ಸಾರಾಂಶ
ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಗ್ರಾಮಸ್ಥರಿಂದ ನಿರಂತರ ವಿರೋಧ ವ್ಯಕ್ತವಾಗುತ್ತಿದೆ. ಆದರೂ ಸಹಿತ ಕಾಣದ ಕೈಗಳ ಆಟದಿಂದ ಕಾರ್ಖಾನೆ ಸ್ಥಾಪನೆಗೆ ಎನ್‌ಒಸಿ ಪಡೆಯುವ ಪ್ರಯತ್ನ ನಡೆದಿದೆ.
ಕೊಪ್ಪಳ:
ಸಕ್ಕರೆ ಕಾರ್ಖಾನೆ ಸ್ಥಾಪನೆ ವಿರೋಧಿಸಿ ತಾಲೂಕಿನ ಮುದ್ದಾಬಳ್ಳಿ ಹಾಗೂ ಗೊಂಡಬಾಳ ಗ್ರಾಮಸ್ಥರು ಬುಧವಾರ ಗೊಂಡಬಾಳ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಮುದ್ದಾಬಳ್ಳಿಯಲ್ಲಿ ಮಹಾತ್ಮ ಗಾಂಧೀಜಿ ಪುತ್ಥಳಿಗೆ ಪೂಜೆ ಸಲ್ಲಿಸಿ ಬೈಕ್ ರ‍್ಯಾಲಿ ನಡೆಸಿ, ನಂತರ ಗೊಂಡಬಾಳ ಗ್ರಾಪಂಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮುದ್ದಾಬಳ್ಳಿಯಿಂದ ಹಲವು ಯುವಕರು ಬೈಕ್ ರ‍್ಯಾಲಿ ನಡೆಸಿ ಗೊಂಡಬಾಳ ವರೆಗೂ ತೆರಳಿ, ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಗ್ರಾಪಂಗೆ ಮುತ್ತಿಗೆ ಹಾಕುವ ಯತ್ನ ನಡೆಸಿದರು.
ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಗ್ರಾಮಸ್ಥರಿಂದ ನಿರಂತರ ವಿರೋಧ ವ್ಯಕ್ತವಾಗುತ್ತಿದೆ. ಆದರೂ ಸಹಿತ ಕಾಣದ ಕೈಗಳ ಆಟದಿಂದ ಕಾರ್ಖಾನೆ ಸ್ಥಾಪನೆಗೆ ಎನ್‌ಒಸಿ ಪಡೆಯುವ ಪ್ರಯತ್ನ ನಡೆದಿದೆ. ಗ್ರಾಮ ಪಂಚಾಯಿತಿಯಲ್ಲಿ ಕೆಲವು ಸದಸ್ಯರು ಕಾರ್ಖಾನೆ ಸ್ಥಾಪನೆಗೆ ಎನ್‌ಒಸಿ ಕೊಡಲು ನಿರ್ಧರಿಸಿರುವುದನ್ನು ಖಂಡಿಸಿದ ಗ್ರಾಮಸ್ಥರು, ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಸದಸ್ಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಅಧ್ಯಕ್ಷರು ಸೇರಿ ಸದಸ್ಯರನ್ನು ಗ್ರಾಪಂಗೆ ಕರೆಯಿಸಬೇಕು. ತುರ್ತು ಸಭೆ ನಡೆಸಿ ಈ ಮೊದಲು ಮಾಡಿರುವ ಠರಾವ್ ರದ್ದುಪಡಿಸಿ, ಎನ್‌ಒಸಿ ಕೊಡುವುದಿಲ್ಲ ಎಂದು ನಿರ್ಧರಿಸಬೇಕು ಎಂದು ಬಿಗಿಪಟ್ಟು ಹಿಡಿದರು.ಪ್ರಮುಖರಾದ ಕೆ.ಎಫ್. ಮುದ್ದಾಬಳ್ಳಿ, ದೇವೇಂದ್ರಸ್ವಾಮಿ ಏಕದಂಡಗಿಮಠ, ಗವಿಸಿದ್ದನಗೌಡ ಪಾಟೀಲ್, ರಾಜೀವರಡ್ಡಿ ಮಾದಿನೂರು, ಮಲ್ಲಪ್ಪ ಕುಕನೂರು, ಮಹೇಶ ಹಿರೇಮಠ, ಮಲ್ಲಿಕಾರ್ಜುನ ಕಮ್ಮಾರ ಸೇರಿದಂತೆ ಹಲವರು ಮಾತನಾಡಿ, ನಮಗೆ ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆ ಬೇಡವೇ ಬೇಡ. ಈಗಾಗಲೇ ನಿರ್ಧರಿಸಿರುವ ಠರಾವ್ ರದ್ದುಪಡಿಸಬೇಕು. ಮತ್ತೊಂದು ಸಭೆ ನಡೆಸಿ ತಕ್ಷಣ ಆ ನಿರ್ಧಾರ ಹಿಂಪಡೆಯಬೇಕು. ಗ್ರಾಮದ ಜನರ ಹಿತ ಕಾಪಾಡಬೇಕು. ಇಲ್ಲದಿದ್ದರೆ ಹೋರಾಟ ಬೇರೆ ರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ವಿಶೇಷ ಗ್ರಾಮಸಭೆ ಕರೆಯಲು ನಿರ್ಣಯ ಬೆಳಗ್ಗೆಯಿಂದ ಸಂಜೆ ವರೆಗೂ ಗ್ರಾಮಸ್ಥರು ನಡೆಸಿದ ಪ್ರತಿಭಟನಾ ಧರಣಿಗೆ ಮಣಿದ ಗ್ರಾಪಂ, ಆ. ೨೫ರಂದು ಈಗಾಗಲೇ ಮಾಡಿರುವ ಠರಾವ್ ಮರುಪರಿಶೀಲಿಸಲು ವಿಶೇಷ ಗ್ರಾಮಸಭೆ ನಡಸಲಾಗುವುದು ಎಂದು ತಿಳಿಸಿತು. ಬಳಿಕ ಗ್ರಾಮಸ್ಥರು ಧರಣಿ ಹಿಂಪಡೆದರು.