ವಾಕ್‌, ಶ್ರವಣ ಸಮಸ್ಯೆಯುಳ್ಳವರಲ್ಲಿ ಆತ್ಮವಿಶ್ವಾಸ ತುಂಬಿ

| Published : Jan 22 2025, 12:30 AM IST

ಸಾರಾಂಶ

ವಾಕ್‌ ಮತ್ತು ಶ್ರವಣ ಸಮಸ್ಯೆಯುಳ್ಳವರೊಂದಿಗೆ ಹೇಗೆ ಸಂವಹನ ನಡೆಸಬೇಕು ಎಂಬ ಎಚ್ಚರಿಕೆ ಇರಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ವಾಕ್‌ ಮತ್ತು ಶ್ರವಣ ಸಮಸ್ಯೆಯುಳ್ಳವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಇದರಿಂದ ಅವರ ಜೀವನದಲ್ಲಿ ದೊಡ್ಡ ಬದಲಾವಣೆ ಆಗಲು ಸಾಧ್ಯವಿದೆ ಎಂದು ಮುಂಬೈನ ಅಲಿ ಯವರ್‌ ಜಂಗ್‌ ನ್ಯಾಷನಲ್‌ ಇನ್ಸಿಟಿಟ್ಯೂಟ್‌ ಆಫ್‌ ಸ್ಪೀಚ್‌ ಅಂಡ್‌ ಹಿಯರಿಂಗ್‌ ಡಿಸಬಿಲಿಟಿಸ್ ನಿರ್ದೇಶಕ ಡಾ. ಸುಮನ್‌ ಕುಮಾರ್‌ ತಿಳಿಸಿದರು.

ನಗರದ ಜೆಎಸ್ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಜೆಎಸ್ಎಸ್‌ ವಾಕ್‌ ಮತ್ತು ಶ್ರವಣ ಸಂಸ್ಥೆಯು ಮಂಗಳವಾರ ಆಯೋಜಿಸಿದ ಪದವಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಜನರ ಬದುಕು ಬದಲಾಯಿಸುವ ವೃತ್ತಿಗೆ ಪದವೀಧರರು ಕಾಲಿಡುತ್ತಿದ್ದು, ಈ ವಿಭಾಗದ ಸೂಕ್ಷ್ಮತೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ವಾಕ್‌ ಮತ್ತು ಶ್ರವಣ ಸಮಸ್ಯೆಯುಳ್ಳವರೊಂದಿಗೆ ಹೇಗೆ ಸಂವಹನ ನಡೆಸಬೇಕು ಎಂಬ ಎಚ್ಚರಿಕೆ ಇರಬೇಕು. ನಮ್ಮಲ್ಲಿರುವ ಭಾವನೆಯನ್ನು ಅವರಿಗೆ ತಿಳಿಸುವ ಕಲೆ ಇರಬೇಕು. ಇದು ಕೇವಲ ವೃತ್ತಿಯಲ್ಲ, ಇಲ್ಲಿ ಸಮರ್ಪಣಾ ಭಾವವೂ ಮುಖ್ಯ. ಪದವಿ ಪಡೆಯುವುದನ್ನು ಸಂಭ್ರಮಿಸುವದರೊಂದಿಗೆ ಭವಿಷ್ಯದ ಸವಾಲುಗಳ ಬಗ್ಗೆಯೂ ಯೋಚಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಸಾಮಾಜಿಕ ಜಾಲತಾಣದ ಸ್ಟಾರ್‌ ಗಳನ್ನು ಮಾದರಿಯಾಗಿಟ್ಟುಕೊಳ್ಳುವ ಬದಲು, ನಿಮ್ಮ ಜೀವನ ರೂಪಿಸಿದವರನ್ನು ಅನುಸರಿಸಿ, ಅವರಿಂದ ಸಲಹೆಗಳನ್ನು ಪಡೆಯಿರಿ. ಆ ಸಲಹೆಗಳು ನಿಮ್ಮ ಬೆಳವಣಿಗೆಗೆ ಪೂರಕವಾಗಿ ಇರುತ್ತದೆ. ಸಮಾಜದಲ್ಲಿ ಬದಲಾವಣೆ ತರಬಹುದಾದ ಹವ್ಯಾಸಗಳನ್ನು ನಿರಂತರವಾಗಿ ಬೆನ್ನತ್ತಿದರೆ ದೇಶವೇ ಹೆಮ್ಮೆಪಡುವಂತೆ ಬದುಕಬಹುದು ಎಂದರು.

ಪದವಿ ಪ್ರದಾನ

ಕಾಲೇಜಿನ ಉಪನ್ಯಾಸಕಿ ಆಶಾ ಯತಿರಾಜ್‌ ಪದವೀಧರರಿಗೆ ಪ್ರಮಾಣವಚನ ಬೋಧಿಸಿದರು. ಪದವಿ ವಿಭಾಗದ 39 ಹಾಗೂ ಸ್ನಾತಕೋತ್ತರ ವಿಭಾಗದ 33 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಶ್ರವಣಶಾಸ್ತ್ರ ವಿಭಾಗದಲ್ಲಿ ಡಿ.ಎಂ. ಶ್ರೀನಿಧಿ, ಬಿಎಎಸ್‌ಎಲ್‌ ಪಿ ವಿಭಾಗದಲ್ಲಿ ಸಿ.ಎಂ. ಶ್ವೇತಾ, ಸ್ಪೀಚ್‌ ಲ್ಯಾಂಗ್‌ ವೇಜ್‌ ಪ್ಯಾಥಲಜಿ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿ ಜಿ. ಯಶಸ್ವಿನಿ ಅವರಿಗೆ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪುರಸ್ಕಾರ ಪಡೆದರು. ಬಿಎಎಸ್‌ಎಲ್‌ ಪಿ ವಿಭಾಗದ ವಿ.ಎಸ್‌. ಹರ್ಷಿತಾ, ಪ್ಯಾಥಲಜಿ ವಿಭಾಗದಲ್ಲಿ ನಿಲಾ ಪಾಂಚಾಲಿ, ಆಡಿಯಾಲಜಿ ವಿಭಾಗದಲ್ಲಿ ಡಿ.ಎಂ. ಶ್ರೀನಿಧಿ ಅತ್ಯುತ್ತಮ ವಿದ್ಯಾರ್ಥಿ ಕ್ಲಿನಿಷಿಯನ್‌ ‍ಪ್ರಶಸ್ತಿ ಪಡೆದರು.

ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜೆ. ಬೆಟಸೂರಮಠ, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್‌. ಮಹೇಶ್‌, ಜೆಎಸ್ಎಸ್ ವಾಕ್ ಮತ್ತು ಶ್ರವಣ ಸಂಸ್ಥೆಯ ಪ್ರಾಂಶುಪಾಲೆ ಡಾ.ಆರ್‌. ಸುಮಾ ಇದ್ದರು.