ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 12ನೇ ವಾರ್ಷಿಕ ಘಟಿಕೋತ್ಸವ ಡಿ.3ರಂದು ಬೆಳಗ್ಗೆ 11 ಗಂಟೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಎಪಿಜೆ ಅಬ್ದುಲ್ ಕಲಾಂ ಜ್ಞಾನ ಸಂಗಮ ಸಭಾಂಗಣದಲ್ಲಿ ನಡೆಯಲಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ್ ತಿಳಿಸಿದರು.ಶ್ರೀನಗರದ ಮಾಳಮಾರುತಿ ಬಡಾವಣೆಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 4 ವಿಷಯಗಳಲ್ಲಿ ಪಿ.ಜಿ. ಡಿಪ್ಲೋಮಾ ಕೋರ್ಸ್‌ಗಳು, 452ಕ್ಕೂ ಅಧಿಕ ಸಂಶೋಧನಾರ್ಥಿಗಳಿಂದ ಹಲವಾರು ವಿಷಯಗಳಲ್ಲಿ ಪಿಎಚ್.ಡಿ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ. ಯುಜಿಸಿಯಿಂದ 2 ಎಫ್ ಹಾಗೂ 12 ಬಿ ಮನ್ನಣೆಯನ್ನು 2021ರಲ್ಲಿ ನ್ಯಾಕ್ ಮಾನ್ಯತೆಯನ್ನು ವಿಶ್ವವಿದ್ಯಾಲಯ ಪಡೆದುಕೊಂಡಿದೆ ಎಂದು ತಿಳಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 12ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ವಹಿಸುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಉಪಸ್ಥಿತರಿರುವರು. ವಿಶ್ವಸಂಸ್ಥೆಯ ಸಲಹೆಗಾರ, ಅಂತಾರಾಷ್ಟ್ರೀಯ ಖ್ಯಾತ ವಿಜ್ಞಾನಿ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಮಾಜಿ ಹಿರಿಯ ಅಧಿಕಾರಿ ಮಂಗಳೂರಿನ ಡಾ.ಇಡ್ಯಾ ಕರುಣಾಸಾಗರ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.ಪ್ರದರ್ಶನ ಕಲೆಗಳ ಕ್ಷೇತ್ರದಲ್ಲಿ ಪದ್ಮಶ್ರೀ ಪಂಡಿತ ಎಸ್. ಬಾಳೇಶ ಭಜಂತ್ರಿ, ಉದ್ಯಮಶೀಲತೆ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಗೋಪಾಲ ದೇವೇಂದ್ರ ಜಿನಗೌಡ ಹಾಗೂ ನಾಗರಿಕ, ಕ್ರೀಡೆ, ಲೋಕೋಪಕಾರಿ ಸೇವಾ ಕ್ಷೇತ್ರದಲ್ಲಿ ಗೋಪಾಲ ಬಿ. ಹೊಸೂರ ಅವರಿಗೆ ಡಾಕ್ಟರ್ ಆಫ್ ಲೆಟರ್ಸ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು.
ಘಟಿಕೋತ್ಸವದಲ್ಲಿ ಒಟ್ಟು 38512 ವಿದ್ಯಾರ್ಥಿಗಳು ಪದವಿ ಮತ್ತು 5909 ಸ್ನಾತಕೋತ್ತರ ಪದವಿ ಪ್ರಮಾಣಪತ್ರ ಪಡೆದುಕೊಳ್ಳಲಿದ್ದಾರೆ. ಸ್ನಾತಕೋತ್ತರ ಹಾಗೂ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ 11 ಸುವರ್ಣ ಪದಕ, 123 ಪಿಎಚ್.ಡಿ. ಪದವಿ ಪ್ರದಾನ ಮಾಡಲಾಗುವುದು ಎಂದವರು ಹೇಳಿದರು.ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಸಂತೋಷ ಕಾಮಗೌಡ, ಮೌಲ್ಯಮಾಪನ ಕುಲಸಚಿವ ಪ್ರೊ. ರವೀಂದ್ರ ಎನ್. ಕದಮ್, ಹಣಕಾಸು ಅಧಿಕಾರಿ ಎಂ.ಎ. ಸ್ವಪ್ನ ಸುದ್ದಿಗೋಷ್ಠಿಯಲ್ಲಿ ಉಪ್ಥಿತರಿದ್ದರು.ರಾಜ್ಯ ಸರ್ಕಾರ ಹಿರೇಬಾಗೇವಾಡಿ ಬಳಿಯ ಮಲ್ಲಪ್ಪಜ್ಜನ ಗುಡ್ಡದ ಬಳಿ 126 ಎಕರೆ 27 ಗುಂಟೆ ಜಮೀನು ವಿಶ್ವವಿದ್ಯಾಲಯಕ್ಕೆ ನೀಡಿದ್ದು, ಈಗಾಗಲೇ ಆಡಳಿತ ಕಟ್ಟಡಗಳು ಹಾಗೂ ಶೈಕ್ಷಣಿಕ ಕಟ್ಟಡಗಳು ನಿರ್ಮಾಣಗೊಂಡಿದ್ದು, ಮುಕ್ತಾಯ ಹಂತದಲ್ಲಿವೆ. ವಿವಿಯ ಹೊಸ ಕ್ಯಾಂಪಸ್‌ಗೆ ನೀರಿನ ಸಮಸ್ಯೆ, ರಸ್ತೆಯ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯಲಾಗಿದೆ.
-ಪ್ರೊ.ಸಿ.ಎಂ. ತ್ಯಾಗರಾಜ್ ಆರ್‌ಸಿಯು ಕುಲಪತಿ