ಜಿಪಿಎಲ್ ಸೀಸನ್ 2: ಎಂಸಿಬಿ, ಕೂರ್ಗ್ ವಾರಿಯರ್ಸ್, ಎಲೈಟ್ ಗೆಲವು

| Published : Apr 20 2024, 01:08 AM IST

ಸಾರಾಂಶ

ಮಡಿಕೇರಿ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆಯುತ್ತಿರುವ ಜಿಪಿಎಲ್ ಸೀಸನ್ 2 ಕ್ರಿಕೆಟ್‌ ಕೂಟದ ಶುಕ್ರವಾರ ನಡೆದ ಪಂದ್ಯದಲ್ಲಿ ಎಂಸಿಬಿ, ಕೂರ್ಗ್ ವಾರಿಯರ್ಸ್, ಎಲೈಟ್ ತಂಡಗಳು ಗೆಲವು ಸಾಧಿಸಿವೆ. ಮೊದಲ ಪಂದ್ಯದಲ್ಲಿ ಎಂಸಿಬಿ ತಂಡ ಫೀನಿಕ್ಸ್ ಫ್ಲೈಯರ್ಸ್ ಎದುರು 42 ರನ್ ಗಳಿಂದ ಜಯ ಗಳಿಸಿತು

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಗೌಡ ಯುವ ವೇದಿಕೆಯಿಂದ ನಗರ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆಯುತ್ತಿರುವ ಜಿಪಿಎಲ್ ಸೀಸನ್ 2 ಕ್ರಿಕೆಟ್‌ ಕೂಟದ ಶುಕ್ರವಾರ ನಡೆದ ಪಂದ್ಯದಲ್ಲಿ ಎಂಸಿಬಿ, ಕೂರ್ಗ್ ವಾರಿಯರ್ಸ್, ಎಲೈಟ್ ತಂಡಗಳು ಗೆಲವು ಸಾಧಿಸಿವೆ.

ಮೊದಲ ಪಂದ್ಯದಲ್ಲಿ ಎಂಸಿಬಿ ತಂಡ ಫೀನಿಕ್ಸ್ ಫ್ಲೈಯರ್ಸ್ ಎದುರು 42 ರನ್ ಗಳಿಂದ ಜಯ ಗಳಿಸಿತು. ಫೀನಿಕ್ಸ್ ಫ್ಲೈಯರ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಅನ್ನು ಆಯ್ಕೆ ಮಾಡಿಕೊಂಡಿತು. ಎಂಸಿಬಿ ನಿಗದಿತ 10 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿ 118 ರನ್ ಗಳ ಟಾರ್ಗೆಟ್ ನೀಡಿತು. ಹರ್ಷಿತ್ 21 ಎಸೆತಕ್ಕೆ 45 ರನ್ ಗಳಿಸಿದರು. ಫೀನಿಕ್ಸ್ ಫ್ಲೈಯರ್ಸ್ ಪರ ಅವಿನ್ ಮಾಲಿ, ವರುಣ್ ಕಾಳೆಯಂಡ, ಚಂದನ್ ರಾಜ್ ಬೇಕಲ್, ಶ್ರೇಯಸ್ ಟಿ ಕೆ ಒಂದೊಂದು ವಿಕೆಟ್ ಪಡೆದರು.

ನಂತರ ಗುರಿ ಬೆನ್ನಟ್ಟಿದ ಫೀನಿಕ್ಸ್ ಫ್ಲೈಯರ್ಸ್ 8 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಪ್ರಧಾನ್ ಕಡ್ಲೇರ 11 ಎಸೆತಗಳಲ್ಲಿ 23 ರನ್ ಪಡೆದರು. ಚಂದನ್ ರಾಜ್ ಬೇಕಲ್ 11 ಎಸೆತಕ್ಕೆ 18 ರನ್ ಪೇರಿಸಿದರು. ಎಂಸಿಬಿ ಪರ ಮಂಜೀತ್ 2 ಓವರಿನಲ್ಲಿ 2 ವಿಕೆಟ್ ಪಡೆದರು.

ದಿನದ ಎರಡನೇ ಪಂದ್ಯದಲ್ಲಿ ಕೂರ್ಗ್ ವಾರಿಯರ್ಸ್ ತಂಡ ಜಿ. ಕಿಂಗ್ಸ್ ಸಿದ್ಲಿಂಗಪುರ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತು. ಕೂರ್ಗ್ ವಾರಿಯರ್ಸ್ ತಂಡ ಟಾಸ್ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಜಿ. ಕಿಂಗ್ಸ್ ನಿಗದಿತ 10 ಓವರ್ ಗಳಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡು 56 ರನ್ ಗಳನ್ನು ಗಳಿಸಿ 57 ರನ್ ಗಳ ಟಾರ್ಗೆಟ್ ನೀಡಿತು. ಜಿ.ಕಿಂಗ್ಸ್ ಪರ ಧನಂಜಯ್ ಕುಮಾರ್ 20 ಎಸೆತಕ್ಕೆ 15 ರನ್ ಗಳಿಸಿದರು. ಕೂರ್ಗ್ ವಾರಿಯರ್ಸ್ ಪರ ಮಿಥುನ್ ಕುದುಕುಳಿ ಒಂದು ಓವರಿನಲ್ಲಿ 3 ವಿಕೆಟ್ ಪಡೆದು ಯಶಸ್ವೀ ಬೌಲರ್ ಎನಿಸಿದರು. ಪುನೀತ್ ಪೃಥ್ವಿ ಮತ್ತು ಮೋಹಿತ್ ತಲಾ ಎರಡು ವಿಕೆಟ್ ಪಡೆದರು.

ನಂತರ ಬೆನ್ನಟ್ಟಿದ ಕೂರ್ಗ್ ವಾರಿಯರ್ಸ್ ತಂಡ ಒಂದು ವಿಕೆಟ್ ನಷ್ಟಕ್ಕೆ 57 ರನ್‌ಗಳನ್ನು ಗಳಿಸಿ ಜಯದ ನಗೆ ಬೀರಿತು. ಅನಿಲ್ ಕುಡೆಕಲ್ 13 ಎಸೆತಗಳಿಗೆ 36 ರನ್ ಗಳಿಸಿದರು. ಗೋಪಿತ್ ಬೆಳ್ಳಿಮಾನಿ 8 ಎಸೆತಗಳಿಗೆ 12 ರನ್ ಗಳಿಸಿದರು. ಜಿ. ಕಿಂಗ್ಸ್ ಪರ ಮೂವನ ಭರತ್ ಒಂದು ವಿಕೆಟ್ ಪಡೆದರು. ಜಿ. ಕಿಂಗ್ಸ ತಂಡದ ರಿಷಿ ಬೋಪಣ್ಣನವರು ಬೇಗನೆ ಔಟಾಗಿದ್ದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು.

ಕೂರ್ಗ್ ವಾರಿಯರ್ಸ್ ತಂಡದಲ್ಲಿ ಖ್ಯಾತಿ ಕಾವೇರಮ್ಮ ಚೆರಿಯಮನೆ ಆಡಿ ಗಮನ ಸೆಳೆದರು. ಜಿಪಿಎಲ್ ಸೀಸನ್ 2 ನಲ್ಲಿ ಮೈದಾನಕ್ಕಿಳಿದ ಮೊದಲ ಮಹಿಳಾ ಆಟಗಾರ್ತಿಯಾಗಿದ್ದಾರೆ.

ಎಂಸಿಬಿ ಮತ್ತು ಎಲೈಟ್ ತಂಡದ ನಡುವೆ ನಡೆದ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಎಲೈಟ್ ತಂಡ ನಿಗದಿತ 10 ಓವರ್‌ಗೆ 6 ವಿಕೆಟ್ ನಷ್ಟಕ್ಕೆ 101 ಗಳಿಸಿತು‌. ತಂಡದ ಪರವಾಗಿ ಹೊಸೂರು ಹಿತಕೃತ್ 25 ಎಸೆತಗಳಲ್ಲಿ 33 ರನ್ ಗಳಿಸಿದರು. ಕಾರ್ತಿಕ್ 21 ಎಸೆತದಲ್ಲಿ 20 ರನ್ ಗಳಿಸಿದರು. ಎಂಸಿಬಿ ತಂಡದ ಪರವಾಗಿ ಕುಶ್ವಂತ್ ಕೋಳಿಬೈಲು, ಉಳುವಾರನ ಪ್ರಫುಲ್ ಮತ್ತು ಕೆದಂಬಾಡಿ ಚೇತನ್ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಎಂ.ಸಿ.ಬಿ ತಂಡ ನಿಗದಿತ 10 ಓವರ್ ಗೆ 5 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿ 5 ರನ್ ಗಳಿಂದ ಸೋಲೊಪ್ಪಿಕೊಂಡಿತು. ನಿತಿನ್ ಚೊಕ್ಕಾಡಿ 17 ಎಸೆತದಲ್ಲಿ 23 ರನ್ ಗಳಿಸಿದರು. ಎಲೈಟ್ ತಂಡದ ಪರವಾಗಿ ನಿತಿನ್ ಕುಮಾರ್ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಎಡಿಕೇರಿ ಗಣಿತ್, ಶರತ್ ಚೊಕ್ಕಾಡಿ ಮತ್ತು ಯತಿನ್ ತಲಾ ಒಂದು ವಿಕೆಟ್ ಪಡೆದರು..............

ಇಂದಿನ ಪಂದ್ಯ

ಪೂಲ್ ಎ

ಜಿ.ಕಿಂಗ್ಸ್ - ಫೀನಿಕ್ಸ್ ಫ್ಲೈಯರ್ಸ್

ಕೂರ್ಗ್ ವಾರಿಯರ್ಸ್ -ಎಲೈಟ್ ಕ್ರಿಕೆಟ್ ಕ್ಲಬ್.................

ಪೂಲ್ ಬಿ

ಕೂರ್ಗ್ ಹಾಕ್ಸ್ - ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ.