ಗ್ರಾಪಂ ನೌಕರರ ಮುಷ್ಕರ, ಕಾರ್ಯಾಲಯದ ಖುರ್ಚಿಗಳು ಖಾಲಿ ಖಾಲಿ

| Published : Oct 09 2024, 01:35 AM IST

ಸಾರಾಂಶ

ಗ್ರಾಮ ಪಂಚಾಯಿತಿಯ ನೌಕರರ ಪ್ರತಿಭಟನೆಯಿಂದಾಗಿ ಕಳೆದ ಐದು ದಿನಗಳಿಂದ ಸಾರ್ವಜನಿಕರು ಸೇವೆಗಳಿಗಾಗಿ ಅಲೆದಾಡುವಂತಾಗಿದೆ.

ಸಾರ್ವಜನಿಕರಿಗೆ ದೊರಕದ ಸೇವೆ, ಪರದಾಟ

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಗ್ರಾಮ ಪಂಚಾಯಿತಿಯ ನೌಕರರ ಪ್ರತಿಭಟನೆಯಿಂದಾಗಿ ಕಳೆದ ಐದು ದಿನಗಳಿಂದ ಸಾರ್ವಜನಿಕರು ಸೇವೆಗಳಿಗಾಗಿ ಅಲೆದಾಡುವಂತಾಗಿದೆ.

ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಇತರೆ ಸಿಬ್ಬಂದಿ ವರ್ಗದವರು ಕಳೆದ ಐದು ದಿನಗಳಿಂದ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ಇಳಿದಿರುವುದರಿಂದ ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕರಿಗೆ ಯಾವುದೇ ಸೇವೆ ದೊರಕದಂತಾಗಿದ್ದು, ಸರ್ಕಾರ ಸೂಕ್ತವಾದ ಕ್ರಮಕ್ಕೆ ಮುಂದಾಗಬೇಕಿದೆ.

ತಾಲೂಕಿನಲ್ಲಿ ಒಟ್ಟು 36 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 177 ಗ್ರಾಮಗಳಿದ್ದು, ಶೇ. 60ಕ್ಕಿಂತಲೂ ಅಧಿಕ ಸರ್ಕಾರದ ಯೋಜನೆಗಳ ಸೇವೆಗಳನ್ನು ಗ್ರಾಪಂಗಳ ಮೂಲಕ ಜನರಿಗೆ ನೀಡಲಾಗುತ್ತಿದೆ. ಸದ್ಯ ಗ್ರಾಪಂ ಅಧಿಕಾರಿಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೆಲಸಗಳು ಸ್ಥಗಿತಗೊಂಡಿದ್ದು, ಪರದಾಡುವಂತಾಗಿದೆ.

ಸೇವೆಗಳು ಸ್ಥಗಿತ:ಪ್ರತಿಭಟನೆಗೆ ಬಹುತೇಕ ಗ್ರಾಪಂ ನೌಕರರು, ಸಿಬ್ಬಂದಿ ಸಾಥ್ ನೀಡಿದ್ದು, ದಿನವೀಡಿ ತುಂಬಿ ತುಳುಕುತ್ತಿದ್ದ ಗ್ರಾಮ ಪಂಚಾಯಿತಿಗಳು ಕಳೆದ ನಾಲ್ಕೈದು ದಿನಗಳಿಂದ ಖಾಲಿ ಖಾಲಿಯಾಗಿವೆ. ಗ್ರಾಮ ಪಂಚಾಯಿತಿಗಳಲ್ಲಿ ದೊರಕುತ್ತಿದ್ದ ಇ-ಸ್ವತ್ತು, ನರೇಗಾ ಯೋಜನೆ, ಪಂಚತಂತ್ರದ ಹಲವು ಯೋಜನೆ ಸೇರಿದಂತೆ ಎಲ್ಲ ಸೇವೆಗಳು ಸ್ಥಗಿತಗೊಂಡಿವೆ.

ಹೆಚ್ಚಿನ ಸಂಖ್ಯೆಯಲ್ಲಿ ಪಂಚಾಯಿತಿ ಸಿಬ್ಬಂದಿ ಪ್ರತಿಭಟನೆಗೆ ಹೋಗಿರುವುದರಿಂದ ಕೆಲ ಸಿಬ್ಬಂದಿ ಮಾತ್ರ ಗ್ರಾಪಂ ಕಾರ್ಯಾಲಯದ ಬಾಗಿಲು ತೆರೆಯುತ್ತಿದ್ದಾರೆ. ಆದರೆ, ಸೇವೆಗಳು ಮಾತ್ರ ನೀಡುತ್ತಿಲ್ಲ.

ಅಲೆದಾಟ:

ಸಾರ್ವಜನಿಕರು ತಮ್ಮ ಕೆಲಸ, ಕಾರ್ಯಗಳಿಗೆ ಕಚೇರಿಗೆ ಬಂದು ಬರಿ ಕೈಲಿ ವಾಪಸ್‌ ಹೋಗುವುದು ಸಾಮಾನ್ಯವಾಗಿದೆ. ಗ್ರಾಪಂ ನೌಕರರ ಸಂಘಟನೆಯಿಂದ ಮಂಗಳವಾರವೂ ಪ್ರತಿಭಟನೆ ಮುಂದುವರಿದಿದ್ದು, ಸೇವೆಗಳಿಗೆ ಜನರು ಎಷ್ಟು ದಿನ ಪರದಾಡಬೇಕು ಎಂಬ ಪ್ರಶ್ನೆ ಕಾಡುತ್ತಿದೆ.

ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸೇವೆ ಸ್ಥಗಿತಗೊಳಿಸಿ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ಇದೆ. ಭರವಸೆ ಸಿಗುವವರೆಗೆ ಪ್ರತಿಭಟನೆ ಮುಂದುವರಿಯಲಿದ್ದು, ನಮ್ಮ ರಾಜ್ಯ ಸಂಘಟನೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಿದ್ದೇವೆ. ಪ್ರತಿಭಟನೆ ಅ. 10ರವರೆಗೆ ಮುಂದುವರಿಯಲಿದೆ ಎಂದು ಹೆಸರು ಹೇಳಲಿಚ್ಚಿಸದ ಕುಷ್ಟಗಿ ತಾಲೂಕಿನ ಗ್ರಾಪಂ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳು ಇರಲಾರದ ಕಾರಣ ಈ-ಸ್ವತ್ತು ಉತಾರ, ಪ್ರಮಾಣ ಪತ್ರ, ನರೇಗಾ ಯೋಜನೆಯ ಸಲುವಾಗಿ ಸಾರ್ವಜನಿಕರು ಅಲೆದಾಡುತ್ತಿದ್ದಾರೆ. ಸಿಬ್ಬಂದಿ ಪ್ರತಿಭಟನೆ ಇದೆ, ಸೇವೆ ಸಿಗುವುದಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಕೂಡಲೇ ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಸಾರ್ವಜನಿಕ ಸೇವೆಗೆ ಅನುಕೂಲ ಕಲ್ಪಿಸಬೇಕಿದೆ ಎಂದು ರೈತ ಸಂಘದ ಯುವ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಕಡಿವಾಲ ತಿಳಿಸಿದ್ದಾರೆ.