ಸಾರಾಂಶ
ಉಭಯ ದಿಗ್ಗಜರದ್ದು ವಯಸ್ಸು ಮೀರಿದ ಗೆಳೆತನ. ಇಬ್ಬರೂ ದಕ್ಷತೆ, ಸಾಮರ್ಥ್ಯ ಹಾಗೂ ಅರ್ಹತೆ ಹೊಂದಿದ ಮಹಾಮಹಿಮರು. ಶಕ್ತಿ ಶಾರದೆಯ ಮೇಳದಿಂದ ಹೊರಹೊಮ್ಮಿದ ಅನುಭವಾಮೃತ ಸಾಹಿತ್ಯ ಪ್ರಿಯರನ್ನು ಮನತಣಿಸಿದೆ.
ಧಾರವಾಡ:
ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಜಿ.ಬಿ. ಜೋಶಿ ಹಾಗೂ ಕೀರ್ತಿನಾಥ ಕುರ್ತಕೋಟಿ ಸಮ್ಮಿಳಿತ ಶಕ್ತಿ ಶಾರದೆಯ ಮೇಳ ಎಂದು ಹಿರಿಯ ಸಾಹಿತಿ ಡಾ. ಕೃಷ್ಣ ಕಟ್ಟಿ ಹೇಳಿದರು.ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಅಭಿನಯ ಭಾರತಿ ಸಹಯೋಗದಲ್ಲಿ ಮನೋಹರ ಗ್ರಂಥಮಾಲೆ ಅಟ್ಟದಲ್ಲಿ ನಡೆದ ಜಿ.ಬಿ. ಜೋಶಿ ಹಾಗೂ ಕೀರ್ತಿನಾಥ ಕುರ್ತಕೋಟಿ ಸ್ಮರಣಾರ್ಥ ಜಿಬಿ-ಕೀರ್ತಿ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಭಯ ದಿಗ್ಗಜರದ್ದು ವಯಸ್ಸು ಮೀರಿದ ಗೆಳೆತನ. ಇಬ್ಬರೂ ದಕ್ಷತೆ, ಸಾಮರ್ಥ್ಯ ಹಾಗೂ ಅರ್ಹತೆ ಹೊಂದಿದ ಮಹಾಮಹಿಮರು. ಶಕ್ತಿ ಶಾರದೆಯ ಮೇಳದಿಂದ ಹೊರಹೊಮ್ಮಿದ ಅನುಭವಾಮೃತ ಸಾಹಿತ್ಯ ಪ್ರಿಯರನ್ನು ಮನತಣಿಸಿತು ಎಂದ ಅವರು, ಕಿರಿಯರನ್ನು ಬೆಳೆಸುವ ಮನಸ್ಸು ಹಾಗೂ ಶಕ್ತಿ ಜಿಬಿ ಹಾಗೂ ಕೀರ್ತಿ ಅವರಿಬ್ಬರಿಗೂ ಇತ್ತು ಎಂದು ನುಡಿದರು.ಹಿರಿಯ ಚಿಂತಕ ಶ್ರೀನಿವಾಸ ವಾಡಪ್ಪಿ ಮಾತನಾಡಿ, ಜಿಬಿ-ಕೀರ್ತಿ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿ, ಸಾಹಿತ್ಯ ಪರಂಪರೆ ಕಟ್ಟಿಕೊಟ್ಟರು. ಅವರ ಸ್ನೇಹದ ಕುರಿತು ಕೃತಿ ರಚನೆಯಾಗಬೇಕು. ಅವರೊಂದಿಗಿದ್ದವರು ಅಂದಿನ ಅನುಭವಗಳನ್ನು ಕಟ್ಟಿಕೊಡಬೇಕು ಎಂದರು.
ಡಾ. ವಿ.ಟಿ. ನಾಯಕ ಮಾತನಾಡಿ, ಜಿ.ಬಿ. ಜೋಶಿ ಹಾಗೂ ಕೀರ್ತಿನಾಥ ಕುರ್ತಕೋಟಿ ಅವರು ಆದರ್ಶಪ್ರಾಯರಲ್ಲದೇ ಅನುಕರಣೀಯರಾಗಿದ್ದರು. ಜಿಬಿ ಬದುಕಿದ ಸಂದರ್ಭದಲ್ಲಿ ಅವರ ಸಾಹಿತ್ಯ, ನಾಟಕಗಳ ಕುರಿತು ಚರ್ಚೆ ನಡೆಯಬೇಕಿತ್ತು. ಪ್ರಯೋಗಶೀಲತೆ ಹಾಗೂ ಸಾಹಸ ಜಿಬಿ ಅವರ ಮುಖ್ಯ ಗುಣಗಳು. ಪುಸ್ತಕ ಪ್ರಕಾಶನವಿರಲಿ, ನಾಟಕ ಮಾಡುವುದಿರಲಿ ಎಂದಿಗೂ ಹಣದ ಬಗ್ಗೆ ವಿಚಾರ ಮಾಡಿದವರಲ್ಲ ಎಂದು ಹೇಳಿದರು.ಚಿಂತಕರಾದ ಹರ್ಷ ಡಂಬಳ, ವಿಶ್ವನಾಥ ಕೋಳಿವಾಡ ಜಿಬಿ-ಕೀರ್ತಿ ಅವರ ಕುರಿತಾಗಿ ಮಾತನಾಡಿದರು. ಡಾ. ಹ.ವೆಂ. ಕಾಖಂಡಿಕಿ ಸಂಯೋಜನೆ ಮಾಡಿದರು. ಡಾ. ಶಶಿಧರ ನರೇಂದ್ರ, ಡಾ. ಪ್ರಕಾಶ ಗರೂಡ, ರಮಾಕಾಂತ ಜೋಶಿ, ಅರವಿಂದ ಕುಲಕರ್ಣಿ, ಸಮೀರ ಜೋಶಿ ಇದ್ದರು.