ನರೇಗಾಗೆ ಹೊಸ ಮಸೂದೆ ತಂದಿರುವ ಕೇಂದ್ರ ಸರ್ಕಾರದ ನಡೆಗೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ವಿರೋಧ ವ್ಯಕ್ತಪಡಿಸಿ ಶುಕ್ರವಾರ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನರೇಗಾಗೆ ಹೊಸ ಮಸೂದೆ ತಂದಿರುವ ಕೇಂದ್ರ ಸರ್ಕಾರದ ನಡೆಗೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಶುಕ್ರವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆ ಪದಾಧಿಕಾರಿಗಳು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ದುರ್ಬಲಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ವಿಬಿಜಿ ರಾಮ್ ಜಿ ಜಾರಿಗೆ ತಂದಿದ್ದು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಿಬಿಜಿ ರಾಮ್ ಜಿ ಮಸೂದೆಯು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲಿದೆ. ಇದು ಉದ್ಯೋಗದ ಹಕ್ಕನ್ನು ಕೇಂದ್ರದ ಮರ್ಜಿಗೆ ಒಳಪಡಿಸಿ ಕಾರ್ಮಿಕರನ್ನು ಗುಲಾಮಗಿರಿಗೆ ದೂಡಲಿದೆ ಎಂದು ಪ್ರತಿಭಟನಾಕಾರರು ದೂರಿದರು.

ಜನವರಿ 26 ರಂದು ನಡೆದ ಗ್ರಾಮ ಸಭೆಗಳಲ್ಲಿ ಈ ಹೊಸ ಕಾನೂನಿನ ವಿರುದ್ಧ ಈಗಾಗಲೇ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗಿದೆ. ಜನರ ಆಶಯಕ್ಕೆ ವಿರುದ್ಧವಾಗಿ ಕಾನೂನು ರೂಪಿಸದಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ಕನಿಷ್ಠ ವೇತನದ ಹಕ್ಕನ್ನು ಬದಿಗಿರಿಸಿ, ಕೇಂದ್ರ ಸರ್ಕಾರವೇ ವೇತನ ಮತ್ತು ಕಾಮಗಾರಿಗಳನ್ನು ನಿರ್ಧರಿಸುವ ಕ್ರಮವು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುತ್ತದೆ ಎಂದು ಆರೋಪಿಸಿದರು.

​ಗಾಂಧಿ ಹತ್ಯೆಯಾದ ದಿನದಂದೇ ಮನವಿ ಸಲ್ಲಿಸಲಾಗಿದೆ.ಗಾಂಧೀಜಿಯವರ ಆಶಯದಂತೆ ಬೇಡಿಕೆ ಆಧಾರಿತ ಮತ್ತು ಸಾರ್ವತ್ರಿಕ ಉದ್ಯೋಗದ ಹಕ್ಕನ್ನು ನೀಡುವ ಹಳೆಯ ನರೇಗಾ ಕಾನೂನನ್ನೇ ಮುಂದುವರಿಸಬೇಕು ಎಂದು ಒತ್ತಾಯಿಯಸಿದರು.

​ಚಿತ್ರದುರ್ಗ ಜಿಲ್ಲೆಯ ವಿವಿಧ ಗ್ರಾಮಗಳ ಕೂಲಿ ಕಾರ್ಮಿಕರು ಮತ್ತು ಗ್ರಾಕೂಸ್ ಪದಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ಹಕ್ಕುಗಳ ರಕ್ಷಣೆಗಾಗಿ ಧ್ವನಿ ಎತ್ತಿದರು. ಮಂಜಮ್ಮ , ಪರಮೇಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.