ಸಾರಾಂಶ
ರಾಮನಗರ: ಪದವೀಧರರಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡರನ್ನು ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಬೆಂಬಲಿಸುವಂತೆ ದಲಿತ ಸಂಘಟನೆಗಳ ಮುಖಂಡ ಶಿವಕುಮಾರಸ್ವಾಮಿ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರು ಮತ್ತು ಪದವೀಧರರ ಸಮಸ್ಯೆಗಳ ಬಗ್ಗೆ ಸರ್ಕಾರಗಳ ಗಮನ ಸೆಳಯುವುದರಲ್ಲಿ ಪ್ರಮುಖ ಪಾತ್ರವಹಿಸಿ ನ್ಯಾಯ ದೊರಕಿಸಲು ಹೋರಾಟ ಮಾಡುತ್ತಿದ್ದಾರೆ. ರಾಮೋಜಿಗೌಡರನ್ನು ಗೆಲ್ಲಿಸಿದರೆ ಪದವೀಧರರ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಅನುಕೂಲವಾಗುತ್ತದೆ ಎಂಬ ವಿಶ್ವಾಸದಲ್ಲಿ ಅವರನ್ನು ಬೆಂಬಲಿಸುತ್ತಿದ್ದೇವೆ ಎಂದರು.ರಾಮೋಜಿಗೌಡರು ಪದವೀಧರರಿಗಾಗಿ ಉದ್ಯೋಗ ಮೇಳ ಆಯೋಜಿಸಿ ಸಾವಿರಾರು ಮಂದಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ. ಕೌಶಲ್ಯ ತರಬೇತಿ ಕೊಟ್ಟು ಉದ್ಯೋಗ ಪಡೆಯಲು ಅನುಕೂಲ ಕಲ್ಪಿಸಿದ್ದಾರೆ. ಅವರು ಮೇಲ್ಮನೆಗೆ ಆಯ್ಕೆಯಾದಲ್ಲಿ ಪದವೀಧರರ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೋರಾಟ ನಡೆಸುತ್ತಾರೆ ಎಂದು ಹೇಳಿದರು.
ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ, ಹೊರಗುತ್ತಿಗೆಯಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಆಧ್ಯತೆ ನೀಡಲು ದಲಿತ ಸಮುದಾಯ ಸರ್ಕಾರಗಳನ್ನು ಆಗ್ರಹಿಸುತ್ತಿದೆ. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಹೆಜ್ಜೆಗಳನ್ನು ಇಡುತ್ತಿದೆ. ಹಾಗಾಗಿ ರಾಮೋಜಿಗೌಡ ಗೆಲ್ಲಿಸುವ ಮೂಲಕ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.ಪದವೀಧರರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಅವಕಾಶ ಕಲ್ಪಿಸಬೇಕು. ಪಪಂ, ಪಜಾ ಸಮುದಾಯಗಳಿಗೆ ಆದ್ಯತೆ ನೀಡಬೇಕು ಎಂಬ ಸರ್ಕಾರಕ್ಕೆ ಷರತ್ತಿನಲ್ಲಿ ರಾಮೋಜಿಗೌಡರನ್ನು ಬೆಂಬಲಿಸಲಾಗುತ್ತಿದೆ. ರಾಮನಗರದಲ್ಲಿ 1200 ಕ್ಕೂ ಹೆಚ್ಚು ಮಂದಿ ಎಸ್ಸಿ,ಎಸ್ಟಿ ಪದವೀಧರರು ನೋಂದಾಯಿಸಿಕೊಂಡಿದ್ದು, ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪರ ರಾಮೋಜಿಗೌಡ ಅವರಿಗೆ ಟಿಕೆಟ್ ನೀಡಿದೆ. ತಾವು ಸಹ ಪಕ್ಷದ ಚೌಕಟ್ಟಿನಲ್ಲಿ ಇರುವ ಕಾರಣ ಅವರ ಪರವಾಗಿ ಪ್ರಚಾರ ಮಾಡುತ್ತೇವೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ನಾಯಕರೇ ಕ್ರಮ ವಹಿಸುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.ಬಿವಿಎಸ್ ಜಿಲ್ಲಾಧ್ಯಕ್ಷ ವೆಂಕಟೇಶ್ ಮಾತನಾಡಿ, ಈವರೆಗೆ ಗೆದ್ದವರು ಪದವೀಧರರ ಸಮಸ್ಯೆಗಳನ್ನು ಆಲಿಸಲಿಲ್ಲ, ಕಷ್ಟ ಸುಖದಲ್ಲಿ ಭಾಗಿಯಾಗಲಿಲ್ಲ. ರಾಮೋಜಿಗೌಡರು ಉದ್ಯೋಗ ಮೇಳ, ಭರವಸೆ ನೀಡಿದ್ದಾರೆ. ಹಾಗಾಗಿ ಬೆಂಬಲ ನೀಡುತ್ತಿದ್ದೇವೆ ಎಂದರು.
ಎಸ್ಸಿಎಸ್ಟಿ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗವಿಯಪ್ಪ ಮಾತನಾಡಿ ರಾಮೋಜಿಗೌಡರು ತಮ್ಮ ಶ್ರಮದ ಮೂಲಕ ಸಾವಿರಾರು ಪದವೀಧರರಿಗೆ ಉದ್ಯೋಗ ಕಲ್ಪಿಸಿದರೆ. ಅವರ ಸಮಾಜ ಸೇವೆ ಗುರುತಿಸಿ ಬೆಂಬಲ ನೀಡಬೇಕು ಎಂದು ನಿರ್ಧರಿಸಿದ್ದೇವೆ ಎಂದರು.ಯುವ ಮುಖಂಡ ಹರೀಶ್ ಮಾತನಾಡಿ, ಮೇಲ್ಮನೆಯಲ್ಲಿ ಚಿಂತಕರು, ಬುದ್ದಿವಂತರು ಇರಬೇಕು. ಶಿಕ್ಷಕರು, ಸಾಮಾಜಿಕ ಕಳಕಳಿ ಉಳ್ಳವರನ್ನು ಆಯ್ಕೆ ಮಾಡಬೇಕು. ಮತದಾರರು ಪ್ರಜ್ಞಾವಂತರಾಗಿದ್ದಾರೆ. ಈ ಕ್ಷೇತ್ರದಿಂದ ಈವರೆಗೆ ಗೆದ್ದವರು ಸದನದಲ್ಲಿ ಎಂದೂ ಪದವೀಧರರ ಪರವಾಗಿ ಮಾತನಾಡಿಯೇ ಇಲ್ಲ. ರಾಮೋಜಿಗೌಡ ಗೆಲ್ಲುವುದರಿಂದ ಪದವೀಧರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕಿರಣ, ಕೃಷ್ಣಪ್ಪ, ಅರಳಪ್ಪ, ಗಿರಿಧರ್, ಗೋಪಿನಂದನ, ಸಿದ್ದಪ್ಪಾಜಿ, ದುರ್ಗಪ್ರಸಾದ, ವೆಂಕಟೇಶ್, ಶಿವಲಿಂಗಯ್ಯ, ರಮೇಶ, ನವೀನ, ಹರೀಶ್ ಬಾಲು, ಮದನ್, ಸುನಿಲ್ ಉಪಸ್ಥಿತರಿದ್ದರು.25ಕೆಆರ್ ಎಂಎನ್ 1.ಜೆಪಿಜಿ
ದಲಿತ ಸಂಘಟನೆಗಳ ಮುಖಂಡ ಶಿವಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.