ಸರ್ಕಾರಿ ಶಾಲೆ ಉಳಿವಿಗೆ ಸ್ಥಳೀಯರ ಶ್ರಮ ಅಗತ್ಯ: ಗೀತಾ

| Published : Feb 26 2024, 01:31 AM IST

ಸರ್ಕಾರಿ ಶಾಲೆ ಉಳಿವಿಗೆ ಸ್ಥಳೀಯರ ಶ್ರಮ ಅಗತ್ಯ: ಗೀತಾ
Share this Article
  • FB
  • TW
  • Linkdin
  • Email

ಸಾರಾಂಶ

ಪೋಷಕರು ಸ್ಥಳೀಯವಾಗಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡುವ ಮನಸ್ಸು ಮಾಡಬೇಕು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ತಾಲೂಕಿನ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚೌಡ್ಲು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭ ಸಂಭ್ರಮದಿಂದ ನಡೆಯಿತು.ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಶಶಿಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಲಭಿಸುತ್ತಿದ್ದು, ಪೋಷಕರು ಸ್ಥಳೀಯವಾಗಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡುವ ಮನಸ್ಸು ಮಾಡಬೇಕು. ಆ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮಿಸಬೇಕು. ಶಾಲೆಯ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಯಿಂದ ಸರ್ವ ಸಹಕಾರ ನೀಡಲಾಗುವುದು ಎಂದರು.

ವಾರ್ಷಿಕೋತ್ಸವ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಸಮಾರೋಪ ಸಮಾರಂಭದಲ್ಲಿ ಇದುವರೆಗೆ ಶಾಲೆ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಶಾಲಾ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಮೂಲಕ ಕ್ರೀಡಾ ಪರಿಕರಗಳನ್ನು ಶಾಲೆಗೆ ಹಸ್ತಾಂತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ರಾಜ್ಯ ಶಿಕ್ಷಕರ ಸಂಘದ ನಿರ್ದೇಶಕ ಯೋಗೇಶ್, ನಿವೃತ್ತ ಮುಖ್ಯ ಶಿಕ್ಷಕಿ ತಂಗಮ್ಮ, ವಿಶಾಲಾಕ್ಷಿ, ಮುಖ್ಯ ಶಿಕ್ಷಕಿ ಪ್ರೇಮಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್, ಮುಖ್ಯಶಿಕ್ಷಕ ರಾಜಣ್ಣ, ಗ್ರಾ.ಪಂ. ಸದಸ್ಯರಾದ ಮಂಜುಳಾ ಸುಬ್ರಮಣಿ, ಪ್ರವೀಣ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಕುಮಾರ್, ಶಿಕ್ಷಕರಾದ ಶಶಿಕಲಾ, ಮಮತಾ, ಸ್ವರ್ಣಲತಾ ಮತ್ತಿತರರಿದ್ದರು.

ನಿವೃತ್ತರಾಗಲಿರುವ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಆನಂದ್ ಅವರನ್ನು ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಭಾರತೀಯ ಯುವಕ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.