ಸಾರಾಂಶ
ಕನ್ನಡಪ್ರಭ ವಾರ್ತೆ ದೇವರ ಹಿಪ್ಪರಗಿ
ತಾಲೂಕಿನ ಮುಳಸಾವಳಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ನಿವಾಳಖೇಡ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗೆ ಶನಿವಾರ ಜಿಪಂ ಸಿಇಒ ರಿಷಿ ಆನಂದ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಂತರ ಊಟದ ಕೊಠಡಿಗೆ ಭೇಟಿ ನೀಡಿ ಬಿಸಿಯೂಟ ಸೇವಿಸಿ ಮಕ್ಕಳಿಗೆ ನೀಡುವ ಬಿಸಿಯೂಟದಲ್ಲಿ ಹೆಚ್ಚು ತರಕಾರಿ ಬೇಳೆ ಕಾಳು ಇರುವ ಪದಾರ್ಥಗಳನ್ನು ಬಳಸಬೇಕು. ಶುದ್ಧ ನೀರು, ಹಾಲು ಶಾಲಾ ಆವರಣದಲ್ಲಿ ಕಿಚನ್ ಗಾರ್ಡನ್ ಮಾಡಿ, ಶಾಲಾ ಆವರಣವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು. ಶೌಚಾಲಯ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಶಾಲಾ ಮುಖ್ಯೋಪಾಧ್ಯಾಯ ಆರ್.ಎಸ್.ಬಿರಾದಾರ ಅವರಿಗೆ ಸೂಚಿಸಿದರು,
ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಉತ್ತಮ ಗುಣಮಟ್ಟದ ಕಿಟಕಿ, ಫ್ಯಾನ್ ಮತ್ತು ಟ್ಯೂಬ್ ಲೈಟ್ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.ಗ್ರಾಮ ಪಂಚಾಯಿತಿ ಪಿಡಿಒ ಜಿ.ಸಿ.ಕನ್ನೋಳಿ ಅವರಿಗೆ ಗ್ರಾಪಂ, ಚರಂಡಿ ವ್ಯವಸ್ಥೆ, ವ್ಯವಸ್ಥಿತವಾಗಿ ಕಸ ವಿಲೇವಾರಿ ಮಾಡಬೇಕು. ಕಸ ವಿಲೇವಾರಿ ಮಾಡುವ ವಾಹನಕ್ಕೆ ಸ್ವಸಹಾಯ ಸಂಘದ ಮಹಿಳಾ ಚಾಲಕಿಗೆ ಕೆಲಸ ಒದಗಿಸಬೇಕು ಎಂದು ಅವರಿಗೆ ಸೂಚಿಸಿದರು.
ನಂತರ ಚಿಕ್ಕರೂಗಿ ಗ್ರಾಪಂ ವ್ಯಾಪ್ತಿಯ ಕಡ್ಲೆವಾಡ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಪಾಯದ ಅಂಚಿನಲ್ಲಿರುವ ಕೊಠಡಿಗಳನ್ನು ತೆರವು ಮಾಡಿ, ಆ ಕೊಠಡಿಗಳಲ್ಲಿ ಬೋಧನೆ ಮಾಡಬಾರದು. ಶಾಲಾ ಕಾಂಪೌಂಡ್ ನಿರ್ಮಾಣ ಮಾಡಿ ಎಂದು ಪಂಚಾಯತರಾಜ್ ಎಡಿ ಶಿವಾನಂದ ಮೂಲಿಮನಿ ಅವರಿಗೆ ಸೂಚಿಸಿದರು. ಶಾಲಾ ಶೌಚಾಲಯವನ್ನು ವೀಕ್ಷಿಸಿ ಶೌಚಾಲಯವನ್ನು ಪ್ರತಿದಿನ ಸ್ವಚ್ಛಗೊಳಿಸಿ, ಬಿಸಿಯೂಟ ಕೋಣೆ ಪಿನಾಯಿಲ್‌ನಿಂದ ಪ್ರತಿನಿತ್ಯ ಸ್ವಚ್ಛಗೊಳಿಸಬೇಕು. ರೋಗ ರುಜಿನ ಬಾರದಂತೆ ನೋಡಿಕೊಳ್ಳಬೇಕು ಎಂದು ಮುಖ್ಯೋಪಾಧ್ಯಾಯ ಎ.ವಿ.ತಳಕೇರಿ ಅವರಿಗೆ ಸೂಚಿಸಿದರು.ಶಾಲಾ ಕಾಂಪೌಂಡ್, ಶೌಚಾಲಯ, ಅಡುಗೆ ಕೋಣೆ ಸ್ವಚ್ಛತಾ ಕ್ರಮ, ಕುಡಿಯುವ ನೀರು, ಶಾಲಾ ಗೇಟ್ ನಿರ್ಮಾಣ ಎಲ್ಲವುಗಳನ್ನು ಸರಿಪಡಿಸಿ ಏಳು ದಿನದ ಒಳಗಾಗಿ ಜಿಲ್ಲಾ ಪಂಚಾಯಿತಿಗೆ ವರದಿ ನೀಡುವಂತೆ ಮುಖ್ಯೋಪಾಧ್ಯಾಯರಿಗೆ ತಿಳಿಸಿದರು.
ಈಗಾಗಲೇ ನರೇಗಾ ಯೋಜನೆ ಅಡಿ ಶಾಲಾ ಕಾಂಪೌಂಡ್, ಕಿಚನ್ ಗಾರ್ಡನ್, ಶುದ್ಧ ಕುಡಿಯುವ ನೀರು ಮಕ್ಕಳಿಗೆ ನೀಡುವಂತೆ ಪಿಡಿಒ ಅವರಿಗೆ ಸೂಚಿಸಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚೆಲುವಯ್ಯ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾಹಿತಿ ಒದಗಿಸಿದರು.ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚಲುವಯ್ಯ, ಪಂಚಾಯತ್ ಸಹಾಯಕ ನಿರ್ದೇಶಕ ಪಂಚಾಯತ್ ರಾಜ್ ಶಿವಾನಂದ ಮೂಲಿಮನಿ, ಸಹಾಯಕ ನಿರ್ದೇಶಕರು ನರೇಗಾ ಶಾಂತಗೌಡ ನ್ಯಾಮಣ್ಣವರ, ಸಿಂದಗಿ ಜಿಪಂ ಎಇಇ ಜಿ.ವೈ.ಮುರಾಳ, ತಾಂತ್ರಿಕ ಸಂಯೋಜಕ ಶರಣಗೌಡ, ಚಿಕ್ಕರೂಗಿ ಗ್ರಾಪಂ, ಅಧ್ಯಕ್ಷ ಸಿದ್ಧಗೊಂಡಪ್ಪಗೌಡ ಪಾಟೀಲ್, ಶಶಿಕಾಂತ, ಬಾಲಚಂದ್ರ, ರುದ್ರಗೌಡ, ಗ್ರಾಪಂ ಅಧ್ಯಕ್ಷರ ಪ್ರತಿನಿಧಿಗಳಾದ ಗುರುರಾಜ ಆಕಳವಾಡಿ , ಸಿಂದಗಿ ಸಿಡಿಪಿಓ ಶಂಭುಲಿಂಗ ಹಿರೇಮಠ, ಗೊಲ್ಲಾಳ, ಐ ಇ ಸಿ ಸಂಯೋಜಕ ಸಿದ್ದು ಕಾಂಬಳೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.
---