ಪದವೀಧರರ ಆಶೋತ್ತರಗಳಿಗೆ ಧ್ವನಿಯಾಗುವ ಸಂಕನೂರ ಅವರಿಗೆ ಮತ ನೀಡಿ, ಭರ್ಜರಿ ಗೆಲುವಿಗೆ ಸಹಕರಿಸಬೇಕು ಎಂದು ಮನವಿ
ಕಾರವಾರ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸಮರ್ಥ ಅಭ್ಯರ್ಥಿಯಾದ ಬಿಜೆಪಿಯ ಎಸ್.ವಿ. ಸಂಕನೂರ ಅವರಿಗೆ ಪದವೀಧರರು ಬೆಂಬಲ ನೀಡುವ ಮೂಲಕ ಗೆಲುವಿಗೆ ಸಹಕರಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಮನವಿ ಮಾಡಿದರು.
ಶಿರಸಿ ತಾಲೂಕಿನ ಬನವಾಸಿ, ಮುಂಡಗೋಡ ಹಾಗೂ ಯಲ್ಲಾಪುರ ಮಂಡಲಗಳಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ನಡೆಸಿದ ಅವರು ಮಾತನಾಡಿ, ಪದವೀಧರರು ಹಾಗೂ ಯುವಜನರ ಧ್ವನಿಯಾಗಿ ವಿಧಾನ ಪರಿಷತ್ತಿನಲ್ಲಿ ಪರಿಣಾಮಕಾರಿಯಾಗಿ ಮಾತನಾಡುವ ಮತ್ತು ಅವರ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸುವ ಪ್ರತಿನಿಧಿಯ ಅಗತ್ಯವಿದೆ. ಪದವೀಧರರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ, ಅವರ ಹಕ್ಕುಗಳು ಹಾಗೂ ಬೇಡಿಕೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಸ್ಪರ್ಧಿಸಿದ್ದಾರೆ. ಪದವೀಧರರ ಆಶೋತ್ತರಗಳಿಗೆ ಧ್ವನಿಯಾಗುವ ಸಂಕನೂರ ಅವರಿಗೆ ಮತ ನೀಡಿ, ಭರ್ಜರಿ ಗೆಲುವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.ವಿವಿಧ ಸಹಕಾರಿ ಸಂಘಗಳು, ಬ್ಯಾಂಕ್ಗಳು, ಶಿಕ್ಷಣ ಸಂಸ್ಥೆಗಳು, ವಕೀಲರ ಸಂಘ ಹಾಗೂ ಸರ್ಕಾರಿ ನೌಕರರ ಸಂಘಗಳಿಗೆ ಭೇಟಿ ನೀಡಿ ಮತ ಯಾಚಿಸಿದರು. ಬಿಜೆಪಿ ಕಾರ್ಯಕರ್ತರು, ಮುಖಂಡರ ಮನೆಗಳಿಗೆ ತೆರಳಿ ಬೆಂಬಲ ಕೋರಿದರು. ಬನವಾಸಿ ಬಿಜೆಪಿ ಕಾರ್ಯಾಲಯದಲ್ಲಿ ಘಟನಾಯಕರ ಸಭೆಯನ್ನೂ ನಡೆಸಿದರು.
ಸಹಕಾರಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳಿಗೆ ಭೇಟಿ ಬನವಾಸಿಯಲ್ಲಿ ಟಿ.ಎಂ.ಎಸ್. ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ, ಕೆಡಿಸಿಸಿ ಬ್ಯಾಂಕ್ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಲಾಯಿತು. ಸ್ಥಳೀಯ ಪದವೀಧರ ಮುಖಂಡರ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಲಾಯಿತು.ಮುಂಡಗೋಡದಲ್ಲಿ ಸರ್ಕಾರಿ ನೌಕರರ ಸಂಘ, ಛತ್ರಪತಿ ಶಿವಾಜಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ, ಬಸವೇಶ್ವರ ಕ್ರೆಡಿಟ್ ಸೊಸೈಟಿ, ಕೆಡಿಸಿಸಿ ಬ್ಯಾಂಕ್, ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಹಾಗೂ ತಾಲೂಕು ವಕೀಲರ ಸಂಘಕ್ಕೆ ಭೇಟಿ ನೀಡಲಾಯಿತು. ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿಯೂ ಪ್ರಚಾರ ನಡೆಸಿ, ಪದವೀಧರ ಮತದಾರರ ಬೆಂಬಲ ಕೋರಲಾಯಿತು.
ಯಲ್ಲಾಪುರದಲ್ಲಿಯೂ ಪದವೀಧರರ ಮನೆಗೆ ಭೇಟಿ ನೀಡಿ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ ಸಂಕನೂರ ಅವರ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು.ಮುಖಂಡರು ಭಾಗಿ: ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಶಿಸ್ತು ಸಮಿತಿಯ ಲಿಂಗರಾಜ ಪಾಟೀಲ್, ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಹೆಗಡೆ, ಪ್ರಕಾಶ ಕೋಣೆಮನೆ, ಎಲ್.ಟಿ. ಪಾಟೀಲ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರೇಮ್ ಕುಮಾರ್, ಬನವಾಸಿ ಮಂಡಲ ಅಧ್ಯಕ್ಷ ರಮೇಶ್ ನಾಯ್ಕ, ಮುಂಡಗೋಡ ಮಂಡಲ ಅಧ್ಯಕ್ಷ ಮಂಜುನಾಥ ಪಾಟೀಲ್ ಇದ್ದರು.
ಯಲ್ಲಾಪುರದಲ್ಲಿ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ, ಗಣ್ಯರಾದ ಪ್ರಮೋದ ಹೆಗಡೆ, ಮಹಿಳಾ ಮೋರ್ಚಾದ ಶೃತಿ ಹೆಗಡೆ, ಜಿಲ್ಲಾ ಕಾರ್ಯಕಾರಣಿ ಸದಸ್ಯ ಗಣೇಶ ಪಾಠಣಕರ, ಪ್ರಮುಖರಾದ ಸೋಮು ನಾಯ್ಕ, ರವಿ ದೇವಾಡಿಗ ಇದ್ದರು.