ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ರೈತರ ಬೆನ್ನೆಲುಬಾಗಿರುವ ಸಹಕಾರ ಸಂಘಗಳ ಕಾರ್ಯಚಟುವಟಿಕೆಯಲ್ಲಿ ರಾಜಕೀಯ ನುಸುಳಬಾರದು. ೧೨೦ ವರ್ಷಗಳ ಇತಿಹಾಸ ಇರುವ ಸಹಕಾರ ಸಂಘಗಳನ್ನು ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ನಡೆಸಿದಲ್ಲಿ ಮಾತ್ರ ಸಂಘದ ಉದ್ದೇಶಗಳು ಈಡೇರಿ, ರೈತರಿಗೆ ಅದರ ಲಾಭ ದೊರೆಯಲು ಸಾಧ್ಯ. ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ಕೆಲಸ ಮಾಡಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.ತಾಲೂಕಿನ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರು. ೧.೦೬ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ವರ್ಷದ ವರೆಗೂ ರೈತರಿಗೆ ನಬಾರ್ಡ್‌ನಿಂದ ಶೇ. ೮೦ ರಷ್ಟು ಪುನರ್‌ಧನದ ಮೂಲಕ ಸಾಲ ನೀಡಲಾಗುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಅದನ್ನು ಶೇ. ೩೦ಕ್ಕೆ ತಂದಿರುವುದರಿಂದ ರಾಜ್ಯಕ್ಕೆ ಬರುತ್ತಿದ್ದ ರು. ೫೬೦೦ ಕೋಟಿ ಹಣಕ್ಕೆ ಬದಲಾಗಿ ರು. ೨೩೪೦ಕೋಟಿ ಕೇಂದ್ರದಿಂದ ಬಂದಿರುವುದರಿಂದ, ರು. ೩೨೬೦ ಕೋಟಿ ಕಡಿತವಾಗಿದೆ. ಇದು ರಾಜ್ಯದ ರೈತರ ಮೇಲೆ ಪರಿಣಾಮ ಬೀರಲಿದೆ ಎಂದರು.ಇದನ್ನು ಸರಿಪಡಿಸಲು ಕೇಂದ್ರದ ಸಹಕಾರ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ನಬಾರ್ಡ್‌ಗೆ ಇಲಾಖೆಯಿಂದ ಪತ್ರ ಬರೆದು ಸರಿಪಡಿಸುವಂತೆ ಕೋರಲಾಗಿತ್ತು. ಅಲ್ಲದೆ, ರಾಜ್ಯದ ಮುಖ್ಯಮಂತ್ರಿ ಕೇಂದ್ರದ ಹಣಕಾಸು ಸಚಿವರನ್ನು ಭೇಟಿ ಮಾಡಿ, ಸಮಸ್ಯೆಗಳನ್ನು ತೋಡಿಕೊಳ್ಳಲಾಗಿದೆ. ಆದರೆ, ಯಾವುದೇ ಉಪಯೋಗವಾಗಿಲ್ಲ. ಕೇಂದ್ರ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವ ಮೂಲಕ ಸಮಸ್ಯೆಯನ್ನು ಬಗೆಹರಿಸಿದಲ್ಲಿ ಮಾತ್ರ ಎಂದಿನಂತೆ ರೈತರಿಗೆ ನೆರವು ನೀಡಲು ಅವಕಾಶವಾಗುವುದು ಎಂದರು.
ಮುಂದಿನ ದಿನಗಳಲ್ಲಿ ಅರಣ್ಯ ಸಚಿವರೊಂದಿಗೆ, ಅಧಿಕಾರಿಗಳ ಸಭೆ ನಡೆಸಿ, ಸಿ ಮತ್ತು ಡಿ, ಜಮ್ಮಾ ಹಿಡುವಳಿ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಜಿಲ್ಲೆಯಲ್ಲಿ ೧೩೦ಕ್ಕೂ ಹೆಚ್ಚಿನ ಭೂ ಕಾನೂನಿದ್ದು, ರೈತರಿಗೆ ತಮ್ಮ ಜಮೀನಿಗೆ ಸಂಬಂಧಿಸಿದಂತೆ ಯಾವುದೇ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂದಿಗೂ ೧ ಲಕ್ಷ ರೈತರು ಸಾಲ ಪಡೆಯುವಲ್ಲಿ ವಂಚಿತರಾಗಿದ್ದು, ಸರ್ಕಾರ ಭೂ ದಾಖಲಾತಿ ಸಮಸ್ಯೆ ಸರಿಪಡಿಸಿ ರೈತರು ನೇರ ಸಾಲ ಪಡೆಯಲು ಅವಕಾಶ ಮಾಡಿಕೊಡಬೇಕೆಂದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಮಾತನಾಡಿ, ಜಿಲ್ಲೆಯಲ್ಲಿ ೭೩ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು, ೩೭,೬೧೬ ಸದಸ್ಯರಿದ್ದು, ೩೪೫೬೬ ಸದಸ್ಯರಿಗೆ ರು. ೧೦೦೩ ಕೋಟಿ ಸಾಲ ನೀಡಲಾಗಿದೆ. ಆದರೆ, ಜಮ್ಮ ಮತ್ತು ಸಾಗು ಭೂ ದಾಖಲೆಗಳ ಸಮಸ್ಯೆಯಿಚಿದಾಗಿ ಹೆಚ್ಚಿನ ರೈತರು ಸಾಲ ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ವತಿಯಿಂದ ಕೃಷಿ ಭೂಮಿಯ ದಾಖಲಾತಿಯನ್ನು ಸರಿಪಡಿಸಿದಲ್ಲಿ ಇನ್ನೂ ೧.೨೫ ಲಕ್ಷ ರೈತರು ಸಾಲ ಪಡೆಯಲು ಅನುಕೂಲವಾಗುವುದು ಎಂದರು.ಸಹಕಾರ ಸಂಘಗಳಲ್ಲಿ ದುರುಪಯೋಗವಾಗುತ್ತಿರುವುದು ಹೆಚ್ಚಾಗುತ್ತಿದ್ದು, ಕಠಿಣ ಕಾನೂನನ್ನು ಜಾರಿಗೆ ತರುವ ಮೂಲಕ ತಪ್ಪು ಮಾಡಿದವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.
ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಎಚ್.ಆರ್. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ.ಎ. ಜೀವಿಜಯ, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸದಸ್ಯರಾದ ಎಚ್.ಕೆ. ಮಾದಪ್ಪ, ಉಮೇಶ್ ಉತ್ತಪ್ಪ, ಜಲಜಾ ಶೇಖರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪುರುಷೋತ್ತಮ್, ಸಹಕಾರ ಸಂಘಗಳ ಉಪನಿಬಂಧಕ ವಿಜಯಕುಮಾರ್, ಸಹಕಾರ ಸಂಘಗಳ ಉಪನಿಬಂಧಕರಾದ ಶೈಲಜಾ ಹಾಗೂ ಸಂಘದ ಉಪಾಧ್ಯಕ್ಷೆ ಸಿ.ಎ. ಮಮತಾ ಅಶೋಕ್‌ಕುಮಾರ್ ಮತ್ತು ನಿರ್ದೇಶಕರು ಇದ್ದರು.