ಸಾರಾಂಶ
ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅಗತ್ಯ ದಾಖಲೆ ಪಡೆಯಲು ತೀವ್ರ ಸಮಸ್ಯೆ ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕರ್ನಾಟಕದಾದ್ಯಂತ ಗ್ರಾಮ ಆಡಳಿತಾಧಿಕಾರಿಗಳ ಸಂಘದಿಂದ ಫೆ.೧೦ರಿಂದ ತಮ್ಮ ಬೇಡಿಕೆಗಳ ಈಡೇರಿಗೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದಾರೆ. ಐದು ದಿನಗಳಿಂದ ಮುಷ್ಕರ ನಡೆಸುತ್ತಿದ್ದರೂ ಸರ್ಕಾರ ಗಮನಹರಿಸದೇ ನಿರ್ಲಕ್ಷ್ಯ ವಹಿಸಿದೆ. ಪ್ರತಿನಿತ್ಯ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಹಲವಾರು ದಾಖಲೆ ಪಡೆಯಲು ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ವಿದ್ಯಾರ್ಥಿಗಳು, ರೈತರ ಬದುಕಿನೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಆರೋಪಿಸಿದರು.ಶುಕ್ರವಾರ ತಾಲೂಕು ಕಚೇರಿ ಮುಂಭಾಗ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಮುಷ್ಕರ ಹಿನ್ನೆಲೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಮನವಿ ಅರ್ಪಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಅಗತ್ಯ ದಾಖಲೆ ಪಡೆಯಲು ಸಾಧ್ಯವಾಗುತ್ತಿಲ್ಲ. ಕೆಲವು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲಿದ್ದು, ಅವರಿಗೂ ಜಾತಿ, ಆದಾಯ ಪ್ರಮಾಣ ಪತ್ರ ದೊರೆಯುತ್ತಿಲ್ಲ. ಗ್ರಾಮ ಆಡಳಿತಾಧಿಕಾರಿಗಳು ಕೈಗೆ ಸಿಕ್ಕರೂ ಈ ಬಗ್ಗೆ ಕೇಳಿದರೆ ಮುಷ್ಕರ ನಡೆಸುತ್ತಿದ್ದೇವೆ ಎಂದು ಹೇಳುತ್ತಾರೆ. ಇದರಿಂದ ಸಮಸ್ಯೆ ಹೆಚ್ಚುತ್ತಿದೆ ಎಂದರು.
ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರಕ್ಕೆ ರಾಜ್ಯ ವಿಶ್ವಕರ್ಮ ಪರಿಷತ್ತು ರಾಜ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್, ಬಿ.ಫರೀದ್ ಖಾನ್, ತಾಲೂಕು ಆಫ್ ಅಧ್ಯಕ್ಷ ಪಾಪಣ್ಣ, ಓಬಳೇಶ್, ರೈತ ಮುಖಂಡ ಹನುಮಂತ ರೆಡ್ಡಿ, ಒ.ಟಿ. ತಿಪ್ಪೇಸ್ವಾಮಿ, ಚನ್ನಕೇಶವ, ಬಸವರಾಜು ಮುಂತಾದವರು ಉಪಸ್ಥಿತರಿದ್ದರು.ತಾಲೂಕು ಗ್ರಾಮ ಆಡಳಿತಾಧಿಕಕಾರಿ ಸಂಘದ ಅಧ್ಯಕ್ಷ ಎಂ.ಪ್ರಕಾಶ್ ಮಾತನಾಡಿ, ರಾಜ್ಯ ಸಂಘದ ಆದೇಶದ ಮೇರೆಗೆ ಧರಣಿ ನಡೆಸುತ್ತಿದ್ದೇವೆ. ಗ್ರಾಮ ಆಡಳಿತಾಧಿಕಾರಿಗಳು ಮೇಲೆ ಪ್ರತಿನಿತ್ಯ ಕೆಲಸದ ಹೊರೆ ಹೆಚ್ಚುತ್ತಿದೆ. ಪ್ರತಿ ಹಂತದಲ್ಲೂ ಗ್ರಾಮ ಆಡಳಿತಾಧಿಕಾರಿಗಳು ಅನಿರ್ವಾಯವಾಗಿ ಕಾರ್ಯನಿರ್ವಹಿಸುವ ಪರಿಸ್ಥಿತಿ ಉಂಟಾಗಿದೆ. ಸರ್ಕಾರದ ಅನೇಕ ಸುತ್ತೋಲೆಗಳು ಗ್ರಾಮ ಆಡಳಿತಾಧಿಕಾರಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿವೆ. ದಕ್ಷತೆ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೂ ಅನಗತ್ಯ ಆರೋಪಗಳು ಬರುತ್ತಿವೆ. ಭದ್ರತೆಯೇ ಇಲ್ಲವಾಗಿದೆ. ಆದ್ದರಿಂದ ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳಿಗೆ ನಿರ್ದಿಷ್ಟ ಅವಧಿಯಲ್ಲಿ ಅವಶ್ಯವಿರುವ ಕೆಲಸ ಕಾರ್ಯಗಳಿಗೆ ಮಾತ್ರ ಅವಕಾಶ ಮಾಡಿಕೊಡಬೇಕೆಂದು ಪ್ರತಿಭಟನೆ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದರು.
ತಾಲೂಕಿನ ೫೦ಕ್ಕೂ ಹೆಚ್ಚು ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಸಹಾಯಕರು ಪ್ರತಿನಿತ್ಯ ಮುಷ್ಕರದಲ್ಲಿ ಭಾಗವಹಿಸುತ್ತಿದ್ದಾರೆ. ವಿವಿಧ ಇಲಾಖೆಗಳ ನೌಕರರೂ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆಂದರು.