ಜಿಪಿಎಲ್: ಗೆಲುವಿನ ನಾಗಾಲೋಟ ಮುಂದುವರಿಸಿದ ಎಲೈಟ್ ಸ್ಕ್ವಾಡ್-2

| Published : Apr 23 2024, 12:45 AM IST

ಸಾರಾಂಶ

ಎರಡನೇ ಪಂದ್ಯಾಟ ಎಲೈಟ್ ಸ್ಕ್ವಾಡ್-೨ ಮತ್ತು ಕೂರ್ಗ್ ಹಾಕ್ಸ್ ತಂಡಗಳ ನಡುವಿನ ಪಂದ್ಯ ಮಳೆಯಿಂದ ರದ್ದಾಗಿ ಡಿಎಲ್‌ಎಸ್ ನಿಯಮದ ಪ್ರಕಾರ ಎಲೈಟ್ ತಂಡ 29 ರನ್‌‌ಗಳಿಂದ ಗೆಲುವು ದಾಖಲಿಸಿತು‌.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಗೌಡ ಯುವ ವೇದಿಕೆಯಿಂದ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆಯುತ್ತಿರುವ ಜಿಪಿಎಲ್ ಸೀಸನ್-2 ಕ್ರಿಕೆಟ್ ಕೂಟದ ಸೋಮವಾರ ನಡೆದ ಪಂದ್ಯದಲ್ಲಿ ಎಲೈಟ್ ಸ್ಕ್ವಾಡ್-2 ತಂಡ ಗೆಲುವಿನ ನಾಗಾಲೋಟ ಮುಂದುವರಿಸಿದೆ.

ಮೊದಲ ಪಂದ್ಯದಲ್ಲಿ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ 5 ವಿಕೆಟ್‌ಗಳ ಜಯ ಗಳಿಸಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ದಿ ಮರಗೋಡಿಯನ್ಸ್ ನಿಗದಿತ 10 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿ 97 ರನ್‌ಗಳ ಟಾರ್ಗೆಟ್ ನೀಡಿತು.

ವರುಣ್ ರಾಜ್ ಬೇಕಲ್ 31 ಎಸೆತಗಳಿಗೆ 53 ರನ್ ಗಳಿಸುವ ಮೂಲಕ ಅರ್ಧ ಶತಕ ದಾಖಲಿಸಿದರು‌. ಪ್ಲಾಂಟರ್ಸ್ ಕ್ಲಬ್ ಪರ ತುಷಾರ್ ಮೂವನ ಮತ್ತು ಮಿತ್ರ ಪೂಜಾರಿರ ತಲಾ 2 ವಿಕೆಟ್ ಪಡೆದರು.

ನಂತರ ಬೆನ್ನಟ್ಟಿದ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ 9.1 ಓವರಿಗೆ 5 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿ ಜಯದ ನಗೆ ಬೀರಿದರು. ಪರ್ಲಕೋಟಿ ಜಶ್ವಿತ್ ಬೋಪಣ್ಣ 19 ಎಸೆತಗಳಿಗೆ 27 ರನ್ ಗಳಿಸಿದರು. ದಿ ಮರಗೋಡಿಯನ್ಸ್ ಪರ ಹೊಸೊಕ್ಲು ಸುನಿಲ್ 2 ವಿಕೆಟ್ ಪಡೆದರು.

ಎರಡನೇ ಪಂದ್ಯಾಟ ಎಲೈಟ್ ಸ್ಕ್ವಾಡ್-೨ ಮತ್ತು ಕೂರ್ಗ್ ಹಾಕ್ಸ್ ತಂಡಗಳ ನಡುವಿನ ಪಂದ್ಯ ಮಳೆಯಿಂದ ರದ್ದಾಗಿ ಡಿಎಲ್‌ಎಸ್ ನಿಯಮದ ಪ್ರಕಾರ ಎಲೈಟ್ ತಂಡ 29 ರನ್‌‌ಗಳಿಂದ ಗೆಲುವು ದಾಖಲಿಸಿತು‌.ಟಾಸ್ ಗೆದ್ದ ಎಲೈಟ್ ತಂಡ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಕೂರ್ಗ್ ಹಾಕ್ಸ್ ತಂಡ ನಿಗದಿತ 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿತು. ತಂಡದ ಪರ ಕಾಳಮನೆ ಕೀರ್ತನ್ 27 ಎಸೆತಗಳಲ್ಲಿ 37 ರನ್ ಗಳಿಸಿದರು. ಕೊಂಬಾರನ ಹರ್ಷ 13 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿದರು. ಎಲೈಟ್ ತಂಡದ ಪರವಾಗಿ ಮನ್ವಿತ್ ಕಲ್ಲುಗದ್ದೆ, ದೀಕ್ಷಿತ್ ಕುತ್ಯಾಳ ಮತ್ತು ರಾಹುಲ್ ಎಎಸ್ ತಲಾ ಒಂದು ವಿಕೆಟ್ ಪಡೆದರು.ನಂತರ ಬ್ಯಾಟ್ ಮಾಡಿದ ಎಲೈಟ್ ಸ್ಕ್ವಾಡ್-೨ ತಂಡ 6.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 85 ರನ್ ಗಳಿಸಿತು. ಇದೇ ಸಂದರ್ಭದಲ್ಲಿ ಮಳೆಯ ಆಗಮನವಾಗಿದ್ದು‌, ಪಂದ್ಯ ನಡೆಸಲು ಆಗದೆ ಡಿ‌ಎಲ್‌ಎಸ್ ನಿಯಮದ ಪ್ರಕಾರ ಎಲೈಟ್ ತಂಡ 29 ರನ್‌ಗಳಿಂದ ಗೆಲುವು ದಾಖಲಿಸಿತು. ತಂಡದ ಪರ ರಾಹುಲ್ ಎ.ಎಸ್. ಸತತ ಮೂರನೇ ಅರ್ಧಶತಕ ದಾಖಲಿಸಿದರು‌. 25 ಎಸೆತಗಳಲ್ಲಿ 54 ರನ್ ಗಳಿಸಿದರು.

ಮರಗೋಡಿಯನ್ಸ್ ಮತ್ತು ಕಾಫಿ ಕ್ರಿಕೇಟರ್ಸ್ ತಂಡದ ನಡುವೆ ನಡೆಯ ಬೇಕಿದ್ದ ಪಂದ್ಯ ಮಳೆಯ ಕಾರಣ ರದ್ದಾಗಿದ್ದು. ಏ.೨೪ ರಂದು ನಡೆಯಲಿದೆ.