ಮುಂಗಾರು ಬಿತ್ತನೆಗೆ ಸಜ್ಜುಗೊಂಡ ಅನ್ನದಾತರು

| Published : May 20 2024, 01:31 AM IST

ಮುಂಗಾರು ಬಿತ್ತನೆಗೆ ಸಜ್ಜುಗೊಂಡ ಅನ್ನದಾತರು
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಮುಂಗಾರು ಬಿತ್ತನೆ ಬೇಕಾದ ಬೀಜಗಳಾದ ಹೆಸರು, ಗೋವಿನ ಜೋಳ, ಬಿ.ಟಿ. ಹತ್ತಿ, ಈರುಳ್ಳಿ, ಸೂರ್ಯಕಾಂತಿ, ಮೆಣಸಿನಕಾಯಿ, ಸಜ್ಜೆ, ತೊಗರಿ ಖರೀದಿಸುವ ಆಲೋಚನೆಯಲ್ಲಿದ್ದಾರೆ

ಎಸ್.ಜಿ. ತೆಗ್ಗಿನಮನಿ ನರಗುಂದ

ತಾಲೂಕಿನಲ್ಲಿ ಕಳೆದ ವರ್ಷ ಮಳೆಯಿಲ್ಲದೆ ಅನ್ನದಾತರು ಸಾಕಷ್ಟು ತೊಂದರೆ ಅನುಭವಿಸಿದ್ದು, ಈ ವರ್ಷ ಉತ್ತಮ ಮಳೆಯಾಗಬಹುದು ಎಂಬ ಆಶಾಭಾವನೆಯಿಂಧ ಭೂಮಿ ಹದಗೊಳ್ಳಿಸುತ್ತಿದ್ದಾರೆ.

ಕಳೆದ ವಾರದಿಂದ ಅಲ್ಪಸ್ವಲ್ಪ ವರುಣನ ಕೃಪೆಯಾಗಿದ್ದು, ಇದು ತಾಲೂಕಿನ ರೈತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.

ಕಳೆದ ಮೂರು ತಿಂಗಳಿಂದ ಬೇಸಿಗೆಯ ಸೆಕೆ 38 ಡಿಗ್ರಿ ಸೆಲ್ಸಿಯಸ್‌ನಿಂದ 41 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗಿತ್ತು. ವರುಣನ ಆಗಮನವಾಗಿದ್ದು, ಎರಡು-ಮೂರು ದಿನಗಳಿಂದ ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ. ಸಂಜೆ ವೇಳೆ ಬೀಳುತ್ತಿರುವ ಮಳೆಯಿಂದ ಹವಾಮಾನದಲ್ಲಿ ಬದಲಾವಣೆ ಆಗುತ್ತಿದೆ. ಮಳೆಗಾಗಿ ಕಾಯುತ್ತಾ ಕುಳಿತಿದ್ದ ಕೃಷಿಕ ಮುಂಗಾರು ಬಿತ್ತನೆಗೆ ಭೂಮಿ ಹದಗೊಳ್ಳಿಸಲು ಪ್ರಾರಂಭಿಸಿದ್ದಾನೆ.

ಬಿತ್ತನೆ ಬೀಜ, ಗೊಬ್ಬರ ಖರೀದಿ:

ಜಿಲ್ಲೆಯಲ್ಲಿ ನರಗುಂದ ತಾಲೂಕು ಕೃಷಿ ಪ್ರಧಾನವಾಗಿದ್ದು, ರೈತರು ಮುಂಗಾರು ಬಿತ್ತನೆ ಬೇಕಾದ ಬೀಜಗಳಾದ ಹೆಸರು, ಗೋವಿನ ಜೋಳ, ಬಿ.ಟಿ. ಹತ್ತಿ, ಈರುಳ್ಳಿ, ಸೂರ್ಯಕಾಂತಿ, ಮೆಣಸಿನಕಾಯಿ, ಸಜ್ಜೆ, ತೊಗರಿ ಖರೀದಿಸುವ ಆಲೋಚನೆಯಲ್ಲಿದ್ದಾರೆ.

ಭೂಮಿ ಉಳುಮೆ ಮಾಡಲು ಬೇಕಾಗುವಷ್ಟು ತಾಲೂಕಿನಲ್ಲಿ ಮಳೆಯಾಗಿಲ್ಲ. ಆದರೂ ಮುಂದಿನ ದಿನಗಳಲ್ಲಿ ಆಗಬಹುದು ಎಂಬ ಭರವಸೆಯಿದೆ. ಕೃಷಿ ಇಲಾಖೆ ಅಧಿಕಾರಿಗಳು ರೈತರ ಬಿತ್ತನೆಗೆ ಬೇಕಾದ ಬೀಜಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಕರ್ನಾಟಕ ರೈತ ಸೇನೆ ತಾಲೂಕಾಧ್ಯಕ್ಷ ವೀರಣ್ಣ ಸೊಪ್ಪಿನ ತಿಳಿಸಿದ್ದಾರೆ.

ಕಳೆದ ನಾಲ್ಕೈದು ದಿನಗಳ ಹಿಂದೆ ಮಳೆ ಪ್ರಾರಂಭವಾಗಿದ್ದು, ಆದಷ್ಟು ಬೇಗ ಬಿತ್ತನೆ ಬೀಜ ತಂದು ರೈತರ ಬಿತ್ತನೆಗೆ ಅನುಕೂಲ ಮಾಡಿಕೊಡಲಾಗುವುದು ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಗುರುನಾಥ್ ಎಂ.ಬಿ. ಹೇಳಿದರು.