ಈಸೂರು ಹೋರಾಟ ಚರಿತ್ರೆ ಉಳಿಯಲು ಸರ್ಕಾರ ಚಿತ್ತ ಹರಿಸಲಿ: ಚಿದಾನಂದಗೌಡ

| Published : Aug 16 2024, 12:57 AM IST

ಈಸೂರು ಹೋರಾಟ ಚರಿತ್ರೆ ಉಳಿಯಲು ಸರ್ಕಾರ ಚಿತ್ತ ಹರಿಸಲಿ: ಚಿದಾನಂದಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಭಾರತ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಈಸೂರಿನತ್ತ ನಮ್ಮ ಪಯಣ ಬೈಕ್ ರ‍್ಯಾಲಿ ಈಸೂರು ಗ್ರಾಮಕ್ಕೆ ತೆರಳಿತು.

ಕನ್ನಡಪ್ರಭ ವಾರ್ತೆ ಸೊರಬ / ಶಿರಾಳಕೊಪ್ಪ

ಏಸೂರು ಕೊಟ್ಟರೂ ಈಸೂರು ಬಿಡೆವು ಎಂಬ ಘೋಷಣೆಯೊಂದಿಗೆ ಸ್ವಯಂ ಪ್ರೇರಿತರಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕೀರ್ತಿ ಈಸೂರು ಗ್ರಾಮಸ್ಥರಿಗೆ ಸಲ್ಲುತ್ತದೆ ಎಂದು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ಚಿದಾನಂದಗೌಡ ಹೇಳಿದರು.

ಗುರುವಾರ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಭಾರತ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಈಸೂರಿನತ್ತ ನಮ್ಮ ಪಯಣ ಬೈಕ್ ರ‍್ಯಾಲಿ ನೇತೃತ್ವವಹಿಸಿ ಅವರು ಮಾತನಾಡಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈಸೂರು ಗ್ರಾಮದತ್ತ ಚಿತ್ತ ಹರಿಸಬೇಕು. ಈಸೂರಿನ ಹೋರಾಟವು ಚರಿತ್ರೆಯ ಪುಟದಲ್ಲಿ ಅಚ್ಚಳಿಯದೇ ಉಳಿಯಬೇಕು. ಈಸೂರಿನ ಹೋರಾಟಗಾರರ ಸ್ಮಾರಕದ ಮುಂಭಾಗ ಅಥವಾ ಒಳಾಂಗಣದಲ್ಲಿ ಹೋರಾಟಗಾರರ ಪ್ರತಿಮೆ ನಿರ್ಮಿಸಬೇಕು. ಜೊತೆಗೆ, ದೇಶದಲ್ಲಿ ಮೊದಲು ಸ್ವಾತಂತ್ರ್ಯ ಬಾವುಟ ಹಾರಿಸಿದ ಗ್ರಾಮದಲ್ಲಿ ದೇಶದಲ್ಲೇ ಅತಿ ಎತ್ತರದ ಧ್ವಜಸ್ತಂಬ ಸ್ಥಾಪಿಸಬೇಕಾದ ಕಾರ್ಯ ಆಗಬೇಕಿದೆ. ೧೯೪೩ರ ಮಾರ್ಚ್ ೮ರಂದು ಗ್ರಾಮದ ಗುರಪ್ಪ ಕಮ್ಮಾರ, ಜೀನಳ್ಳಿ ಮಲ್ಲಪ್ಪ, ೯ರಂದು ಸೂರ್ಯ ನಾರಾಯಣಾಚಾರ್, ಬಡಕಳ್ಳಿ ಹಾಲಪ್ಪ ಹಾಗೂ ೧೦ರಂದು ಗೌಡ್ರು ಶಂಕರಪ್ಪ ಅವರನ್ನು ಬ್ರಿಟೀಷ್ ಸರ್ಕಾರ ಗಲ್ಲಿಗೇರಿಸಿತು. ಆದ್ದರಿಂದ ಮಾರ್ಚ್ ೮ರಿಂದ ೧೦ರವರೆಗೆ ದೇಶದಲ್ಲಿಯೇ ಕರಾಳದಿನವನ್ನಾಗಿ ಆಚರಿಸಬೇಕು ಎಂದು ಆಗ್ರಹಿಸಿದರು.

ಓಂ ಪಿಕಲ್ಸ್‌ನ ಗಣೇಶ್ ಮಾತನಾಡಿ, ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿಯಿಂದ ಈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದಿಂದ ಆರಂಭವಾದ ಬೈಕ್ ರ‍್ಯಾಲಿ ಮುಖ್ಯರಸ್ತೆ ಮಾರ್ಗವಾಗಿ ಶಿರಾಳಕೊಪ್ಪ, ಶಿಕಾರಿಪುರ ಮಾರ್ಗವಾಗಿ ಈಸೂರು ಗ್ರಾಮಕ್ಕೆ ತೆರಳಿತು. ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ದತ್ತಾತ್ರೇಯ, ರವಿಕುಮಾರ್, ಹರ್ಷ ಗುಡಿಗಾರ್, ಆದಿತ್ಯ, ವಿಠ್ಠಲ, ಸಾತ್ವಿಕ, ಕಿರಣ, ಅಮೋಘ, ಶೋಭರಾಜ ಮಂಚಿ, ಕೌಶಿಕ ಗೌಡ ಸೇರಿದಂತೆ ಇತರರಿದ್ದರು. ಶಿರಾಳಕೊಪ್ಪದಲ್ಲೂ ಸ್ವಾತಂತ್ರ್ಯೋತ್ಸವ; ಹೇಮಂತ ಡೊಳ್ಳೆಯಿಂದ ಧ್ವಜಾರೋಹಣ

ಶಿರಾಳಕೊಪ್ಪ: ೭೮ನೇ ಸ್ವಾತಂತ್ರ್ಯ ಮಹೋತ್ಸವವನ್ನು ಶಿರಾಳಕೊಪ್ಪ ಪಟ್ಟಣದಲ್ಲಿ ವಿವಿಧ ಶಾಲೆಯ ಸಾವಿರಾರು ವಿದ್ಯಾರ್ಥಿಗಳು, ಪಟ್ಟಣದ ನಾಗರೀಕರು ಧ್ವಜಾರೋಹಣದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.ಪಟ್ಟಣದ ಸೊರಬ ರಸ್ತೆಯ ಕ್ರೀಡಾಂಗಣದಲ್ಲಿ ನಡೆದ ಧ್ವಜಾರೋಹಣವನ್ನು ಪುರಸಭೆ ಮುಖ್ಯಾಧಿಕಾರಿ ಹೇಮಂತ ಡೊಳ್ಳೆ ನೇರವೇರಿಸಿದರು. ವಿದ್ಯಾರ್ಥಿಗಳಿಂದ ಧ್ವಜ ವಂದನೆ ಸ್ವೀಕರಿಸಿ ನಂತರ ಮಾತನಾಡಿ, ಸ್ವಾತಂತ್ರ್ಯ ಹೋರಾಟ ತ್ಯಾಗ ಬಲಿದಾನಗಳಿಂದ ಕೂಡಿದ್ದು, ಈ ಹೋರಾಟದಲ್ಲಿ ಅಂದು ವಿದ್ಯಾರ್ಥಿಗಳು ಸೇರಿ, ದೇಶದ ಎಲ್ಲ ವರ್ಗಗಳೊಂದಿಗೆ ಅಹಿಂಸಾತ್ಮಕವಾಗಿ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸುಭಾಸ್ ಚಂದ್ರ ಬೋಸ್, ವಲ್ಲಭಾಯಿ ಪಟೇಲ್, ಭಗತ್ ಸಿಂಗ್ ರಂತಹ ಸಾವಿರಾರು ಹೋರಾಟಗಾರರ ಪಾಲ್ಗೊಳ್ಳುವಿಕೆ, ಪರಿಶ್ರಮದಿಂದ ನಮಗೆ ಸ್ವಾತಂತ್ರ್ಯದೊರಕಿತು ಎಂದರು.

ಪಟ್ಟಣದ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರಭಾತ್ ಪೇರಿ ನಡೆಸಿದರು. ಪುಟ್ಟ ಮಕ್ಕಳು ಮಹಾ ಪುರುಷರ ಪೋಷಾಕಿನಲ್ಲಿ ಭಾಗವಹಿಸಿ ಸ್ವಾತಂತ್ರ್ಯ ಮಹೋತ್ಸವಕ್ಕೆ ವಿಶೇಷ ಮೆರುಗು ತಂದರು. ಇದೇ ವೇಳೆ ೨೦೨೩- ೨೪ನೇ ಸಾಲಿನಲ್ಲಿ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.