ಸಾರಾಂಶ
ಚನ್ನಪಟ್ಟಣ: ಶಿಕ್ಷಕರು, ಪದವೀಧರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಅವರನ್ನು ಈ ಬಾರಿಯ ಬೆಂಗಳೂರು ಪದವೀಧರ ಕ್ಷೇತ್ರದಿಂದ ಆಯ್ಕೆ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಚುನಾವಣೆಯಲ್ಲಿ ಸೋತರು ರಾಮೋಜಿಗೌಡ ಕ್ಷೇತ್ರದೊಂದಿಗೆ ಒಡನಾಟವಿಟ್ಟುಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರದ ವ್ಯವಸ್ಥೆ ಸುಧಾರಣೆಯ ಬಗ್ಗೆ ಅವರು ತಮ್ಮದೇ ಆದ ಯೋಜನೆಗಳನ್ನು ಇಟ್ಟುಕೊಂಡಿದ್ದಾರೆ. ಶಿಕ್ಷಕರು ಹಾಗೂ ಪದವೀಧರ ಹಿತದೃಷ್ಟಿಯಿಂದ ಈ ಬಾರಿಯ ಚುನಾವಣೆಯಲ್ಲಿ ರಾಮೋಜಿಗೌಡ ಅವರನ್ನು ಆಯ್ಕೆ ಮಾಡುವಂತೆ ವಿನಂತಿಸಿದರು.ಹಿಂದೆ ಗೆದ್ದವರು ಏನು ಕೆಲಸ ಮಾಡಿಲ್ಲ: ಈ ಹಿಂದೆ ಪದವೀಧರರ ಕ್ಷೇತ್ರದಿಂದ ಆಯ್ಕೆಯಾದವರು ಶಿಕ್ಷಕರ, ನಿರುದ್ಯೋಗಿ ಯುವಕರ ಪರವಾಗಿ ಧ್ವನಿ ಎತ್ತುವಲ್ಲಿ ವಿಫಲರಾಗಿದ್ದಾರೆ. ಅವರ ಅವಧಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗಿಲ್ಲ. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವರ ಕೊಡುಗೆ ಶೂನ್ಯ. ಪದವೀಧರ ಕ್ಷೇತ್ರದ ಜನರಿಗೆ ಅವರ ಪರಿಚಯವೇ ಇಲ್ಲ. ಭಾಷಣ ಮಾಡಲು ನಿಲ್ಲಿಸಿದರೆ ಐದು ನಿಮಿಷಕ್ಕಿಂತ ಹೆಚ್ಚು ಅವರಿಗೆ ಮಾತನಾಡಲು ಬರುವುದಿಲ್ಲ. ಇಂತಹವರನ್ನು ನಿಮ್ಮ ಪ್ರತಿನಿಧಿಗಳಾಗಿ ಆಯ್ಕೆ ಮಾಡಿಕೊಳ್ಳುವ ಶಿಕ್ಷಣ ವ್ಯವಸ್ಥೆಯ ಬದಲಾವಣೆಯ ಬಗ್ಗೆ ಚಿಂತಿಸುತ್ತಾ ಜನರ ಕಷ್ಟಸುಖಗಳಿಗೆ ಧನಿಯಾಗಿರುವ ರಾಮೋಜಿಗೌಡ ಅವರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಶಿಕ್ಷಕರ ಸಮಸ್ಯೆಗೆ ಸ್ಪಂದಿಸದ್ದಕ್ಕೆ ಬಿಜೆಪಿ ತೊರೆದೆ:ನಾನು ಮೂರು ಬಾರಿ ಜೆಡಿಎಸ್‌ನಿಂದ ಒಮ್ಮೆ ಬಿಜೆಪಿಯಿಂದ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದೇನೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಲಿಲ್ಲ. ಕಳೆದ ವರ್ಷ ಪಿಂಚಣಿ ವಂಚಿತ ಶಿಕ್ಷಕರು ಹೋರಾಟ ನಡೆಸಿದರು. ಮೂವರು ಆತ್ಮಹತ್ಯೆಗೆ ಸಹ ಶರಣಾದರು. ಆದರೂ, ಅವರ ಸಮಸ್ಯೆ ಪರಿಹರಿಸಲು ಅಂದಿನ ಸರ್ಕಾರ ಮುಂದಾಗಲಿಲ್ಲ. ಆದರೆ, ನಮ್ಮ ಮನವಿಗೆ ಸ್ಪಂದಿಸಿದ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಸ್ಯೆ ಪರಿಹರಿಸುವುದಾಗಿ ಆಶ್ವಾಸನೆ ನೀಡಿದರು. ಅದರಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಈ ಸಂಬಂಧ ಸಮಿತಿ ರಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾನು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿ ಅಲ್ಲಿಂದ ಸ್ಪರ್ಧಿಸಿ ಮರು ಆಯ್ಕೆಯಾದೆ ಎಂದು ತಿಳಿಸಿದರು.
ಕೊಟ್ಟ ಮಾತಿನಂತೆ ನಡೆದ ಕಾಂಗ್ರೆಸ್:ಕಾಂಗ್ರೆಸ್ ಸರಕಾರ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದೆ. ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಎನ್‌ಪಿಎಸ್ ತೆಗೆದು ಒಪಿಎಸ್ ಜಾರಿಗೊಳಿಸುವುದಾಗಿ ತಿಳಿಸಿದೆ. ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೂ ಸಹ ಕ್ರಮ ಕೈಗೊಳ್ಳುತ್ತಿದ್ದು, ಪ್ರಜಾತಂತ್ರ ವ್ಯವಸ್ಥೆ ಉಳಿದಿದ್ದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಎಂದರು.
೨೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು:ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ೨೦ರಿಂದ ೨೩ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಅಂಡರ್ ಕರೆಂಟ್ ರೀತಿಯಲ್ಲಿ ಕೆಲಸ ಮಾಡಿದೆ. ಅತಿಹೆಚ್ಚು ಚಲಾವಣೆಗೊಂಡಿರುವ ಮಹಿಳಾ ಮತಗಳು ನಮ್ಮ ಕೈ ಹಿಡಿಯಲಿದ್ದು, ಲೋಕಸಭಾ ಚುನಾವಣೆಯಲ್ಲಿ ಇದು ನಮಗೆ ಬಲ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ೯ ವರ್ಷ ರಾಜ್ಯದಲ್ಲಿ ಅಧಿಕಾರ:ರಾಜ್ಯದಲ್ಲಿ ಲೋಕಸಭಾ ಚುನಾವಣೆ ಬಳಿಕ ಸರಕಾರ ಬೀಳುತ್ತದೆ ಎಂಬುದು ಭ್ರಮೆಯಾಗಿದೆ. ಲೋಕಸಭಾ ಚುನಾವಣೆಯಲ್ಲೂ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಲ್ಲದೆ ಉಳಿದಿರುವ ನಾಲ್ಕು ವರ್ಷಗಳ ಜತೆಗೆ ಮುಂದಿನ ಬಾರಿಯೂ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಇನ್ನು ೯ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್. ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ಪ್ರಮೋದ್, ಸುನೀಲ್, ಗ್ರಾಮಾಂತರ ಕಾರ್ಯದರ್ಶಿ ಶ್ರೀನಿವಾಸ್ ಹಾಜರಿದ್ದರು. ಬಾಕ್ಸ್..........ಡಿಕೆಶಿ ಸಿಎಂ ಆಗುವುದು ಯಾವಾಗ?ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವಾಗ ಮುಖ್ಯಮಂತ್ರಿಯಾಗುತ್ತಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ನೂರಕ್ಕೆ ನೂರು ಭಾಗ ಅವರು ಸಿಎಂ ಆಗುತ್ತಾರೆ. ಹಿಂಬಾಗಿಲಿನಿಂದ ಬಂದು ಯಾರ್‍ಯಾರೋ ಸಿಎಂ ಆಗಿದ್ದಾರೆ. ಬೇರೆ ಬೇರೆ ಜಿಲ್ಲೆಯವರನ್ನು ಸಿಎಂ ಮಾಡಿದ್ದೇವೆ. ಶಿವಕುಮಾರ್ ಕಷ್ಟಪಟ್ಟಿದ್ದಾರೆ. ಅವರು, ನಮ್ಮ ಜಿಲ್ಲೆಯವರು, ನಮ್ಮ ಮನೆ ಮಗ ಸಿಎಂ ಆಗಲಿ. ವೈಯಕ್ತಿಕವಾಗಿ ಅವರು ನಾಳೆಯೇ ಸಿಎಂ ಆಗಲಿ ಎಂಬುದು ನನ್ನ ಆಸೆ. ನನ್ನ ಇಷ್ಟ ಕೇಳಿಕೊಂಡು ಏನು ನಡೆಯುವುದಿಲ್ಲ. ನಮ್ಮಲ್ಲಿ ಹೈಕಮಾಂಡ್ ಇದ್ದು, ಅದನ್ನು ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಹೇಳಿದರು.
ಪೋಟೊ೨೫ಸಿಪಿಟಿ೨:ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡರನ್ನು ಬೆಂಬಲಿಸುವಂತೆ ಮನವಿ ಮಾಡಿದರು.