ಸಾರಾಂಶ
ಹೊಳೆಆಲೂರು: ಒಬ್ಬ ಶಾಸಕನಿಗೆ ವಿಧಾನಸಭೆ, ಎಂಪಿಗೆ ಪಾರ್ಲಿಮೆಂಟ್ ಹೇಗೆ ಮುಖ್ಯವೋ ಹಾಗೆ ಗ್ರಾಪಂ ಸದಸ್ಯನಿಗೆ ಪಂಚಾಯಿತಿ ಕಟ್ಟಡವೂ ಮುಖ್ಯ. ಎಲ್ಲರೂ ಪಕ್ಷಭೇದ ಮರೆತು ಗ್ರಾಮದ ಅಭಿವೃದ್ಧಿಗೆ ಶ್ರಮಿಸೋಣ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.ಸಮೀಪದ ಅಮರಗೋಳ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ 15ನೇ ಹಣಕಾಸು ಯೋಜನೆಯಡಿ ನಿರ್ಮಿಸಿದ ನೂತನ ಗ್ರಾಮ ಪಂಚಾಯಿತಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಚುನಾವಣೆಯಲ್ಲಿ ಗೆದ್ದ ಬಳಿಕ ಗ್ರಾಪಂ ಸದಸ್ಯರು ಗ್ರಾಮದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕು. ಪ್ರವಾಹದ ಸಂದರ್ಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ 14 ಗ್ರಾಮಗಳ ಸ್ಥಳಾಂತರಕ್ಕಾಗಿ ರೈತರಿಂದ ಜಮೀನು ಖರೀದಿಸಿದ್ದು, ರಾಜ್ಯದಲ್ಲಿಯೇ ಮೊದಲು. ಅಂದಿನ ದಿನ ನರಗುಂದ ಮತಕ್ಷೇತ್ರದ 14 ಹಳ್ಳಿಗಳನ್ನು ಸ್ಥಳಾಂತರಿಸಲು ಭೂಮಿ ಖರೀದಿಸಿದೆವು. ಅದನ್ನು ಮಾದರಿಯಾಗಿ ತೆಗೆದುಕೊಂಡ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯಾದ್ಯಂತ 286 ಹಳ್ಳಿಗಳನ್ನು ಸ್ಥಳಾಂತರಕ್ಕೆ ಗುರುತಿಸುವ ಮೂಲಕ ಒಟ್ಟು ರಾಜ್ಯಾದ್ಯಂತ 300 ಹಳ್ಳಿಗಳನ್ನು ಸ್ಥಳಾಂತರಿಸಲಾಯಿತು.ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನರಗುಂದ ಮತಕ್ಷೇತ್ರಕ್ಕೆ ₹1860 ಕೋಟಿ ಅನುದಾನವನ್ನು ತಂದು ಮತಕ್ಷೇತ್ರದ ಪ್ರತಿಯೊಂದು ಗ್ರಾಮಗಳ ರಸ್ತೆಗಳನ್ನು ಸುಧಾರಣೆ ಮಾಡಿದ್ದೇವೆ. ಆ ಮೂಲಕ ನರಗುಂದ ಮತಕ್ಷೇತ್ರದ ಜನರ ಖುಣವನ್ನು ತೀರಿಸುವ ಕೆಲಸ ಮಾಡಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ ಎಂದರು. ತಾಪಂ ಇಒ ಚಂದ್ರಶೇಖರ ಕಂದಕೂರ ಮಾತನಾಡಿ, ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಸುಸಜ್ಜಿತ ಕಟ್ಟಡ ಅಗತ್ಯವಿರುತ್ತದೆ. ಒಟ್ಟು ₹40 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಾಣವಾಗಿದೆ. ತಾಲೂಕಿನಲ್ಲಿಯೇ ಇದೊಂದು ಉತ್ತಮ ಕಟ್ಟಡವಾಗಿ ನಿರ್ಮಾಣವಾಗಿದೆ. ಶಾಸಕ ಸಿ.ಸಿ. ಪಾಟೀಲರು ಕಟ್ಟಡ ನಿರ್ಮಾಣಕ್ಕೆ ಒತ್ತು ನೀಡಿದ ಪರಿಣಾಮ ಇಂದು ಉತ್ತಮವಾದ ಕಟ್ಟಡ ನಿರ್ಮಾಣಗೊಂಡಿರುವುದು. ಆಡಳಿತ ವ್ಯವಸ್ಥೆಯ ಬಗ್ಗೆ ಶಾಸಕರ ಕಾಳಜಿಯನ್ನು ತೋರಿಸುತ್ತದೆ ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಶರಣಮ್ಮ ಸಾಸ್ವಿಹಾಳ, ಉಪಾಧ್ಯಕ್ಷೆ ರೇಣುಕಾ ಪಡಿಯಪ್ಪನವರ, ರೇಷ್ಮಾ ಮನಿಯಾರ್, ನಿಂಗಯ್ಯ ಹಿರೇಮಠ, ಪವಾಡೆಪ್ಪ ಹವಾಜಿ, ತಾಪಂ ಮಾಜಿ ಸದಸ್ಯ ರಾಮನಗೌಡ ಪಾಟೀಲ, ಮುತ್ತಣ್ಣ ಜಂಗಣ್ಣವರ, ಶಶಿಧರ ಪಾಟೀಲ, ನಿಂಗಪ್ಪ ಬದಾಮಿ, ರಮೇಶ ಮೇಟಿ, ಮಹಾಂತಗೌಡ ಹನುಮಂತಗೌಡ, ಎಸ್.ಎಸ್. ಪಾಟೀಲ, ಪಡಿಯಪ್ಪ ಮಾದರ, ಸುಮಿತ್ರ ಭಜಂತ್ರಿ, ಮಂಜುಳಾ ನಿಂಗಪ್ಪ ದಂಡಿನ, ಸಿದ್ದು ಪಾಟೀಲ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.