ಸಾರಾಂಶ
ತಾಲೂಕಿನ ಕೆಂಭಾವಿ ಪಟ್ಟಣದಲ್ಲಿರುವ ಎಲ್ಲ ಸರ್ಕಾರಿ ಜಾಗವನ್ನು ಇನ್ನೆರಡು ದಿನಗಳಲ್ಲಿ ಸರ್ವೇ ಮಾಡಿ ಜಿಲ್ಲಾಡಳಿತಕ್ಕೆ ಸಮಗ್ರ ವರದಿ ನೀಡುವಂತೆ ಕಂದಾಯ ಮತ್ತು ಪುರಸಭೆಗೆ ಸೂಚನೆ ನೀಡಿದ್ದೇನೆ ಎಂದು ಉಪ ವಿಭಾಗಾಧಿಕಾರಿ ಪ್ರಕಾಶ ಕುದುರಿ ಹೇಳಿದರು.
ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಕೆಂಭಾವಿ ಪಟ್ಟಣದಲ್ಲಿರುವ ಎಲ್ಲ ಸರ್ಕಾರಿ ಜಾಗವನ್ನು ಇನ್ನೆರಡು ದಿನಗಳಲ್ಲಿ ಸರ್ವೇ ಮಾಡಿ ಜಿಲ್ಲಾಡಳಿತಕ್ಕೆ ಸಮಗ್ರ ವರದಿ ನೀಡುವಂತೆ ಕಂದಾಯ ಮತ್ತು ಪುರಸಭೆಗೆ ಸೂಚನೆ ನೀಡಿದ್ದೇನೆ ಎಂದು ಉಪ ವಿಭಾಗಾಧಿಕಾರಿ ಪ್ರಕಾಶ ಕುದುರಿ ಹೇಳಿದರು.ತಾಲೂಕಿನ ಕೆಂಭಾವಿ ಪಟ್ಟಣದ ಸರ್ವೇ ನಂಬರ 4ರ ಸರ್ಕಾರಿ ಜಾಗಕ್ಕೆ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಟ್ಟಣದ ಹೊರವಲಯದ ಸರ್ವೇ ನಂ.4 ರಲ್ಲಿ ಒಟ್ಟು 56 ಎಕರೆ ಸರ್ಕಾರಿ ಜಾಗವಿದೆ. ಅದರಲ್ಲಿ ಕಂದಾಯ, ಪೊಲೀಸ್ ಹಾಗೂ ಕೃಷಿ ಇಲಾಖೆಗೆ 9 ಎಕರೆ ಜಮೀನು ನೀಡಲಾಗಿದೆ. ಉಳಿದ 47 ಎಕರೆ ಭೂಮಿಯಲ್ಲಿ ಖಾಸಗಿ ವ್ಯಕ್ತಿಗಳು ಮನೆ ನಿರ್ಮಾಣ ಮಾಡಿದ್ದು, ಪುರಸಭೆ ಮತ್ತು ಕಂದಾಯ ಇಲಾಖೆ ಈಗಾಗಲೆ ಅವರಿಗೆ ಮನೆ ತೆರವುಗೊಳಿಸುವಂತೆ ಮೌಖಿಕವಾಗಿ ಹೇಳಿದ್ದಾರೆ. ಕಾನೂನು ಪ್ರಕಾರ ಸರ್ಕಾರಿ ಜಾಗವನ್ನು ಸರ್ವೇ ಮಾಡಿಸಿ ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ಇರುವ ಮನೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಮುಖ್ಯಾಧಿಕಾರಿ ರಮೇಶ ಗೊಂದಕರ್, ಉಪ ತಹಸೀಲ್ದಾರ್ ಮಲ್ಲಿಕಾರ್ಜುನ ಪಾಟೀಲ್, ಕಂದಾಯ ನಿರೀಕ್ಷಕ ರಾಜೇಸಾಬ ಇದ್ದರು.
ಕಾಲುವೆ ಕಾಮಗಾರಿ ವೀಕ್ಷಣೆಪುರಸಭೆ ಆಡಳಿತ ಅಧಿಕಾರಿಯಾದ ಉಪ ವಿಭಾಗಾಧಿಕಾರಿ ಪ್ರಕಾಶ ಕುದುರಿ ಅವರು ಖುದ್ದು ಕೃಷ್ಣಾ ಕಾಲುವೆಗೆ ಭೇಟಿ ನೀಡಿ ಶುದ್ಧ ಕುಡಿಯುವ ನೀರಿನ ಕಾಮಗಾರಿ ವೀಕ್ಷಣೆ ನಡೆಸಿದರು. ಕಾಲುವೆಯ ನೀರನ್ನು ಬಳಸಿ ಜನತೆಗೆ ಕುಡಿಯುವ ನೀರು ಒದಗಿಸಲು ಈಗಾಗಲೆ ಪ್ರಯತ್ನಗಳು ನಡೆಯುತ್ತಿವೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರದಲ್ಲೆ ಉಳಿದ ಕಾಮಗಾರಿ ಪೂರ್ಣಗೊಳಿಸಿ ಜನತೆಗೆ ನೀರು ಒದಗಿಸಲಾಗುವುದು ಎಂದು ಹೇಳಿದರು.