ಅಂಜಲಿ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಘೋಷಿಸಲಿ: ಮುನೇನಕೊಪ್ಪ

| Published : May 21 2024, 12:34 AM IST

ಅಂಜಲಿ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಘೋಷಿಸಲಿ: ಮುನೇನಕೊಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸಾವಿನ ಮನೆಯಲ್ಲಿ ನಾವು ರಾಜಕಾರಣ ಮಾಡುವುದಿಲ್ಲ. ನೇಹಾ ಹಿರೇಮಠ ಹತ್ಯೆಯ ನೆನಪು ಹಸಿಯಿದ್ದಾಗಲೇ ಮತ್ತೊಂದು ಕೊಲೆಯಾಗಿದೆ. ಈವರೆಗೂ ರಾಜ್ಯ ಸರ್ಕಾರ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿಲ್ಲ ಎಂದು ಮುನೇನಕೊಪ್ಪ ಆಕ್ರೋಶ ವ್ಯಕ್ತಪಡಿಸಿದರು

ಹುಬ್ಬಳ್ಳಿ:

ಸರ್ಕಾರ ಈ ವರೆಗೂ ಮೃತ ಅಂಜಲಿ ಕುಟುಂಬಕ್ಕೆ ಯಾವುದೇ ಭರವಸೆಗಳನ್ನು ನೀಡಿಲ್ಲ. ಶೀಘ್ರದಲ್ಲೇ ಈ ಕುಟುಂಬಸ್ಥರ ಭವಿಷ್ಯದ ದೃಷ್ಟಿಯಿಂದ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಒತ್ತಾಯಿಸಿದರು.

ಅವರು ಇಲ್ಲಿನ ವೀರಾಪುರ ಓಣಿಯಲ್ಲಿರುವ ಮೃತ ಅಂಜಲಿ ನಿವಾಸಕ್ಕೆ ಸೋಮವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಾವಿನ ಮನೆಯಲ್ಲಿ ನಾವು ರಾಜಕಾರಣ ಮಾಡುವುದಿಲ್ಲ. ನೇಹಾ ಹಿರೇಮಠ ಹತ್ಯೆಯ ನೆನಪು ಹಸಿಯಿದ್ದಾಗಲೇ ಮತ್ತೊಂದು ಕೊಲೆಯಾಗಿದೆ. ಈವರೆಗೂ ರಾಜ್ಯ ಸರ್ಕಾರ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿಲ್ಲ. ಎಲ್ಲ ಸಮಾಜದವರು ಮುಂದೆ ಬಂದು ನೆರವು ನೀಡುತ್ತಿದ್ದಾರೆ. ಸರ್ಕಾರ ಸೂಕ್ತ ನೆರವನ್ನು ಕುಟುಂಬಕ್ಕೆ ನೀಡಬೇಕು ಎಂದರು.

ಹಾಡುಹಗಲೇ ಜನನಿಬಿಡ ಪ್ರದೇಶಕ್ಕೆ ಬಂದು ಕೊಲೆ ಮಾಡುತ್ತಾರೆಂದರೆ ಕಾನೂನು ಸುವ್ಯವಸ್ಥೆ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂಬುದು ಗೊತ್ತಾಗುತ್ತದೆ. ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಸ್ಪಷ್ಟವಾಗಿ ಕಂಡುಬರುತ್ತಿದೆ. ಅಲ್ಲದೇ ಪೊಲೀಸರು ಆರೋಪಿಯೊಂದಿಗೆ ಶಾಮೀಲಾಗಿದ್ದರೆ, ತನಿಖೆ ಕೈಗೊಂಡು ಅಂತಹವರ ವಿರುದ್ಧವೂ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆರ್ಥಿಕ ನೆರವು:

ಇದೇ ವೇಳೆ ಆನೇಕಲ್ ಗಂಗಾಮತಸ್ಥರ ಸಂಘದ ವತಿಯಿಂದ ಅಂಜಲಿ ಕುಟುಂಬಕ್ಕೆ ₹50 ಸಾವಿರ ನೆರವು ನೀಡಿದರು. ಈ ವೇಳೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ, ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ ಸೇರಿದಂತೆ ಹಲವರಿದ್ದರು.