ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಬೆಂಗಳೂರಿನಲ್ಲಿ ಕನ್ನಡ ನಾಮ ಫಲಕ ಕಡ್ಡಾಯವಾಗಿ ಅಳವಡಿಸುವಂತೆ ಶಾಂತಿಯುತ ಹೋರಾಟ ಕೈಕೊಂಡ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಸೇರಿದಂತೆ ಹಲವು ಕಾರ್ಯಕರ್ತರನ್ನು ಹಾಗೂ ವಿಜಯಪುರ ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ ಅವರನ್ನು ಬಂಧಿಸಿರುವುದು ಖಂಡನೀಯ. ಸರ್ಕಾರದ ಕನ್ನಡ ವಿರೋಧಿ ನೀತಿ ನಾವು ಸಹಿಸಲು ಸಾಧ್ಯವಿಲ್ಲ ಎಂದು ಕರವೇ ನಗರ ಘಟಕದ ಅಧ್ಯಕ್ಷ ಫಯಾಜ್ ಕಲಾದಗಿ ಆಗ್ರಹಿಸಿದರು.ಕನ್ನಡ ನಾಮ ಫಲಕ ಹೋರಾಟದಲ್ಲಿ ಪಾಲ್ಗೊಂಡ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹಾಗೂ ಕಾರ್ಯಕರ್ತರ ಬಂಧನ ಖಂಡಿಸಿ ಹಾಗೂ ಬಂಧಿತರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ನಗರದ ಗಾಂಧಿ ವೃತ್ತದಲ್ಲಿ ಧರಣಿ ನಡೆಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಕನ್ನಡಿಗರನ್ನು ಕೆಣಕಿದ ರಾಜ್ಯ ಸರ್ಕಾರದ ಹುನ್ನಾರದ ಸಲ್ಲದು. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಬಂಧಿತರನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕರವೇ ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ದಸ್ತಗೀರ ಸಾಲೋಟಗಿ ಮಾತನಾಡಿ, ಸರ್ಕಾರ ಕರವೇ ವಿರುದ್ಧ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಕರವೇಯಲ್ಲಿ ಪಕ್ಷಾತೀತ ಎಲ್ಲ ಧರ್ಮಿಯರು ಇರುವುದನ್ನು ಸರ್ಕಾರ ಗಮನಿಸಬೇಕು. ಮಳಿಗೆಗಳ ಮೇಲೆ ಮೇಲೆ ಕನ್ನಡ ನಾಮಫಲಕ ಅಳವಡಿಸಿ ಕನ್ನಡ ಪ್ರೇಮ ಮೆರೆಯಬೇಕು ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಬಿಜಾಪೂರ ಮಾತನಾಡಿ, ಕನ್ನಡ ನಾಮಫಲಕ ನಮ್ಮ ಹೆಮ್ಮೆಯ ಸಂಗತಿ. ಕನ್ನಡ ನಾಮಫಲಕಗಳಿಗಾಗಿ ಹೋರಾಟ ಮಾಡುವುದು ತಪ್ಪೇ? ಈ ಹೋರಾಟ ನಿರತ ಹೋರಾಟಗಾರರನ್ನು ಬಂಧಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಅಶೋಕ ನಾವಿ, ಬಸವರಾಜ ಚಪ್ರೆ, ದಯಾನಂದ ಸಾವಳಗಿ, ರವಿ ಮುರಗೋಡ, ಮನೋಹರ ತಾಜವ, ಬಸವರಾಜ ಬಿ.ಕೆ, ರಜಾಕ ಕಾಖಂಡಕಿ, ಆಸೀಫ ಪೀರವಾಲೆ, ತಾಜುದ್ದೀನ ಖಲಿಪಾ, ಸಂತೋಷ ಮುದೋಳ, ಡಿ.ಎಸ್.ಪೀರಜಾಧೆ, ಕೆ.ಕೆ.ಬನಹಟ್ಟಿ ಮುಂತಾದವರು ಇದ್ದರು.