ರಾಜ್ಯವ್ಯಾಪಿ ಭಾರಿ ಮಳೆಯಿಂದ ಎದುರಾಗಿರುವ ಅತಿವೃಷ್ಟಿ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ: ಶಾಸಕರ ಆರೋಪ

| Published : Aug 01 2024, 02:00 AM IST / Updated: Aug 01 2024, 01:29 PM IST

ರಾಜ್ಯವ್ಯಾಪಿ ಭಾರಿ ಮಳೆಯಿಂದ ಎದುರಾಗಿರುವ ಅತಿವೃಷ್ಟಿ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ: ಶಾಸಕರ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಜಿಲ್ಲೆ ಸೇರಿದಂತೆ ರಾಜ್ಯವ್ಯಾಪಿ ಭಾರಿ ಮಳೆಯಿಂದ ಎದುರಾಗಿರುವ ಪರಿಸ್ಥಿತಿ ನಿರ್ವಹಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲಗೊಂಡಿದ್ದು, ಜಿಲ್ಲೆಯ ಜನರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿಯೂ ಜಿಲ್ಲೆಯ ಶಾಸಕರಿಬ್ಬರು ಸೋತಿದ್ದಾರೆ - ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್  

  ಮಡಿಕೇರಿ : ಕೊಡಗು ಜಿಲ್ಲೆ ಸೇರಿದಂತೆ ರಾಜ್ಯವ್ಯಾಪಿ ಭಾರಿ ಮಳೆಯಿಂದ ಎದುರಾಗಿರುವ ಪರಿಸ್ಥಿತಿ ನಿರ್ವಹಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲಗೊಂಡಿದ್ದು, ಜಿಲ್ಲೆಯ ಜನರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿಯೂ ಜಿಲ್ಲೆಯ ಶಾಸಕರಿಬ್ಬರು ಸೋತಿದ್ದಾರೆ ಎಂದು ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಆರೋಪಿಸಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ‌ಮಡಿಕೇರಿ ನಗರ ಮಂಡಲ‌ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ರಾಜ್ಯ ಸರ್ಕಾರದ ಜನವಿರೋಧಿ‌ ಸುತ್ತೋಲೆ, ನೀತಿ ಹಾಗೂ ಹಗರಣಗಳ ವಿರುದ್ಧ ಖಂಡನಾ ನಿರ್ಣಯ ಮಂಡಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮಳೆಯಿಂದ ಅಪಾರ ನಷ್ಟ ಸಂಭವಿಸುತ್ತಿದೆ. ಆದರೆ, ಸರಕಾರ ಯಾವುದೇ ಪರಿಹಾರೋಪಾಯ ಕೈಗೊಂಡಿಲ್ಲ. 2018ರಲ್ಲಿ ಪ್ರಾಕೃತಿಕ‌ ವಿಕೋಪ ಸಂದರ್ಭ ತ್ವರಿತ ಸ್ಪಂದನ ನೀಡಲಾಗಿತ್ತು. ಅನಂತರ ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೂರು ದಿನದಲ್ಲಿ ರಾಜ್ಯ ವ್ಯಾಪಿ ಸಂಭವಿಸಿದ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿಯೂ ಸಮಸ್ಯೆಗೊಳದವರಿಗೆ ಸಮರ್ಪಕ ಹಾಗೂ ತ್ವರಿತವಾಗಿ ಪರಿಹಾರ ನೀಡಿ ನೊಂದವರ ಕಣ್ಣೀರೊರೆಸುವ ಕೆಲಸವಾಗಿದೆ. ಇಂದಿನ ಸರ್ಕಾರ ಎಲ್ಲವನ್ನು ಮರೆತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮನೆ ಕುಸಿದ ಪ್ರಕರಣಕ್ಕೆ ಕೇವಲ ರು. 1.20 ಲಕ್ಷ ನೀಡಿ ಮೌನ ವಹಿಸಿದೆ. ಪರಿಹಾರ ನೀಡುವ ಬದಲು ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ನಾಯಕರು ಬೊಟ್ಟು ಮಾಡಿ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಅತಿವೃಷ್ಟಿ ಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫವಾಗಿದೆ. ಕೊಡಗು ಜಿಲ್ಲೆಯ ಶಾಸಕರು ಜಿಲ್ಲೆಯ ಪರ ಕಾಳಜಿ ವಹಿಸಿಲ್ಲ‌ ಎಂದು ದೂರಿದರು.

ಮಾಜಿ ಸ್ಪೀಕರ್‌ ಕೆ.ಜಿ.ಬೋಪಯ್ಯ ಮಾತನಾಡಿ, ಜಿಲ್ಲೆಯಲ್ಲಿ ಪಾರಂಪರಿಕವಾಗಿ ಬಂದ ಅರಣ್ಯ ವನ್ಯಜೀವಿ ಉತ್ಪನ್ನ ಹಿಂದಿರುಗಿಸುವುದು, ಮರಗಳ ಹಕ್ಕು ಕಸಿಯುವ ಯತ್ನ ಸುತ್ತೋಲೆ ಹಿಂಪಡೆಯಬೇಕೆಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಪರಿಶಿಷ್ಟ ವರ್ಗಕ್ಕೆ‌ ಮೀಸಲಿಟ್ಟಿದ್ದ ರು. 172 ಕೋಟಿ ಹಣ ಅಕ್ರಮ ವರ್ಗಾವಣೆ ಮೂಲಕ ಸರ್ಕಾರಿ ಖಜಾನೆ ಲೂಟಿ ಮಾಡಿ ತೆಲಂಗಾಣ ಚುನಾವಣೆಗೆ ಬಳಸಿಕೊಂಡಿರುವುದು ಖಾತ್ರಿಯಾಗಿದೆ‌. ಹಣಕಾಸು ಸಚಿವರಾಗಿರುವ ಸಿದ್ದರಾಮಯ್ಯ ಗಮನಕ್ಕೆ ಬಾರದೆ ಈ ಅಕ್ರಮ‌ ನಡೆದಿರಲು ಸಾಧ್ಯವೇ ಇಲ್ಲ‌. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿಯೂ ಸಾವಿರಾರು ಕೋಟಿ ರು. ಅಕ್ರಮ ನಡೆದಿದ್ದು, ಸದನದಲ್ಲಿ‌ ಈ ಬಗ್ಗೆ ಪ್ರಸ್ತಾಪಿಸಲು ಅವಕಾಶ ನೀಡಿಲ್ಲ. ಅಕ್ರಮ‌ ಮುಚ್ಚಿ ಹಾಕುವ ಕೆಲಸ ನಡೆದಿದೆ ಎಂದು ಆರೋಪಿಸಿದರು.

ಮಾಜಿ ಶಾಸಕ‌ ಮಂಡೇಪಂಡ ಅಪ್ಪಚ್ಚು ರಂಜನ್‌ ಮಾತನಾಡಿ, ಮೋದಿ ಪ್ರಧಾನಿಯಾದ ನಂತರ ಭಾರತ ವಿಶ್ವಗುರುವಾಗಿದೆ. ಆರ್ಥಿಕ ಪರಿಸ್ಥಿತಿ ಸುಧಾರಣೆ ಕಂಡು ಪ್ರಗತಿಯಲ್ಲಿದೆ. ಅನಿವಾಸಿ ಭಾರತೀಯರ ರಕ್ಷಣೆ ದೊರೆಯುತ್ತಿದೆ. ದೇಶ ಸದೃಢಗೊಂಡರೆ ಇಲ್ಲಿನ ನಾಗರಿಕರಿಗೆ ಗೌರವ ದೊರೆಯುತ್ತದೆ. ಈ ನಿಟ್ಟಿನ ಕೆಲಸ ಮೋದಿ ಮಾಡುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರದ ಪ್ರಭಾವಿ ಸಚಿವರೊಬ್ಬರು ಗಾಳಿಬೀಡು ಗ್ರಾಮದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಭೂಪರಿವರ್ತನೆ ಮಾಡಿದ್ದಾರೆ. ಈ ಹಗರಣ ಸದ್ಯದಲ್ಲಿಯೇ ಹೊರಬರಲಿದೆ ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ‌ ಅಧ್ಯಕ್ಷ ನಾಪಂಡ ರವಿ‌ ಕಾಳಪ್ಪ ಮಾತನಾಡಿ, ಪಕ್ಷ ಸಂಘಟನೆಗೆ ಮಂಡಲಗಳ ಸಹಕಾರ ಅತೀ ಮುಖ್ಯ ಎಂದರು.

ನಗರಾಧ್ಯಕ್ಷ ಉಮೇಶ್ ಸುಬ್ರಮಣಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಜವಾಬ್ದಾರಿ ಹಂಚಿಕೆಯಿಂದ ಪಕ್ಷ ಮತ್ತಷ್ಟು ಬಲವಾಗುತ್ತದೆ. ಎಸ್.ಟಿ ಮತ್ತು ಅಲ್ಪಸಂಖ್ಯಾತ ಮೋರ್ಚಾ ಹೊರತುಪಡಿಸಿ ಉಳಿದೆಲ್ಲ ಮೋರ್ಚಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಮೂರನೇ ಬಾರಿ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಅವರನ್ನು ಅಭಿನಂದಿಸುವ ನಿರ್ಣಯವನ್ನು ಜಿಲ್ಲಾ ವಕ್ತಾರ ಬಿ.ಕೆ. ಅರುಣ್‌ ಕುಮಾರ್ ಮಂಡಿಸಿದರು‌. ಕಾರ್ಯದರ್ಶಿ ಪ್ರಶಾಂತ್ ಭೀಮಯ್ಯ ಅನುಮೋದಿಸಿದರು. ಕೆ.ಜಿ. ಬೋಪಯ್ಯ ಮಂಡಿಸಿದ ನಿರ್ಣಯಕ್ಕೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನುಮೋದನೆ ನೀಡಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮನು ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್ ಭೀಮಯ್ಯ, ಕನ್ನಿಕಾ, ಖಜಾಂಚಿ ಕನ್ನಂಡ ಸಂಪತ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಎಂ. ರವಿ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್ ಕಾರೇರ ಕವನ್‌ ಕಾವೇರಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.