ಶೈಕ್ಷಣಿಕ ಪ್ರಗತಿಗೆ ಪದವಿ ಕಾಲೇಜುಗಳು ಶ್ರಮಿಸಲಿ: ಪ್ರೊ.ಜೆ.ತಿಪ್ಪೇರುದ್ರಪ್ಪ

| Published : May 14 2024, 01:05 AM IST

ಶೈಕ್ಷಣಿಕ ಪ್ರಗತಿಗೆ ಪದವಿ ಕಾಲೇಜುಗಳು ಶ್ರಮಿಸಲಿ: ಪ್ರೊ.ಜೆ.ತಿಪ್ಪೇರುದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಬದಲಾಗುತ್ತಿರುವ ಶಿಕ್ಷಣ ನೀತಿಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪದವಿ ಕಾಲೇಜುಗಳು ಶ್ರಮಿಸಬೇಕು.

ಬಳ್ಳಾರಿ: ಇಲ್ಲಿನ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಹಾಗೂ ವೀರಶೈವ ವಿದ್ಯಾವರ್ಧಕ ಸಂಘದಡಿ ಕಾರ್ಯನಿರ್ವಹಿಸುವ ಪದವಿ ಮಹಾವಿದ್ಯಾಲಯಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರುಗಳಿಗೆ ಒಂದು ದಿನದ ಸಮಗ್ರ ಪ್ರಶಿಕ್ಷಣ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಉದ್ಘಾಟಿಸಿ ಮಾತನಾಡಿದ ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜೆ.ತಿಪ್ಪೇರುದ್ರಪ್ಪ, ಬದಲಾಗುತ್ತಿರುವ ಶಿಕ್ಷಣ ನೀತಿಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪದವಿ ಕಾಲೇಜುಗಳು ಶ್ರಮಿಸಬೇಕು. ಶಿಕ್ಷಣ ಮತ್ತು ಸಂಸ್ಕಾರ ಜೀವನದ ಮೂಲ ಮಂತ್ರಗಳಾಗಿದ್ದು, ಇವರೆಡನ್ನು ಪಡೆದ ವ್ಯಕ್ತಿ ಸುಸಂಸ್ಕತನಾಗುತ್ತಾನೆ. ಅಕ್ಷರ ಕಲಿತ ವ್ಯಕ್ತಿ ಭ್ರಷ್ಟನಾಗಬಹುದು. ಆದರೆ, ಸಂಸ್ಕಾರ ಪಡೆದ ವ್ಯಕ್ತಿ ಎಂದಿಗೂ ಭ್ರಷ್ಟನಾಗಲಾರ. ಪ್ರಸ್ತುತ ಕಾಲಘಟ್ಟದಲ್ಲಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡುವುದು ಬಹಳ ಅಗತ್ಯವಿದೆ. ಈ ದಿಸೆಯಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳು ಚಿಂತನೆ ನಡೆಸಿ, ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಹೇಳಿದರು.

ನೂರು ವರ್ಷಗಳ ಇತಿಹಾಸ ಇರುವ ವೀರಶೈವ ವಿದ್ಯಾವರ್ಧಕ ಸಂಘದಡಿ ಬರುವ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾ ಬಂದಿವೆ. ಸಂಘದಡಿ ಬರುವ ಶಿಕ್ಷಣ ಸಂಸ್ಥೆಗಳಲ್ಲಿ ಓದಿದ ಲಕ್ಷಾಂತರ ಜನರು ಉತ್ತಮ ಭವಿಷ್ಯ ಕಟ್ಟಿಕೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶಿಕ್ಷಣ ನೀತಿಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುವ ವೀವಿ ಸಂಘದ, ಆಡಳಿತ ವೈಖರಿಯಿಂದಾಗಿಯೇ ಅದೆಷ್ಟೇ ಶೈಕ್ಷಣಿಕ ಸಂಸ್ಥೆಗಳ ಪೈಪೋಟಿಗಳ ನಡುವೆ ವೀವಿ ಸಂಘದ ಶಿಕ್ಷಣ ಸಂಸ್ಥೆಗಳು ಮುಂಚೂಣಿಯಲ್ಲಿವೆ ಎಂದು ಹೇಳಿದರು. ದಿಕ್ಸೂಚಿ ಭಾಷಣ ಮಾಡಿದ ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ಡೀನ್ ಪ್ರೊ. ಜಿ.ಆರ್. ಅಂಗಡಿ, ಹೊಸ ಶಿಕ್ಷಣ ನೀತಿ, ಸಮಗ್ರ ಶಿಕ್ಷಣದ ಸ್ವರೂಪ, ಸಂರಚನೆ, ಉದ್ದೇಶಗಳು, ಅನುಕೂಲತೆಗಳು, ಹೊಸ ಕೋರ್ಸ್ ಗಳನ್ನು ಆರಂಭಿಸಲು ಅನುಸರಿಸಬೇಕಾದ ನಿಯಮ-ನಿಬಂಧನೆಗಳು ಕುರಿತು ತಿಳಿಸಿಕೊಟ್ಟರು. ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಅರವಿಂದ ಪಟೇಲ್, ಸಹಕಾರ್ಯದರ್ಶಿ ಯಾಳ್ಪಿ ಮೇಟಿ ಪೊಂಪನಗೌಡ, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಂ.ಶರಣಬಸವನಗೌಡ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಕೋರಿ ವಿರುಪಾಕ್ಷಪ್ಪ, ಮಾಜಿ ಸಿಂಡಿಕೇಟ್ ಸದಸ್ಯ ಪ್ರೊ. ಜಯಪ್ರಕಾಶ್ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ಎ. ಹಿರೇಮಠ್, ವಿವಿಧ ಪದವಿ ಬಿ.ಇಡಿ. ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.

ಜಡೇಶ ಎಮ್ಮಿಗನೂರು, ಡಾ.ಸತೀಶ್ ಎ. ಹಿರೇಮಠ್, ವೀರಶೈವ ಕಾಲೇಜಿನ ಪ್ರಾಚಾರ್ಯ ಪ್ರೊ. ಮನೋಹರ್‌ ಹಾಗೂ ಹಡಗಲಿ ಜಿ.ಬಿ.ಆರ್. ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್.ಎಸ್. ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು.