಲೆ ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದಾರೆ, ಸುಳ್ಳು ಆರೋಪ ಮಾಡಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಜೆಡಿಎಸ್ ಟೌನ್ ಘಟಕದ ಅಧ್ಯಕ್ಷ ಪ್ರಭು ಮಾತನಾಡಿ, ಸರ್ಕಾರಿ ಭೂ ಅಕ್ರಮ ಖಾತೆ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರು ನನ್ನ ಹೆಸರು ಬಳಸಿರುವುದಕ್ಕೆ ಖಂಡಿಸುತ್ತೇನೆ. ಅಕ್ರಮ ಭೂಮಿ ಪರಭಾರೆಯಲ್ಲಿ ನನ್ನ ಯಾವುದೇ ಪಾತ್ರವಿಲ್ಲ ಎಂದರು.

ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೆ.ಜೆ.ದೇವರಾಜು ಅವರು ಸೂಕ್ತ ದಾಖಲೆ ಇಲ್ಲದೇ ನನ್ನ ವಿರುದ್ಧ ಆರೋಪ ಮಾಡಿರುವುದು ಖಂಡನೀಯ. ಈಗಿದ್ದರೂ ಚೊಟ್ಟನಹಳ್ಳಿ ಸರ್ವೇ ನಂ.130ರ ಅಕ್ರಮ ಖಾತೆ ಪ್ರಕರಣದಲ್ಲಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಅನಗತ್ಯವಾಗಿ ಆರೋಪ ಮಾಡಿರುವ ಅಧ್ಯಕ್ಷರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಖಾತೆ ಮಾಡಿಕೊಡಲು ಕಂದಾಯ ಇಲಾಖೆಗೆ ಯಾವುದೇ ಅರ್ಜಿ ಹಾಕಿಲ್ಲ. ಪ್ರಭು ಎಂಬ ಹೆಸರಿನವರು ನಮ್ಮ ಬಡಾವಣೆಯಲ್ಲಿ ಹಲವು ಮಂದಿ ಇದ್ದಾರೆ. ಆರೋಪದ ಬಗ್ಗೆ ಸೂಕ್ತ ದಾಖಲೆ ನೀಡಬೇಕು. ಇಲ್ಲದಿದ್ದರೆ ವಕೀಲರೊಂದಿಗೆ ಚರ್ಚಿಸಿ ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ ಎಂದರು.

ತಾಲೂಕಿನಲ್ಲಿ ಕಳೆದ ಆರು ತಿಂಗಳಲ್ಲಿ 100 ಎಕರೆಗೂ ಹೆಚ್ಚು ಸರ್ಕಾರಿ ಭೂಮಿ ಅಕ್ರಮವಾಗಿ ಪರಭಾರೆಯಾಗಿದೆ. ಮಾಜಿ ಶಾಸಕ ಕೆ.ಅನ್ನದಾನಿ ಅವರ ಎಡಬಲದವರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದಾರೆ. ಆದರೆ, ಅವರದೇ ಪಕ್ಷದ ಸಾದಿಕ್ ಪಾಷಾ ಎಂಬುವವರು ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಸಮಗ್ರ ತನಿಖೆ ನಡೆಯಬೇಕೆಂದು ಆಗ್ರಹಿಸಿದರು.

ಈ ವೇಳೆ ಪುರಸಭೆ ಸದಸ್ಯರಾದ ಎಂ.ಟಿ.ಪ್ರಶಾಂತ್, ಸಿದ್ದರಾಜು, ಟಿ.ನಂದಕುಮಾರ್, ನಾಗೇಶ್, ಮುಖಂಡರಾದ ಬೂವಳ್ಳಿ ಸದಾನಂದ್, ಶ್ರೀಧರ್, ಕಾಂತರಾಜು, ಮೊಹಬುಬ್ ಪಾಷಾ, ಆನಂದ್, ಕಂಬರಾಜು, ಸಿದ್ದಾಚಾರಿ, ಕಿಟ್ಟಿ ಇದ್ದರು.