ರಾಜ್ಯಪಾಲರ ಫೋನ್‌ ಕದ್ದಾಲಿಕೆಗೆ ಸರ್ಕಾರದ ವಿಫಲ ಯತ್ನ: ಯತ್ನಾಳ್‌

| Published : Sep 27 2024, 01:16 AM IST

ಸಾರಾಂಶ

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಪ್ರಕಾರ ಈ ದೇಶ, ರಾಜ್ಯ ನಡೆಯಲ್ಲ. ರಾಜ್ಯಪಾಲರ ಅಧಿಕಾರ ಮೊಟಕು ಯತ್ನಗಳನ್ನು ನಡೆಸಿದ್ದಾರೆ ಎಂದು ಸಚಿವ ಸಂಪುಟ ಸಭೆಯ ನಿರ್ಧಾರವನ್ನು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಟೀಕಿಸಿದರು.

ಹುಬ್ಬಳ್ಳಿ:

ಕಾಂಗ್ರೆಸ್‌ ಸರ್ಕಾರ ರಾಜ್ಯಪಾಲರ ಟೆಲಿಪೋನ್‌ನ್ನು ಕದ್ದಾಲಿಸುವ ಪ್ರಯತ್ನ ಮಾಡಿತ್ತು. ಆದರೆ ಯಶಸ್ವಿಯಾಗಲಿಲ್ಲ. ಸುಮ್ಮನೆ ಬಿಟ್ಟರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ.ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯಪಾಲರಿಗೆ ಕಾಂಗ್ರೆಸ್‌ ಅವಮಾನ ಮಾಡುತ್ತಿದೆ. ರಾಜ್ಯಪಾಲರು ದಲಿತರಿದ್ದು, ಉದ್ದೇಶಪೂರ್ವಕವಾಗಿ ಅವಮಾನಿಸಿ ದಲಿತರಿಗೆ ತೊಂದರೆ ನೀಡಲಾಗುತ್ತಿದೆ. ರಾಜ್ಯಪಾಲರು ಬಿಜೆಪಿ ಏಜೆಂಟ್‌ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ಆದರೆ ಅವರ ತೀರ್ಮಾನ ಸರಿ ಎಂದು ನ್ಯಾಯಾಲಯವೇ ಹೇಳಿದೆ. ಅಂದ ಮೇಲೆ ರಾಜ್ಯಪಾಲರು ಯೋಚಿಸಿ, ಸೂಕ್ತ ಕಾನೂನು ನಿಯಮ ಪರಿಪಾಲಿಸಿದ್ದಾರೆ ಎಂದೇ ಅರ್ಥ, ಕಾಂಗ್ರೆಸ್‌ನವರಿಗೆ ಅವರು ಬಯಸಿದಂತೆ ಎಲ್ಲ ನಡೆಯಬೇಕೆಂದಿದೆ ಎಂದರು.ಕರ್ನಾಟಕದಲ್ಲಿರುವುದು 2ನೇ ಮಮತಾ ಬ್ಯಾನರ್ಜಿ ಸರ್ಕಾರ. ಸಂವಿಧಾನ ಬದಲಾವಣೆ ಮಾಡುತ್ತೇವೆ. ಹೊಸ ಕಾನೂನು ತರುತ್ತೇವೆ ಎಂದರೆ ಆಗಲ್ಲ. ಸಂವಿಧಾನ ಪ್ರಕಾರವೇ ಎಲ್ಲವೂ ನಡೆಯುತ್ತದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಪ್ರಕಾರ ಈ ದೇಶ, ರಾಜ್ಯ ನಡೆಯಲ್ಲ. ರಾಜ್ಯಪಾಲರ ಅಧಿಕಾರ ಮೊಟಕು ಯತ್ನಗಳನ್ನು ನಡೆಸಿದ್ದಾರೆ ಎಂದು ಸಚಿವ ಸಂಪುಟ ಸಭೆಯ ನಿರ್ಧಾರವನ್ನು ಟೀಕಿಸಿದರು.ರಾಜ್ಯಪಾಲರು ಬಿಜೆಪಿ ಏಜೆಂಟ್ ರಂತೆ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ಯತ್ನಾಳ, ಎಲ್ಲ ಪಕ್ಷದಲ್ಲಿ ಈ ರೀತಿ ಆರೋಪ ಮಾಡುವುದು ಒಂದು ಚಟವಾಗಿದೆ. ಹಿಂದೆ ಹಂಸರಾಜ ಭಾರದ್ವಾಜ ಇದ್ದಾಗ ಕಾಂಗ್ರೆಸ್‌ ಏಜೆಂಟರಂತೆ ವರ್ತಿಸಿದ್ದರು. ಬಿಜೆಪಿ ವಿರುದ್ಧ ಏನಾದರೂ ಇದ್ದರೆ ತೆಗೆದುಕೊಂಡು ಬನ್ನಿ ಅಂತ ಕಾಂಗ್ರೆಸ್‌ನವರಿಗೆ ಹೇಳುತ್ತಿದ್ದರು ಎಂದು ತಿರುಗೇಟು ನೀಡಿದರು.

ಸಿದ್ದು ರಾಜೀನಾಮೆ ನೀಡಲಿ:ಕೋರ್ಟ್‌ ಆದೇಶ ಬಂದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಸೂಕ್ತ. ಅಧಿಕಾರದಲ್ಲಿದ್ದರೆ ತನಿಖೆ ಮೇಲೆ ಪ್ರಭಾವ ಖಚಿತ. ಆದಕಾರಣ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಹುದ್ದೆಯಲ್ಲಿದ್ದು ಯಾವುದೇ ತನಿಖೆ ಎದುರಿಸುವುದು ಸರಿಯಲ್ಲ ಎಂದು ಇದೇ ಸಿದ್ದರಾಮಯ್ಯ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಹೇಳಿದ್ದರು. ಅದನ್ನು ನೆನಪಿಸಿಕೊಳ್ಳಬೇಕು. ಈಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಹೈಕೋರ್ಟ್‌ ಆದೇಶ ಪಾಲಿಸಬೇಕು ಎಂದರು.

ಸರ್ಕಾರ ವಿಸರ್ಜಿಸಿ:

ಸಿದ್ದರಾಮಯ್ಯ ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ. ಏಕೆಂದರೆ ಕಾಂಗ್ರೆಸ್‌ನಲ್ಲಿ ಸಿಎಂ ರೇಸ್‌ನಲ್ಲಿ ಬಹಳಷ್ಟು ಮಂದಿ ಇದ್ದಾರೆ. ಗೋರಿಗೆ ಹೋಗುವವರು ಸಹ ಪಾಳೆ ಹಚ್ಚಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರೇ ಕೊನೆಯ ಮುಖ್ಯಮಂತ್ರಿಯಾಗುತ್ತಾರೆ. ಆದಕಾರಣ ಕರ್ನಾಟಕ ಸರ್ಕಾರವನ್ನು ವಿಸರ್ಜನೆ ಮಾಡಬೇಕು ಎಂದು ಯತ್ನಾಳ ಹೇಳಿದರು.

ಕೋರ್ಟ್‌ ತೀರ್ಪು ರಾಜಕೀಯ ಪ್ರೇರಿತ ಎಂದಿರುವ ಸಚಿವ ಜಮೀರ್‌ ಅಹ್ಮದ ತಲೆಯಲ್ಲಿ ಮೆದುಳು ಇದೆಯೋ ಅಥವಾ ಮಾಂಸ ತುಂಬಿದೆಯೋ ಗೊತ್ತಿಲ್ಲ. ಕೋರ್ಟ್‌ ತೀರ್ಪಿನ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿದ ಇವರ ಮೇಲೆ ನ್ಯಾಯಾಂಗ ನಿಂದನೆ ಕೇಸ್‌ ದಾಖಲಾಗಬೇಕು ಎಂದರು.

ಅಡ್ಜೆಸ್ಮೆಂಟ್‌ ರಾಜಕಾರಣ:

ಸಿದ್ದರಾಮಯ್ಯ ತಮ್ಮ ವಿರುದ್ಧ ಕೆಲವರು ಅಡ್ಜಸ್ಟ್ಮೆಂಟ್‌ ಆಗಿದ್ದಾರೆ ಎಂದು ಹೇಳುತ್ತಾರೆ. ಮೊದಲು ಅವರ ಹೊಂದಾಣಿಕೆ ರಾಜಕಾರಣದ ಬಗ್ಗೆ ಹೇಳಲಿ. ನಾನು ಸದನದಲ್ಲೇ ಹೊಂದಾಣಿಕೆ ರಾಜಕಾರಣದ ಬಗ್ಗೆ ಹೇಳಿದ್ದೇನೆ ಎಂದರು. ಬಿಜೆಪಿ ಭ್ರಷ್ಟಾಚಾರಿಗಳಿಲ್ಲವ ಎಂಬ ಕಾಂಗ್ರೆಸ್‌ ಪ್ರಶ್ನೆಗೆ, ಭ್ರಷ್ಟಾಚಾರಿಗಳೆಲ್ಲ ಜೈಲು ಸೇರಲಿ. ಭ್ರಷ್ಟರೆಲ್ಲರೂ ಜೈಲಿಗೆ ಹೋದರೆ ಹೊಸ ರಾಜಕೀಯ ಯುಗ ಆರಂಭಗೊಳ್ಳುತ್ತದೆ ಎಂದ ಯತ್ನಾಳ, ಹೊಂದಾಣಿಕೆ ರಾಜಕಾರಣದಿಂದಲೇ ರಾಜ್ಯಕ್ಕೆ ಇಂತಹ ದುಸ್ಥಿತಿ ಬಂದಿದೆ. ಇಷ್ಟೆಲ್ಲ ಪ್ರಕರಣಗಳೆಲ್ಲ ಹೊರಬರುತ್ತಿವೆ. ಕುಮಾರ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸಿದ್ದೇವೆ. ಹಲವು ಸಮಾನ ಮನಸ್ಕರು ಸಭೆ ಮಾಡಿದ್ದೇವೆ ಎಂದರು.

ಬಿಜೆಪಿ ಶುದ್ಧೀಕರಣದ ಕುರಿತು ಕೇಳಿದ ಪ್ರಶ್ನೆಗೆ, ಶುದ್ಧೀಕರಣ ಮಾಡುವುದಕ್ಕೆ ಗಂಗಾನದಿಯಿಂದ ನೀರು ತರಿಸುತ್ತಿದ್ದೇವೆ. ಬೆಂಗಳೂರಷ್ಟೇ ಅಲ್ಲ. ಬೀದರ್‌ನಿಂದ ಹಿಡಿದು ಚಾಮರಾಜನಗರ ವರೆಗೂ ಸ್ವಚ್ಛವಾಗಬೇಕಿದೆ ಎಂದರು.

ರಾಜ್ಯಾಧ್ಯಕ್ಷ ವಿಜಯೇಂದ್ರ ಕುರಿತ ಪ್ರಶ್ನೆಗೆ, ಪಕ್ಷದ ವೇದಿಕೆಯಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದೇವೆ. ಏನು ಕ್ರಮಕೈಗೊಳ್ಳುತ್ತಾರೆ ಎನ್ನುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು.

ಹೈಕಮಾಂಡ್‌ಗೆ ಬಿಟ್ಟ ವಿಚಾರ:

ಈಶ್ವರಪ್ಪ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅವರನ್ನು ಪಕ್ಷಕ್ಕೆ ತೆಗೆದುಕೊಂಡರೆ ನಾವು ಸ್ವಾಗತಿಸುತ್ತೇವೆ. ಈಶ್ವರಪ್ಪ ನಡೆ ಹಿಂದುತ್ವದ ಕಡೆ. ಈಶ್ವರಪ್ಪ ನಡೆ ಬಿಜೆಪಿ ಕಡೆಗೆ ಎಂದಷ್ಟೇ ಹೇಳಬಹುದು ಎಂದು ಯತ್ನಾಳ ಹೇಳಿದರು.