ಪದವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯೇ ಬದಲು: ವಿದ್ಯಾರ್ಥಿಗಳು ಕಂಗಾಲು

| Published : May 15 2024, 01:35 AM IST

ಪದವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯೇ ಬದಲು: ವಿದ್ಯಾರ್ಥಿಗಳು ಕಂಗಾಲು
Share this Article
  • FB
  • TW
  • Linkdin
  • Email

ಸಾರಾಂಶ

, ಸಮಾಜಶಾಸ್ತ್ರ ವಿಷಯದ ಮೂರನೇ ಸೆಮಿಸ್ಟರ್ ಬದಲಿಗೆ 1ನೇ ಸೆಮಿಸ್ಟರ್‌ನ ಪ್ರಶ್ನೆ ಪತ್ರಿಕೆ ಬಂದಿರುವುದು ಗೊತ್ತಾಗಿದೆ. ಇದರಿಂದ ಗೊಂದಲಕ್ಕೀಡಾದ ವಿದ್ಯಾರ್ಥಿಗಳು ಕೂಡಲೇ ಮೇಲ್ವಿಚಾರಕರ ಗಮನಕ್ಕೆ ತಂದಿದ್ದಾರೆ. ಆಯಾ ಕಾಲೇಜುಗಳ ಮುಖ್ಯಸ್ಥರು ವಿಶ್ವವಿದ್ಯಾಲಯದ ಗಮನಕ್ಕೆ ತರುತ್ತಿದ್ದಂತೆಯೇ ಪರೀಕ್ಷೆಯನ್ನು ಮುಂದೂಡಿ ವಿವಿ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯ ಮಂಗಳವಾರ ನಡೆಸಿದ ಬಿಎ ಪದವಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಬದಲಾಗಿದ್ದು, ಎಚ್ಚೆತ್ತ ವಿಶ್ವವಿದ್ಯಾಲಯ ಪರೀಕ್ಷೆಯನ್ನು ಮುಂದೂಡಿದೆ.

ಬಳ್ಳಾರಿ ವಿವಿ ವ್ಯಾಪ್ತಿಯ ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಪದವಿ ಪರೀಕ್ಷೆಗಳು ಕೆಲ ದಿನಗಳಿಂದ ಶುರುವಾಗಿದ್ದು, ಮಂಗಳವಾರ ಬಿಎ ಸಮಾಜಶಾಸ್ತ್ರ ವಿಷಯದ 3ನೇ ಸೆಮಿಸ್ಟರ್‌ನ ಪರೀಕ್ಷೆ ನಡೆಯಬೇಕಿತ್ತು. ಪರೀಕ್ಷೆ ಬರೆಯಲು ಎಂದಿನಂತೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಿದ್ದರು. ಕೇಂದ್ರದಲ್ಲಿ ಮೇಲ್ವಿಚಾರಕರು ಪರೀಕ್ಷೆಯ ಪ್ರಶ್ನೆಪತ್ರಿಕೆ ನೀಡುತ್ತಿದ್ದಂತೆಯೇ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಬದಲಾಗಿರುವುದು ಕಂಡು ಬಂದಿದ್ದು, ಸಮಾಜಶಾಸ್ತ್ರ ವಿಷಯದ ಮೂರನೇ ಸೆಮಿಸ್ಟರ್ ಬದಲಿಗೆ 1ನೇ ಸೆಮಿಸ್ಟರ್‌ನ ಪ್ರಶ್ನೆ ಪತ್ರಿಕೆ ಬಂದಿರುವುದು ಗೊತ್ತಾಗಿದೆ. ಇದರಿಂದ ಗೊಂದಲಕ್ಕೀಡಾದ ವಿದ್ಯಾರ್ಥಿಗಳು ಕೂಡಲೇ ಮೇಲ್ವಿಚಾರಕರ ಗಮನಕ್ಕೆ ತಂದಿದ್ದಾರೆ. ಆಯಾ ಕಾಲೇಜುಗಳ ಮುಖ್ಯಸ್ಥರು ವಿಶ್ವವಿದ್ಯಾಲಯದ ಗಮನಕ್ಕೆ ತರುತ್ತಿದ್ದಂತೆಯೇ ಪರೀಕ್ಷೆಯನ್ನು ಮುಂದೂಡಿ ವಿವಿ ಆದೇಶ ಹೊರಡಿಸಿದೆ.

ಈ ಬೆಳವಣಿಗೆಯಿಂದ ಪರೀಕ್ಷೆ ಬರೆಯಲು ಉತ್ಸಾಹದಿಂದ ಬಂದಿದ್ದ ವಿದ್ಯಾರ್ಥಿಗಳು ತೀವ್ರ ಬೇಸರ ವ್ಯಕ್ತಪಡಿಸಿದರಲ್ಲದೆ, ವಿಶ್ವವಿದ್ಯಾಲಯದ ನಿರ್ಲಕ್ಷ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪರೀಕ್ಷೆ ತಯಾರಿ ಮಾಡಿಕೊಂಡು ದೂರದ ಊರುಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದು, ವಿವಿಯ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಯಿತು ಎಂದು ಪರೀಕ್ಷಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಕಾಯಂ ಕುಲಪತಿಯಿಲ್ಲದೆ ಪ್ರಭಾರಿಗಳ ಉಸ್ತುವಾರಿಯಲ್ಲಿಯೇ ಹೆಚ್ಚಾಗಿ ಕಾರ್ಯನಿರ್ವಹಿರುವ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಆಗಾಗ್ಗೆ ಈ ರೀತಿಯ ನಿರ್ಲಕ್ಷ್ಯ ಧೋರಣೆಯ ಕೆಲಸಗಳು ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಮುಖಂಡರು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.

ವಿವಿ ಕುಲಪತಿ ಹಾಗೂ ಕುಲಸಚಿವರ ಮುಸುಕಿನ ಗುದ್ದಾಟದಿಂದಾಗಿ ಬಳ್ಳಾರಿ ವಿವಿ ಗಮನ ಸೆಳೆದಿತ್ತು. ಈ ಹಿಂದೆ ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಕರಣವೂ ನಡೆದಿತ್ತು. ಹೀಗೆ ನಕಾರಾತ್ಮಕ ವಿಷಯಗಳಿಂದಾಗಿಯೇ ಗಮನ ಸೆಳೆಯುತ್ತಿರುವ ಬಳ್ಳಾರಿ ವಿವಿಯಲ್ಲಿ ಇದೀಗ ಪರೀಕ್ಷೆಯ ಪ್ರಶ್ನೆಪತ್ರಿಕೆ ಬದಲಾಗಿರುವ ಪ್ರಕರಣ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಶೋಕಾಸ್‌ ನೋಟಿಸ್ಬಿಎ 3ನೇ ಸಮಿಸ್ಟರ್ ಸಮಾಜಶಾಸ್ತ್ರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬದಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಗೆ ಕಾರಣರಾದವರಿಗೆ ಶೋಕಸ್ ನೋಟಿಸ್ ನೀಡಲಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳಲಾಗುವುದು. ಮುಂದೂಡಿದ ಪರೀಕ್ಷೆಯ ದಿನಾಂಕವನ್ನು ಆದಷ್ಟು ಬೇಗ ಘೋಷಿಸಲಾಗುವುದು.

ಪ್ರೊ.ರಮೇಶ್ ಓಲೇಕಾರ್, ಕುಲಸಚಿವ (ಮೌಲ್ಯಮಾಪನ), ವಿಎಸ್‌ಕೆವಿವಿ. ಬಳ್ಳಾರಿ