ಪಶ್ಚಿಮ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್ಗೆ ನಡೆಯುತ್ತಿರುವ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಎರಡು ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು, ಇದೀಗ ನೌಕರರ ಸಂಘಟನೆಗಳಿಗೆ ಗಾಳ ಹಾಕುತ್ತಿವೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ:ಪಶ್ಚಿಮ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್ಗೆ ನಡೆಯುತ್ತಿರುವ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಎರಡು ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು, ಇದೀಗ ನೌಕರರ ಸಂಘಟನೆಗಳಿಗೆ ಗಾಳ ಹಾಕುತ್ತಿವೆ. ಸದಾಕಾಲ ಸಮಸ್ಯೆಯಲ್ಲೇ ಸಿಲುಕಿ ಒದ್ದಾಡುತ್ತಿರುವ ಅತಿಥಿ ಉಪನ್ಯಾಸಕರತ್ತ ಕೂಡ ಚಿತ್ತ ಹರಿಸುತ್ತಿದ್ದಾರೆ.
ಧಾರವಾಡ, ಹಾವೇರಿ, ಉತ್ತರ ಕನ್ನಡ ಹಾಗೂ ಗದಗ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ 6 ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಇದೇ ಮೊದಲು ಎಂಟ್ಹತ್ತು ತಿಂಗಳ ಮುಂಚೆಯೇ ಎರಡು ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿವೆ. ಆಗಿನಿಂದಲೇ ಆಂತರಿಕವಾಗಿ ಸಭೆ ನಡೆಸುತ್ತಾ ಪ್ರಚಾರ ಕೈಗೊಂಡಿದ್ದ ಪಕ್ಷಗಳು ಹಾಗೂ ಅಭ್ಯರ್ಥಿಗಳು ಇದೀಗ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಬಹಿರಂಗ ಪ್ರಚಾರ ಶುರು ಹಚ್ಚಿಕೊಂಡಿವೆ.ಈ ಚುನಾವಣೆ ವಿಶೇಷವೆಂದರೆ ಪ್ರತಿ ಚುನಾವಣೆಯಲ್ಲೂ ಹೊಸದಾಗಿಯೇ ಮತದಾರರನ್ನು ನೋಂದಾಯಿಸಬೇಕು. ಹೀಗಾಗಿ ಮತದಾರರ ನೋಂದಣಿಗೆ ಪಕ್ಷದ ಕಾರ್ಯಕರ್ತರು ಸೇರಿದಂತೆ ನೌಕರರ ಸಂಘಟನೆಗಳು ನೆರವಾಗಿದ್ದುಂಟು. ಇದೀಗ ಚುನಾವಣೆ ನಿರ್ಣಾಯಕ ಘಟ್ಟ ತಲುಪಿದೆ. ಪದವೀಧರ ಚುನಾವಣೆಯಲ್ಲಿ ನೌಕರರ ಸಂಘಟನೆಗಳೇ ನಿರ್ಣಾಯಕವೆನಿಸಿವೆ.
ಬಹುತೇಕ ಎಲ್ಲ ನೌಕರರ ಸಂಘದ ಜಿಲ್ಲಾ ಹಾಗೂ ತಾಲೂಕು ಘಟಕಗಳ ಜತೆ ಕೆಲವು ರಾಜ್ಯ ಘಟಕಗಳು ಹುಬ್ಬಳ್ಳಿ-ಧಾರವಾಡದಲ್ಲಿ ಅಸ್ತಿತ್ವದಲ್ಲಿವೆ. ಪ್ರೌಢಶಾಲಾ ಸಂಘ, ಸರ್ಕಾರಿ ನೌಕರರ ಮಾಧ್ಯಮಿಕ ಶಿಕ್ಷಕರ ಸಂಘ, ರಾಜ್ಯ ಸರ್ಕಾರಿ ಪದೋನ್ನಿತ ಶಾಲಾ ನೌಕರರ ಸಂಘ, ಕರ್ನಾಟಕ ಪದವೀಧರರ ಮುಖ್ಯಾಧ್ಯಾಪಕರ ಸಂಘ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ (ಅನುದಾನಿತ ಮತ್ತು ಅನುದಾನ ರಹಿತ), ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಜ್ಯ ಸರ್ಕಾರಿ ನೌಕರರ ಸಂಘಗಳು ಸಕ್ರಿಯವಾಗಿವೆ. ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘವೂ ಇಲ್ಲಿವೆ. ಇದಲ್ಲದೆ ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ, ನೌಕರರ ಸಂಘಗಳಿವೆ. ಒಟ್ಟೂ 50ಕ್ಕೂ ಹೆಚ್ಚು ಕೃಷಿ ಸೇರಿದಂತೆ 40ಕ್ಕೂ ಅಧಿಕ ಇಲಾಖೆಗಳ ನೌಕರರ ಸಂಘಗಳಿವೆ. ಪ್ರಾಧ್ಯಾಪಕರ ಸಂಘ, ನಿವೃತ್ತ ಪ್ರಾಧ್ಯಾಪಕರ ಸಂಘ, ಕವಿವಿ ಸಂಘ ಹೀಗೆ ಹತ್ತಾರು ಸಂಘಟನೆಗಳು ಇಲ್ಲಿವೆ. ಇವುಗಳಿಗೀಗ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಗಾಳ ಹಾಕುತ್ತಿವೆ.ಇವುಗಳಲ್ಲಿನ ಹಲವು ಪದಾಧಿಕಾರಿಗಳು ವಿವಿಧ ರಾಜಕೀಯ ಪಕ್ಷಗಳ ಒಲವು ತೋರಿದ್ದು, ಹಲವರು ಒಳಗೊಳಗೆ ಪ್ರಚಾರದಲ್ಲಿ ತೊಡಗಿದ್ದರೆ, ಕೆಲವರು ಬಹಿರಂಗವಾಗಿಯೇ ಪ್ರಚಾರ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ವಿವಿಧ ಸಂಘಟನೆಗಳು ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದಂತೂ ಸತ್ಯ.ನಮ್ಮ ಸಂಘಟನೆಯು ಪಶ್ಚಿಮ ಪದವೀಧರ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಏಳೆಂಟು ದಿನದಿಂದಲೇ ನಾಲ್ಕು ಜಿಲ್ಲೆಗಳಲ್ಲೂ ಸಭೆ ನಡೆಸಿ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು. ಪ್ರತಿಯೊಬ್ಬರು ಮತ ಚಲಾಯಿಸಬೇಕು. ಯಾವ ರೀತಿ ಮತ ಚಲಾಯಿಸಬೇಕು ಎಂಬ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ.ಸಂದೀಪ ಬೂದಿಹಾಳ, ರಾಜ್ಯಾಧ್ಯಕ್ಷರು, ಮಾಧ್ಯಮಿಕ ಶಿಕ್ಷಕ ಸಂಘ
