ಸಾರಾಂಶ
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ಮಾಡುವ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದು ಮಾದಿಗ ಸಮುದಾಯಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಹೇಳಿದರು
ಕನ್ನಡಪ್ರಭ ವಾರ್ತೆ ತುಮಕೂರು
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ಮಾಡುವ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದು ಮಾದಿಗ ಸಮುದಾಯಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಹೇಳಿದರು.ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲಾತಿ ವರ್ಗೀಕರಣ ಮಾಡಲು ಸುಪ್ರೀಂ ಕೋರ್ಟ್ ಆದೇಶ ಮಾಡಿದ್ದರೂ ಅದನ್ನು ಪಾಲನೆ ಮಾಡದ ರಾಜ್ಯ ಸರ್ಕಾರ ಮತ್ತೊಂದು ಆಯೋಗ ರಚನೆ ಮಾಡಿ ಕಾಲ ತಳ್ಳುವ ತಂತ್ರ ನಡೆಸಿದೆ. ಹರಿಯಾಣ, ಮತ್ತಿತರ ರಾಜ್ಯಗಳು ಒಳಮೀಸಲಾತಿ ಜಾರಿಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ, ಆದರೆ ನಮ್ಮ ಸರ್ಕಾರ ಜಾರಿ ಮಾಡದೆ ತಡೆಹಿಡಿಯುವ ಹುನ್ನಾರ ನಡೆಸಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ, ಅಂಕಿ ಅಂಶಗಳ ಕೊರತೆಯ ನೆಪವೊಡ್ಡಿ ಶೋಷಿತ ಸಮುದಾಯಕ್ಕೆ ನ್ಯಾಯ ಒದಗಿಸಲು ನಿರಾಸಕ್ತಿ ತೋರುತ್ತಿದ್ದಾರೆ ಎಂದರು.ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ, ಕಾಂತರಾಜು ವರದಿ, ಮಾಧುಸ್ವಾಮಿ ನೇತೃತ್ವದ ವರದಿ ಜೊತೆಗೆ 2011ರ ಜನಗಣತಿಯಲ್ಲಿ ಅಗತ್ಯ ದತ್ತಾಂಶ ಲಭ್ಯವಿದ್ದರೂ ಮತ್ತೊಂದು ಆಯೋಗ ರಚನೆ ಮಾಡಲು ಹೊರಟಿರುವುದು ಮಾದಿಗ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ. ಸರ್ಕಾರದ ಈ ತೀರ್ಮಾನ ಮಾದಿಗ ಸಮಾಜದಲ್ಲಿ ಆತಂಕ ಸೃಷ್ಟಿ ಮಾಡಿದೆ. ಆಯೋಗ ರಚನೆ ಮೂಲಕ ಸಮುದಾಯದ ಕಣ್ಣೊರೆಸಿ ಉಪಚುನಾವಣೆ ಗೆಲ್ಲುವ ತಂತ್ರ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಹಿರಿಯ ವೈದ್ಯ ಡಾ.ಲಕ್ಷ್ಮೀಕಾಂತ್ ಮಾತನಾಡಿ, ಈಗಿನ ಗೃಹ ಸಚಿವ ಡಾ.ಜಿ.ಪರಮೇಶ್ವರ ಅಧ್ಯಕ್ಷರಾಗಿದ್ದ ಕಾಂಗ್ರೆಸ್‌ನ ಚುನಾವಣೆ ಪ್ರಣಾಳಿಕೆಯಲ್ಲಿ ಮೊದಲ ಭರವಸೆ ಒಳಮೀಸಲಾತಿ ಜಾರಿ ಮಾಡುವುದಾಗಿತ್ತು. ಚಿತ್ರದುರ್ಗದ ಸಭೆಯಲ್ಲೂ ಈ ಬಗ್ಗೆ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಮೀಸಲಾತಿ ವರ್ಗೀಕರಣದ ಪ್ರಯತ್ನವಾಗಿಲ್ಲ.ಒಳಮೀಸಲಾತಿ ಜಾರಿ ಮಾಡುವ ಇಚ್ಛಾಶಕ್ತಿ ಕಾಂಗ್ರೆಸ್ ಸರ್ಕಾರಕ್ಕಿಲ್ಲ. ಜಾರಿಯಾಗಲು ಬಲಗೈ ಸಮಾಜದವರು ಬಿಡುತ್ತಿಲ್ಲ ಎಂದು ಆಪಾದಿಸಿದರು.ದತ್ತಾಂಶ ಕೊರತೆ ಇಲ್ಲ, ಹಲವು ವರದಿಗಳ ಅಂಕಿಅಂಶಗಳಿವೆ, ಹಿಂದೆ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಗೆ ಶೇಕಡ 2ರಷ್ಟು ಮೀಸಲಾತಿ ಹೆಚ್ಚು ಮಾಡಿದ್ದು ಲಭ್ಯವಿರುವ ಅಂಕಿ ಅಂಶದ ಆಧಾರದಲ್ಲೇ. ಆದರೆ ಸರ್ಕಾರ ಈಗ ಮತ್ತೊಂದು ಆಯೋಗ ರಚನೆಗೆ ಹೊರಟಿರುವುದು ಮೊಸರಿನಲ್ಲಿ ಕಲ್ಲು ಹುಡುಕುವಂತಾಗಿದೆ. ನಾವು ಯಾರ ಮೀಸಲಾತಿಯನ್ನು ಕಸಿಯುತ್ತಿಲ್ಲ, ನಮ್ಮ ಪಾಲಿನದನ್ನು ನಮಗೆ ಹಂಚಬೇಕು ಎಂದು ಒತ್ತಾಯಿಸಿದರು.ಕಳೆದ 45 ವರ್ಷಗಳ ದತ್ತಾಂಶ ತೆಗೆದುನೋಡಿದರೆ ಬಲಗೈ ಸಮುದಾಯದವರೇ ಹೆಚ್ಚಿನ ಸವಲತ್ತು ಪಡೆಯವರಾಗಿದ್ದಾರೆ. ಎಡಗೈ ಹಾಗೂ ಇತರೆ ನಿರ್ಲಕ್ಷಿತ ಸಮಾಜದವರು ಆಗಿನಿಂದಲೂ ಅನ್ಯಾಯಕ್ಕೊಳಗಾಗಿದ್ದಾರೆ. ಒಳಮೀಸಲಾತಿ ಜಾರಿಯಲ್ಲಿ ನಿರಾಸಕ್ತಿ ತೋರುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಉಪಚುನಾವಣೆಯಲ್ಲಿ ಸಮುದಾಯ ತಕ್ಕ ಪ್ರತ್ಯುತ್ತರ ನೀಡುತ್ತದೆ ಎಂದರು.ಮುಖಂಡರಾದ ಕವಣದಾಲ ಶಿವಣ್ಣ, ವೆಂಕಟೇಶ್, ಸೋರೆಕುಂಟೆ ಯೋಗೀಶ್, ತಿಮ್ಮಾಪುರ ನರಸಿಂಹಮೂರ್ತಿ, ಬಿ.ಜಿ.ಸಾಗರ್ ಹಾಜರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))