ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದ 4ನೇ ದಿನ ಭಾನುವಾರ 42 ಮಂದಿ ಪಿಎಚ್‌ಡಿ ಸೇರಿದಂತೆ 1,439 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದ 4ನೇ ದಿನ ಭಾನುವಾರ 42 ಮಂದಿ ಪಿಎಚ್‌ಡಿ ಸೇರಿದಂತೆ 1,439 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಹೆ ಹಾಗೂ ಕೆನಡಾದ ನ್ಯೂಬ್ರನ್ಸ್‌ವಿಕ್ ವಿವಿ (ಯುಎನ್‌ಬಿ) ಜೊತೆಗೂಡಿ ರೂಪಿಸಿರುವ ನರ್ಸಿಂಗ್ ದ್ವಿಪದವಿ (ಡ್ಯೂಯಲ್ ಡಿಗ್ರಿ) ಮೊದಲ ಬ್ಯಾಚಿನ 25 ವಿದ್ಯಾರ್ಥಿಗಳಿಗೆ ಪದವಿಯನ್ನು ನೀಡಲಾಯಿತು. ನ್ಯೂ ಬ್ರನ್ಸ್‌ವಿಕ್ ವಿವಿ ಅಧ್ಯಕ್ಷೆ - ಕುಲಪತಿ ಡಾ. ಕ್ಯಾಥಿ ವಿಲ್ಸನ್ ಅವರು ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡಿ, ‘ಪದವೀಧರರು ಅವಕಾಶಗಳಿಗೆ, ಪ್ರಯತ್ನಗಳಿಗೆ ಮಿತಿಗಳನ್ನು ಹಾಕಿಕೊಳ್ಳಬಾರದು. ಹೊಸ ಅವಕಾಶಗಳನ್ನು ಸ್ವಾಗತಿಸಬೇಕು, ಕಲಿಕೆಗೆ ಸದಾ ಮುಕ್ತರಾಗಿರಬೇಕು’ ಎಂದು ಕರೆ ನೀಡಿದರು.‘ವೃತ್ತಿಜೀವನದ ಯಶಸ್ಸು ಮಾತ್ರ ಶಿಕ್ಷಣದ ಉದ್ದೇಶವಲ್ಲ, ಯಶಸ್ಸನ್ನು ಮೀರಿದ ಹೊಣೆಗಾರಿಕೆಯನ್ನು ಅದು ಹೊಂದಿದೆ. ಜಗತ್ತಿಗೆ ನಿಮ್ಮ ಪ್ರತಿಭೆಯ ಅಗತ್ಯವಿದೆ, ಅದಕ್ಕಿಂತ ಹೆಚ್ಚಾಗಿ, ನಿಮ್ಮ ಕಾಳಜಿ, ನಾಯಕತ್ವದ ಅಗತ್ಯವಿದೆ’ ಎಂದವರು ಹೇಳಿದರು.ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು ಮಾತನಾಡಿ, ‘ಈ ಘಟಿಕೋತ್ಸವದ ಮೂಲಕ ನಾವು ನಮ್ಮ ಪದವೀಧರರ ಶೈಕ್ಷಣಿಕ ಸಾಧನೆಗಳ ಜೊತೆಗೆ ಅವರ ಮೂಲಕ ಸಮಾಜಕ್ಕೆ ದೊರೆಯಲಿರುವ ಸೇವೆಯನ್ನು ಸಂಭ್ರಮಿಸುತ್ತಿದ್ದೇವೆ. ಮಾಹೆಯಲ್ಲಿ ಶೈಕ್ಷಣಿಕವಾಗಿ ವೃತ್ತಿಪರ ಸಾಮರ್ಥ್ಯದೊಂದಿಗೆ ಸಾಮಾಜಿಕ ಜವಾಬ್ದಾರಿಗೆ ಪ್ರಾಧಾನ್ಯ ನೀಡುತ್ತೇವೆ’ ಎಂದರು. ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್‌ನ ಪ್ರತಿಭಾವಂತ ವಿದ್ಯಾರ್ಥಿ ಕೆದಿಲಾಯ ಶ್ರೀಕೃಷ್ಣ ಎಚ್. ದಾಮೋದರ್ ಅವರಿಗೆ ಪ್ರತಿಷ್ಠಿತ ಡಾ. ಟಿ.ಎಂ.ಎ. ಪೈ ಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು.ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್. ಪೈ, ಸಹಕುಲಾಧಿಪತಿ ಡಾ. ಎಚ್‌. ಎಸ್‌. ಬಲ್ಲಾಳ್‌, ಕುಲಪತಿ ಡಾ. ಶರತ್‌ ಕೆ. ರಾವ್‌ ಹಾಗೂ ಸಹಕುಲಪತಿಗಳು ಮತ್ತು ಮಾಹೆ ವಿವಿಧ ಘಟಕಗಳ ಮುಖ್ಯಸ್ಥರು ಸಮಾರಂಭದಲ್ಲಿ ಇದ್ದರು.