ಜಾನುವಾರು ರಕ್ಷಣೆಗೆ ಸರ್ಕಾರದ ಹಿಂದೇಟು ಸರಿಯಲ್ಲ: ಜಪಾನಂದ ಶ್ರೀ

| Published : Feb 09 2024, 01:49 AM IST

ಸಾರಾಂಶ

ಚಳ್ಳಕೆರೆ ನಗರದ ಹೊರವಲಯದ ಅಜ್ಜಯ್ಯಗುಡಿ ಬಳಿ ಇರುವ ದೇವರ ಎತ್ತುಗಳಿಗೆ ಜಪಾನಂದ ಸ್ವಾಮೀಜಿ ಮೇವು ವಿತರಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲೂಕಿನ ದೇವರ ಎತ್ತುಗಳೂ ಸೇರಿದಂತೆ ಬಹುತೇಕ ಎಲ್ಲಾ ಜಾನುವಾರುಗಳು ಹಸಿವು, ಬಾಯಾರಿಕೆಯಿಂದ ತಲ್ಲಣಿಸುತ್ತಿದ್ದು, ಸರ್ಕಾರ ಹೆಸರಿಗಷ್ಟೇ ಗೋಶಾಲೆ ಪ್ರಾರಂಭಿಸಿ ಬಹುತೇಕ ಜಾನುವಾರುಗಳಿಗೆ ಮೇವು ನೀರಿಲ್ಲದಂತೆ ಮಾಡಿದೆ. ಬಿಸಿಲಿನ ತಾಪಕ್ಕೆ ಜಾನುವಾರುಗಳು ಮೇವಿಲ್ಲದೆ ನಿತ್ರಾಣಗೊಂಡು ಪ್ರಾಣಸಂಕಟ ಅನುಭವಿಸುತ್ತಿವೆ. ಜಾನುವಾರುಗಳ ಪ್ರಾಣ ರಕ್ಷಣೆಗೆ ಸರ್ಕಾರ ಹಿಂದೇಟು ಹಾಕುತ್ತಿರುವುದು ಸರಿಯಲ್ಲವೆಂದು ಪಾವಗಡ ಜಪಾನಂದಸ್ವಾಮೀಜಿ ಹೇಳಿದರು.

ಅವರು, ಗುರುವಾರ ನಗರದ ಹೊರವಲಯದಲ್ಲಿರುವ ಅಜ್ಜಯ್ಯನಗುಡಿ ಸರ್ಕಾರಿ ಗೋಶಾಲೆ ಬಳಿ ಇರುವ ದೇವರ ಎತ್ತುಗಳಿಗೆ ಉಚಿತ ಮೇವು ವಿತರಿಸಿ ಮಾತನಾಡಿದರು. ಬೆಂಗಳೂರಿನ ಇನ್ಫೋಸಿಸ್‌ ಸುಧಾಮೂರ್ತಿ ಟ್ರಸ್ಟ್ ಜಾನುವಾರುಗಳಿಗೆ ಉಚಿತವಾಗಿ ಮೇವವನ್ನು ಕಳೆದ ಸುಮಾರು ಒಂದು ವರ್ಷಗಳಿಂದ ನೀಡುತ್ತಾ ಬಂದಿದ್ದಾರೆ. ಇದುವರೆಗೂ ಚಳ್ಳಕೆರೆ, ಮೊಳಕಾಲ್ಮೂರು ಸೇರಿ ೨೯೦ ಟನ್ ಮೇವು ವಿತರಣೆ ಮಾಡಲಾಗಿದೆ. ಸರ್ಕಾರದ ದೋರಣೆ ಬದಲಾಗಬೇಕೆಂದು ತಾವು ಬಯಸುವುದಾಗಿ ತಿಳಿಸಿದರು.

ತಾಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯಲ್ಲಿ ನಾಯಕ ಸಮುದಾಯದ ಬುಡಕಟ್ಟು ಜನಾಂಗ ದೇವರ ಎತ್ತುಗಳನ್ನು ರಕ್ಷಣೆ ಮಾಡುವ ಜವಾಬ್ಧಾರಿ ಹೊಂದಿದೆ. ಕಿಲಾರಿಗಳು ಈ ಕೆಲಸವನ್ನು ಕಳೆದ ಹಲವಾರು ವರ್ಷಗಳಿಂದ ಪ್ರಾಮಾಣಿಕ ಮಾಡುತ್ತಾ ಬಂದಿದ್ದಾರೆ ಎಂದರು.

ಈ ವೇಳೆ ಹಲವಾರು ಕಿಲಾರಿಗಳು ಸ್ವಾಮೀಜಿಯವರಿಗೆ ಮನವಿ ಮಾಡಿ, ಸರ್ಕಾರವಂತೂ ನಮಗೆ ಯಾವುದೇ ರೀತಿಯ ಸಹಾಯ ಮಾಡುತ್ತಿಲ್ಲ. ಉಚಿತ ಮೇವು ವಿತರಣೆಯಲ್ಲೂ ಸಹ ಸಾಕಷ್ಟು ವಿಳಂಬವಾಗುತ್ತಿದೆ. ಆದ್ದರಿಂದ ಇನ್ನೂ ಹೆಚ್ಚಿನ ಮೇವನ್ನು ವಿತರಣೆ ಮಾಡಬೇಕು. ಈ ಬಗ್ಗೆ ಸುಧಾಮೂರ್ತಿಯವರೊಂದಿಗೆ ಚರ್ಚಿಸಿ ಸಕರಾತ್ಮಕ ಉತ್ತರ ಪಡೆದು ಎಲ್ಲಾ ಜಾನುವಾರುಗಳಿಗೆ ಮೇವು ವಿತರಣೆ ಮಾಡಬೇಕೆಂದು ಮನವಿ ಮಾಡಿದರು.

ನಗರಸಭಾ ಸದಸ್ಯೆ ಸುಜಾತಪಾಲಯ್ಯ, ನಾಗಭೂಷಣ್, ಸಿದ್ದೇಶ್, ಕಿಲಾರಿಗಳಾದ ಪಾಲಯ್ಯ, ಗಾದ್ರಿಪಾಲಯ್ಯ, ಚಿನ್ನಯ್ಯ ಮುಂತಾದವರಿದ್ದರು.