ಕೇಜಿಗೆ ₹29ರಂತೆ ‘ಭಾರತ್ ಅಕ್ಕಿ’ ಮಾರಾಟ ಶುರು

| Published : Feb 07 2024, 01:47 AM IST

ಸಾರಾಂಶ

ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬಡಜನರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ‘ಭಾರತ್‌ ಅಕ್ಕಿ’ ಯೋಜನೆಯಡಿ ಕೆ.ಜಿ.ಗೆ 29 ರು.ನಂತೆ ಅಕ್ಕಿ ಮಾರಾಟ ಪ್ರಾರಂಭಿಸಿದ್ದು, ಗ್ರಾಹಕರಿಂದ ಭಾರೀ ಬೇಡಿಕೆ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬಡಜನರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ‘ಭಾರತ್‌ ಅಕ್ಕಿ’ ಯೋಜನೆಯಡಿ ಕೆ.ಜಿ.ಗೆ 29 ರು.ನಂತೆ ಅಕ್ಕಿ ಮಾರಾಟ ಪ್ರಾರಂಭಿಸಿದ್ದು, ಗ್ರಾಹಕರಿಂದ ಭಾರೀ ಬೇಡಿಕೆ ವ್ಯಕ್ತವಾಗಿದೆ.

ಮಂಗಳವಾರ ಈ ಯೋಜನೆಗೆ ಎಫ್‌ಸಿಐ ಅಧ್ಯಕ್ಷ ಭೂಪೇಂದ್ರ ಸಿಂಗ್‌ ಅವರು ಚಾಲನೆ ನೀಡಿದರು. ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳಿ (ನಾಫೆಡ್‌)ಯು ರೈತರಿಂದ ನೇರವಾಗಿ ಅಕ್ಕಿ ಖರೀದಿಸಿ ಕಡಿಮೆ ಬೆಲೆಯಲ್ಲಿ ಈ ಯೋಜನೆಯಡಿ ಅಕ್ಕಿ ಮಾರಾಟ ಮಾಡಲಿದೆ. 10 ಕೆ.ಜಿ. ಭಾರತ್‌ ಅಕ್ಕಿಗೆ 290 ರು.ನಂತೆ ಮಾರಾಟ ಮಾಡುತ್ತಿದ್ದು ಎಪಿಎಲ್‌, ಬಿಪಿಎಲ್‌, ಅಂತ್ಯೋದಯ ಸೇರಿದಂತೆ ಯಾವುದೇ ಪಡಿತರ ಚೀಟಿಯ ಅವಶ್ಯಕತೆ ಇಲ್ಲದೆ ಯಾರು ಬೇಕಾದರೂ ಈ ಅಕ್ಕಿಯನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯಾದ್ಯಂತ 25 ಸಂಚಾರಿ ವಾಹನಗಳಲ್ಲಿ (ಮೊಬೈಲ್‌ ವೆಹಿಕಲ್‌) ಅಕ್ಕಿ ಮಾರಾಟ ಮಾಡುತ್ತಿದ್ದು, ಬೆಂಗಳೂರಿನಲ್ಲಿ ಜನ ಸಂಖ್ಯೆ ಹೆಚ್ಚಾಗಿ ವಾಸವಿರುವಂತಹ 5 ಪ್ರದೇಶಗಳಲ್ಲಿ ಸಂಚಾರಿ ವಾಹನದ ಮೂಲಕ 29 ರು.ಗಳಿಗೆ ಅಕ್ಕಿ ಮಾರಾಟ ಮಾಡಲಾಗುತ್ತಿದೆ. ಇದರೊಂದಿಗೆ ಗೋಧಿಯನ್ನು ಕೆ.ಜಿ.ಗೆ 50 ರು., ಹೆಸರು ಕಾಳು 90 ರು., ತೊಗರಿ ಬೇಳೆ 60 ರು.ನಂತೆ ಮಾರಾಟ ಮಾಡಲಾಗುತ್ತಿದೆ. ಮಂಗಳವಾರದಿಂದಲೇ ರಿಲಯನ್ಸ್‌ ಸೂಪರ್‌ ಮಾರ್ಕೆಟ್‌ಗಳಲ್ಲಿಯೂ ಅಕ್ಕಿ ಲಭ್ಯವಾಗುತ್ತಿದೆ.

ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳಿ, ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳಿ ಹಾಗೂ ಕೇಂದ್ರೀಯ ಭಂಡಾರಗಳು ಮತ್ತು ಇ-ಕಾಮರ್ಸ್‌ ವೇದಿಕೆಗಳ ಮೂಲಕ ಅಕ್ಕಿ ಮಾರಾಟಕ್ಕೆ ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ ಚಿಲ್ಲರೆ ಮಾರುಕಟ್ಟೆಗೆ 5 ಲಕ್ಷ ಟನ್‌ಗಳಷ್ಟು ಅಕ್ಕಿಯನ್ನು ಬಿಡುಗಡೆ ಮಾಡಿರುವುದಾಗಿ ನಾಫೆಡ್‌ ಸಂಸ್ಥೆ ಮೂಲಗಳು ತಿಳಿಸಿವೆ. ಕಡಿಮೆ ಬೆಲೆಯಲ್ಲಿ 5 ಕೆ.ಜಿ. ಮತ್ತು 10 ಕೆ.ಜಿ.ಯ ಚೀಲದಲ್ಲಿ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿದ್ದು ಗ್ರಾಹಕರು ತಮ್ಮಮೊಬೈಲ್‌ ಸಂಖ್ಯೆಯನ್ನು ನಮೂದಿಸಿ ಅಕ್ಕಿ ಖರೀದಿಸಬಹುದು. ಇದರೊಂದಿಗೆ ಗೋಧಿ, ಹೆಸರುಕಾಳು, ತೊಗರಿ ಬೇಳೆಯನ್ನು ಸಹ ನಿಗದಿತ ದರ ಪಾವತಿಸಿ ಕೊಂಡುಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗ್ರಾಹಕರು ಸಂಚಾರಿ ವಾಹನದಲ್ಲಿ ಬಂದ 29 ರು.ಬೆಲೆಯ ಅಕ್ಕಿಯನ್ನು ಮುಗಿಬಿದ್ದು ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು. ಡಾಲರ್ಸ್‌ ಕಾಲೋನಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯೋಜನೆಗೆ ಚಾಲನೆ ಕೊಟ್ಟ ಬಳಿಕ ಎರಡ್ಮೂರು ವಾಹನಗಳಲ್ಲಿ ತುಂಬಲಾಗಿದ್ದ ಅಕ್ಕಿ ಕೆಲವೇ ನಿಮಿಷಗಳಲ್ಲಿ ಖಾಲಿಯಾಗಿತ್ತು. ಇದೇ ಪರಿಸ್ಥಿತಿ ಇತರ ಪ್ರದೇಶಗಳಲ್ಲೂ ಇದ್ದು, ಪ್ರತಿಯೊಬ್ಬರೂ ಅಕ್ಕಿ ಖರೀದಿಸುತ್ತಿದ್ದರು. ರಿಲಯನ್ಸ್‌ ಸ್ಮಾರ್ಟ್‌ ಬಜಾರ್‌ನಲ್ಲೂ 29 ರು.ಬೆಲೆಗೆ ಅಕ್ಕಿ ಖರೀದಿ ಭರಾಟೆ ಜೋರಾಗಿತ್ತು.