ಸರ್ಕಾರದಿಂದ ಬಡವ, ರೈತರ ವಿರೋಧಿ ನೀತಿ: ಅಪ್ಪಚ್ಚು ರಂಜನ್

| Published : Aug 31 2024, 01:36 AM IST

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರ ಅರಣ್ಯ ಇಲಾಖೆ ಮೂಲಕ ಹೊರಡಿಸುತ್ತಿರುವ ಸುತ್ತೋಲೆಗಳಿಂದ ಜನರ ಬದುಕು ಬೀದಿಗೆ ಬರುವಂತಾಗಿದೆ. ಸರ್ಕಾರ ರೈತರು ಮತ್ತು ಬಡಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಜ್ಯ ಕಾಂಗ್ರೆಸ್ ಸರ್ಕಾರ ಅರಣ್ಯ ಇಲಾಖೆ ಮೂಲಕ ಹೊರಡಿಸುತ್ತಿರುವ ಸುತ್ತೋಲೆಗಳಿಂದ ಜನರ ಬದುಕು ಬೀದಿಗೆ ಬರುವಂತಾಗಿದೆ. ಸರ್ಕಾರ ರೈತರು ಮತ್ತು ಬಡಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜ.೧ರಂದು ವನ್ಯ ಜೀವಿ ಅಂಗಾಂಗಗಳ್ನು ಸರ್ಕಾರಕ್ಕೆ ಮರಳಿಸುವಂತೆ, ತಪ್ಪಿದಲ್ಲಿ ಕೇಸ್ ದಾಖಲಿಸುವುದಾಗಿ ಸುತೋಲೆ ಹೊರಡಿಸಿತ್ತು. ಕೊಡಗು ಜಿಲ್ಲೆಯ ಹಲವಾರು ದೇವಾಲಯಗಳಲ್ಲಿ ಜಿಂಕೆ ಕೊಂಬು, ನವಿಲು ಗರಿಗಳನ್ನು ಇಟ್ಟುಕೊಂಡಿದ್ದು, ನೂರಾರು ವರ್ಷಗಳಿಂದ ಅವುಗಳನ್ನು ಹಬ್ಬಗಳಲ್ಲಿ ಬಳಸಲಾಗುತ್ತಿದೆ. ಇದು ಜಿಲ್ಲೆಯ ಜನರ ನಂಬಿಕೆಯ ಪ್ರತೀಕವೂ ಆಗಿದ್ದು, ೫೨ ವರ್ಷಗಳಿಂದ ಯಾವುದೇ ಸರ್ಕಾರ ಇದರ ಬಗ್ಗೆ ಚಕಾರ ಎತ್ತಿರಲಿಲ್ಲ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಜನರ ನಂಬಿಕೆಗೆ ಘಾಸಿಗೊಳಿಸುವ ಕೆಲಸ ನಡೆಯುತ್ತಿದೆ. ಅದರೊಂದಿಗೆ ಕಾಫಿ ತೋಟಗಳಲ್ಲಿ ಇರುವ ಮರಗಳ ಗಣತಿ ನಡೆಸುವ ಸುತ್ತೋಲೆ ಹೊರಡಿಸಿದೆ. ತೋಟದ ಮಾಲೀಕರು ನೆಟ್ಟು ಬೆಳೆಸಿದ ಮರಗಳ ಮೇಲೆ ಸರ್ಕಾರ ಹಕ್ಕು ಸ್ಥಾಪಿಸುವ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದರು.

ಸಿ ಮತ್ತು ಡಿ ಭೂಮಿಯನ್ನು ಸರ್ಕಾರಕ್ಕೆ ಹಿಂದಿರುಗಿಸುವಂತೆ ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಈ ಭೂಮಿಯಲ್ಲಿ ೬೦ ವರ್ಷಗಳಿಂದಲೂ ಜನರು ಮನೆ ಕಟ್ಟಿಕೊಂಡು ಕಾಫಿ, ಏಲಕ್ಕಿ ಬೆಳೆಸುವ ಮೂಲಕ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರದ ಸುತ್ತೋಲೆಗಳಿಂದ ಜನರ ಬದುಕು ಬೀದಿಗೆ ಬರುವಂತಾಗಿದೆ. ರಾಜ್ಯ ಸರ್ಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭ ಅರಣ್ಯ ಇಲಾಖೆ ವಶದಲ್ಲಿದ್ದ ೨.೫೮ ಲಕ್ಷ ಹೆಕ್ಟೇರ್ ಸಿ ಮತ್ತು ಡಿ ಭೂಮಿಯನ್ನು ಅರಣ್ಯ ಇಲಾಖೆ ಬಳಿಯಿಂದ ಹಿಂಪಡೆದಿತ್ತು ಎಂದರು.

ಭಷ್ಟಾಚಾರ ತನಿಖೆಯಾಗಲಿ:

ಮುಖ್ಯಮಂತ್ರಿಗಳು ತಮ್ಮ ಪತ್ನಿಯ ಹೆಸರಲ್ಲಿ ೧೪ ನಿವೇಶನಗಳನ್ನು ಮೈಸೂರು ವಿಜಯ ನಗರದಲ್ಲಿ ಪಡೆದಿದ್ದಾರೆ. ಈ ಸೈಟ್‌ಗಳ ಮೌಲ್ಯ ೫ ಸಾವಿರ ಕೋಟಿ ರು.ಗಳಾಗಿದೆ. ಸಚಿವ ಪ್ರಿಯಾಂಕ ಖರ್ಗೆ ಹೆಸರಿಗೆ ೫ ಎಕರೆ ಭೂಮಿ ಹಸ್ತಾಂತರ ಮಾಡಲಾಗಿದ್ದು, ಈ ಭೂಮಿ ೫ ಕೋಟಿ ರು. ಬೆಲೆ ಬಾಳುತ್ತದೆ. ಬೋಗಸ್ ದಾಖಲೆಗಳನ್ನು ಸೃಷ್ಟಿಸಿಕೊಂಡು ರಾಜ್ಯ ಸರ್ಕಾರದಿಂದ ಭೂಮಿ ಕಬಳಿಸುವ ಕೆಲಸ ಮಾಡಲಾಗಿದೆ. ವಾಲ್ಮಿಕಿ ನಿಗಮದ ಹಣ ದುರುಪಯೋಗ ಸಹಿತ ಎಲ್ಲ ಹಗರಣಗಳ ಬಗ್ಗೆ ತನಿಖೆಯಾಗಬೇಕು ಎಂದು ಅಪ್ಪಚ್ಚು ರಂಜನ್ ಆಗ್ರಹಿಸಿದರು.ಸದಸ್ಯತ್ವ ಅಭಿಯಾನ:

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಸೆ.೧ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಪ್ರತಿ ೫ ವರ್ಷಗಳಿಗೊಮ್ಮೆ ಬಿಜೆಪಿ ತನ್ನ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದು, ವಿಶ್ವದಲ್ಲೇ ೧೮ ಕೋಟಿ ಸದಸ್ಯರನ್ನು ಹೊಂದಿರುವ ಪಕ್ಷವಾಗಿ ಬಿಜೆಪಿ ಹೊರ ಹೊಮ್ಮಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೂಚನೆಯಂತೆ ಈ ಬಾರಿಯ ಸದಸ್ಯತ್ವ ಅಭಿಯಾನದಲ್ಲಿ ಈ ಗುರಿಯನ್ನು ಶೇ.೩೦ರಿಂದ ೪೦ಕ್ಕೆ ಏರಿಕೆ ಮಾಡುವ ಗುರಿ ಹೊಂದಲಾಗಿದೆ. ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ೬೦ ಸಾವಿರ ಮಂದಿ ಬಿಜೆಪಿ ಸದಸ್ಯತ್ವ ಹೊಂದಿದ್ದು, ಇದನ್ನು ದ್ವಿಗುಣ ಮಾಡುವ ಗುರಿ ಹೊಂದಲಾಗಿದೆ. ೮೮೦೦೦೦೨೦೨೪ ಮೊಬೈಲ್ ಸಂಖ್ಯೆಗೆ ಮಿಸ್ ಕಾಲ್ ಮಾಡುವ ಮೂಲಕ ಬಿಜೆಪಿ ಪಕ್ಷ ಸದಸ್ಯರಾಗಬಹುದು. ಪ್ರತಿ ಸದಸ್ಯ ಕನಿಷ್ಟ ೧೦೦ ಮಂದಿಯನ್ನು ಸದಸ್ಯರನ್ನಾಗಿಸಿದರೆ ಅವರನ್ನು ಸಕ್ರಿಯ ಕಾರ್ಯಕರ್ತರು ಎಂದು ಗುರುತಿಸಲಾಗುತ್ತದೆ ಎಂದರು.ಪಕ್ಷದ ಪ್ರಮುಖರಾದ ತಳೂರು ಕಿಶೋರ್ ಕುಮಾರ್, ಮಹೇಶ್ ಜೈನಿ, ಬಿ.ಕೆ. ಅರುಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.