ಸಾರಾಂಶ
ವೇತನ ಹೆಚ್ಚಳ ಇನ್ನಿತರ ಬೇಡಿಕೆಗಳ ಬಗ್ಗೆ ಚರ್ಚಿಸಲಾಗಿದ್ದು ಮುಂದಿನ ದಿನಗಳಲ್ಲಿ ಈಡೇರಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಸಂಘಕ್ಕೆ ಭರವಸೆ ನೀಡಿದೆ.
ಕನ್ನಡಪ್ರಭವಾರ್ತೆ ಪುತ್ತೂರು
ರಾಜ್ಯದಲ್ಲಿ ಬಿಸಿಯೂಟ ಯೋಜನೆ ಪ್ರಾರಂಭವಾದ ಬಳಿಕ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುವ ಅಡುಗೆ ನೌಕರರನ್ನು ನಿವೃತ್ತಿ ಹೆಸರಿನಲ್ಲಿ ಕಳೆದ 2022 ರಿಂದ ಸುಮಾರು 11,500 ಕ್ಕೂ ಹೆಚ್ಚಿನ ನೌಕರರನ್ನು ಕೆಲಸದಿಂದ ಕೈ ಬಿಡಲಾಗಿದೆ. ಕಳೆದ 23 ವರ್ಷದಿಂದಲೂ ಸೇವೆ ಸಲ್ಲಿಸಿದ ಈ ನೌಕರರ ಅಮಾನೀಯವಾಗಿ ಬಿಡುಗಡೆ ಮಾಡಿದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ (ಸಿಐಟಿಯು)ನಿರಂತರ ಹೋರಾಟ ನಡೆಸುತ್ತಲೇ ಬಂದಿತ್ತು.ಆದರೆ ಇಂದು ಅತ್ಯಂತ ಕಡುಬಡತನದ ಜೀವನ ನಡೆಸುತ್ತಿರುವ ನಿವೃತ್ತಿ ಹೊಂದಿದ ಮತ್ತು ನಿವೃತ್ತಿ ಹೊಂದುವ ಈ ನೌಕರರಿಗೆ ಇಡಿಗಂಟು ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆ ಅಕ್ಷರ ದಾಸೋಹ ನೌಕರರ ಸಂಘದ ಸಂಘಟಿತ ಹೋರಾಟದ ಫಲಶ್ರುತಿಯಾಗಿದೆ ಎಂದು ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ (ಸಿಐಟಿಯು) ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ (ಸಿಐಟಿಯು) ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷೆ ಸುದಾ ಎಕ್ಕಡ್ಕ, ಕಾರ್ಯದರ್ಶಿ ರಂಜಿತ ಕೋಡಿಂಬಾಡಿ, ಖಜಾಂಜಿ ಶ್ವೇತ ಮತ್ತು ಸಂಘದ ಕಾನೂನು ಸಲಹೆಗಾರ ಬಿ.ಎಂ.ಭಟ್ ಅವರು ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ನೇತೃತ್ವದ ಸಂಘಟಿತ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯವಾಗಿದೆ.ಕಳೆದ 3- 4 ವರ್ಷಗಳಿಂದಲೂ ವಯಸ್ಸಿನ ಆಧಾರದಲ್ಲಿ ನಿವೃತ್ತಿ ಸೌಲಭ್ಯ ಕೊಡಬೇಕೆಂದು ಮತ್ತು ನಿವೃತ್ತ ಅಡುಗೆಯವರಿಗೆ ಒಂದು ಲಕ್ಷ ರು. ಇಡಿಗಂಟು ನೀಡಬೇಕೆಂದು ಹಲವಾರು ಬಾರಿ ಸರ್ಕಾರಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡರೂ, ಹಲವಾರು ಬಾರಿ ಹೋರಾಟ ನಡೆಸಿದಾಗ ಮಾತುಕತೆ ನಡೆಸಿದರೂ ಇದರ ಬಗ್ಗೆ ಸರ್ಕಾರವಾಗಲಿ, ಶಿಕ್ಷಣ ಇಲಾಖೆಯಾಗಲಿ, ಹೆಚ್ಚಿನ ಮುತುವರ್ಜಿ ವಹಿಸಿರಲಿಲ್ಲ ಎಂದು ಜುಲೈ 15, 2024 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ಇಡಿಗಂಟು ಜಾರಿಗಾಗಿ, ವೇತನ ಹೆಚ್ಚಳಕ್ಕಾಗಿ, ಸಾದಿಲ್ವಾರು ಜಂಟಿ ಖಾತೆ ಬದಲಾವಣೆ ಕುರಿತು ಹಾಗೂ ಇನ್ನಿತರ ಬೇಡಿಕೆಗಳಿಗಾಗಿ ಅನಿರ್ಧಿಷ್ಟಾವಧಿ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು.ಪುತ್ತೂರಲ್ಲೂ ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ನೀಡಿ ಒತ್ತಾಯಿಸಲಾಗಿತ್ತು. ನಮ್ಮ ಈ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ 16 ಜು. 2024 ಸಂಘಟನೆಯ ಮುಖಂಡರೊಂದಿಗೆ ಆರ್ಥಿಕ ಇಲಾಖೆಯ ಮುಖ್ಯಕಾರ್ಯದರ್ಶಿಗಳು ಮಾತುಕತೆ
ನಡೆಸಿ, ಅದರ ಫಲವಾಗಿ ಸರ್ಕಾರ ಅಡುಗೆ ಸಿಬ್ಬಂದಿಯವರು 15 ವರ್ಷ ಹಾಗೂ ಅದಕ್ಕೂ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿ 60 ವರ್ಷ ಪೂರ್ಣಗೊಂಡ ನಂತರ ಕರ್ತವ್ಯದಿಂದ ಬಿಡುಗಡೆಗೊಳ್ಳುವ ಅಡುಗೆ ನೌಕರರಿಗೆ 40,000 ಮತ್ತು ೫ ವರ್ಷ ಮೇಲ್ಪಟ್ಟು ಹಾಗೂ 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿ 60 ವರ್ಷ ಪೂರ್ಣಗೊಂಡ ನಂತರ ಕರ್ತವ್ಯದಿಂದ ಬಿಡುಗಡೆಗೊಳ್ಳುವ ಅಡುಗೆ ನೌಕರರಿಗೆ 30, 000 ಇಡಿಗಂಟು ನೀಡಲು ಒಪ್ಪಿಗೆ ನೀಡಿ ಅಧಿಸೂಚನೆ ಹೊರಡಿಸಿದೆ.ವೇತನ ಹೆಚ್ಚಳ ಇನ್ನಿತರ ಬೇಡಿಕೆಗಳ ಬಗ್ಗೆ ಚರ್ಚಿಸಲಾಗಿದ್ದು ಮುಂದಿನ ದಿನಗಳಲ್ಲಿ ಈಡೇರಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಸಂಘಕ್ಕೆ ಭರವಸೆ ನೀಡಿದೆ. ಈ ಭರವಸೆ ಈಡೇರದಿದ್ದಲ್ಲಿ ಮುಂದೆ ಸಮರಶೀಲ ಹೋರಾಟ ಮುಂದುವರಿಸಲಿದ್ದೇವೆ ಎಂದು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.