ಬಿಜೆಪಿ ಅಧಿಕಾರಕ್ಕೆ ತರಲು ಗ್ರಾಮ ಚಲೋ ಅಭಿಯಾನ: ಕೊಪ್ಪಳ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್

| Published : Feb 08 2024, 01:30 AM IST

ಬಿಜೆಪಿ ಅಧಿಕಾರಕ್ಕೆ ತರಲು ಗ್ರಾಮ ಚಲೋ ಅಭಿಯಾನ: ಕೊಪ್ಪಳ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಈ ದೇಶದ ಪ್ರಧಾನಮಂತ್ರಿಯಾಗಬೇಕು, ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂಬ ಗುರಿಯಿಂದ ಜಿಲ್ಲಾದ್ಯಂತ ಗ್ರಾಮ ಚಲೋ ಅಭಿಯಾನ ನಡೆಸಲಾಗುತ್ತಿದೆ

ಕಾರಟಗಿ: ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಈ ದೇಶದ ಪ್ರಧಾನಮಂತ್ರಿಯಾಗಬೇಕು, ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂಬ ಗುರಿಯಿಂದ ಜಿಲ್ಲಾದ್ಯಂತ ಗ್ರಾಮ ಚಲೋ ಅಭಿಯಾನ ನಡೆಸಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಹೇಳಿದರು.

ಸಮೀಪದ ನಾಗನಕಲ್ ಗ್ರಾಮದ ಎಲ್‌ವಿಟಿ ತಪೋವನದಲ್ಲಿ ಗ್ರಾಮ ಚಲೋ ಅಭಿಯಾನ ನಿಮಿತ್ತ ಸಂಚಾಲಕರು ಮತ್ತು ಪ್ರವಾಸಿ ಕಾರ್ಯಕರ್ತರ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಫೆ.೪ರಿಂದ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಅಭಿಯಾನದ ಮೂಲಕ ಒಂದು ಬೂತ್‌ನಿಂದ ಮತ್ತೊಂದು ಬೂತ್‌ನ ಪೇಜ್‌ನ ಪ್ರಮುಖರನ್ನು ಭೇಟಿ ಮಾಡಿ ಹೊಸ ಮತದಾರರ ಸೇರ್ಪಡೆ ಬಗ್ಗೆ ಮಾಹಿತಿ ಸಂಗ್ರಹಿಸುವುದು ಮತ್ತು ಸರಳ, ನಮೋ ಆ್ಯಪ್‌ಗಳನ್ನು ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಮಾಡಿಸುವುದು. ಇನ್ನು ಮಾಜಿ ಶಾಸಕ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ೨೪ ಗಂಟೆಗಳ ಕಾಲ ಒಂದು ಹಳ್ಳಿಯಲ್ಲಿ ಕಳೆದು ಅಲ್ಲಿನ ಗ್ರಾಮೀಣ ಜನತೆಯೊಂದಿಗೆ ಪಕ್ಷದ ನೀತಿಗಳು ಮತ್ತು ಕೇಂದ್ರ ಸರ್ಕಾರದ ಸಾಧನೆಗಳು, ದೇಶದ ಅಭಿವೃದ್ಧಿಗೆ ಮೋದಿ ಕೈಗೊಂಡ ಕ್ರಮಗಳು, ಜಾರಿಗೊಳಿಸಿರುವ ಯೋಜನೆಗಳ ಮಾಹಿತಿಯನ್ನು ಹಂಚಿಕೊಂಡು ಅವರ ಅಭಿಪ್ರಾಯಗಳನ್ನು ಸಂಗ್ರಹಿಸುವ ಮಹತ್ವದ ಕಾರ್ಯ ಮಾಡಲಿದ್ದಾರೆ ಎಂದರು.ಜಿಲ್ಲಾ ಖಜಾಂಚಿ ನರಸಿಂಗ್‌ರಾವ್ ಕುಲಕರ್ಣಿ, ಮಂಡಲ ಅಧ್ಯಕ್ಷ ಚಂದ್ರಶೇಖರ ಮುಸಾಲಿ ಪ್ರಾಸ್ತಾವಿಕವಾಗಿ ಮಾಡಿದರು. ಮಂಜುನಾಥ್ ಮಸ್ಕಿ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಕ್ರಮ ಆರಂಭಕ್ಕೂ ಮುಂಚೆ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಮತ್ತು ಮಾಜಿ ಶಾಸಕ ಬಸವರಾಜ ದಢೇಸ್ಗೂರು ವಾರ್ಡ್ ೧೦, ೪ರಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಎಂದು ಗೋಡೆ ಬರಹ ಬರವಣಿಗೆಗೆ ಚಾಲನೆ ನೀಡಿದರು.ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಮಾಜಿ ಸದಸ್ಯ ವೀರೇಶ ಸಾಲೋಣಿ, ರಮೇಶ್ ನಾಡಿಗೇರ್, ಶಿವಕುಮಾರ ಅರಿಕೇರಿ, ಜಿ. ತಿಮ್ಮನಗೌಡ, ಉಮೇಶ ಸಜ್ಜನ್, ಶರಣಪ್ಪ ಗದ್ದಿ, ಅಶ್ವಿನಿ ದೇಸಾಯಿ, ಸತ್ಯನಾರಾಯಣ ದೇಶಪಾಂಡೆ, ರತ್ನಕುಮಾರಿ, ಶಿವಶರಣೇಗೌಡ ಯರಡೋಣಾ, ಶರಣಪ್ಪ ಬಾವಿ, ಗುರುಸಿದ್ದಪ್ಪ ಯರಕಲ್, ದುರ್ಗಾರಾವ್ ಇನ್ನಿತರರು ಇದ್ದರು.ಮೂರು ತಿಂಗಳಲ್ಲಿ ನಮ್ಮ ಸರ್ಕಾರ:ಮಾಜಿ ಶಾಸಕ ಬಸವರಾಜ ದಢೇಸ್ಗೂರು ಮಾತನಾಡಿ, ಈ ಸರ್ಕಾರ ಅಧಿಕಾರಕ್ಕೆ ಬಂದು ಏಳೆಂಟು ತಿಂಗಳು ಕಳೆದಿದ್ದರೂ ಒಂದು ಅಭಿವೃದ್ಧಿ ಕೆಲಸವಾಗಿಲ್ಲ. ನಮ್ಮ ಅವಧಿಯ ಸರ್ಕಾರ ನಿಗದಿಪಡಿಸಿದ ಅನುದಾನದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ಈಗಿನ ಸಚಿವರು ಮಾಡುತ್ತಿದ್ದಾರೆ. ಕಾರಟಗಿ ಅಭಿವೃದ್ಧಿಗೆ ನಯಾಪೈಸೆ ನೀಡಲ್ಲ. ಈಗಲೂ ಅಷ್ಟೇ ಕಾರಟಗಿಯಲ್ಲಿ ಒಂದಾದರೂ ಭೂಮಿಪೂಜೆ ಮಾಡಿದ್ದಾರೆಯೇ? ಈ ಸರ್ಕಾರದ ಹತ್ತಿರ ಹಣ ಇಲ್ಲದ ಕಾರಣಕ್ಕೆ ಮರಳು ಹೊಡೆಯುವುದು, ಇಸ್ಪೀಟ್, ಮಟ್ಕಾದಂತಹ ದಂಧೆಯಲ್ಲಿ ತೊಡಗಿಸಿಕೊಂಡಿದೆ ಎಂದರು.ಇನ್ನು ಮೂರೇ ತಿಂಗಳು ಸುಮ್ಮನಿರಿ. ಲೋಕಸಭೆ ಚುನಾವಣೆ ನಂತರ ಮತ್ತೆ ನಮ್ಮದೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ನೀವು ಮಾತ್ರ ಲೋಕಸಭೆಯಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲಿಸುವ ಕೆಲಸ ಮಾಡಬೇಕು ಎಂದರು.ಮೂರು ತಿಂಗಳ ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬರದಿದ್ದರೆ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕಾರ್ಯಕರ್ತರ ಎದುರು ಶಪಥಗೈದರು.