11 ತಿಂಗಳಿನಿಂದ ಸಂಬಳ ಇಲ್ಲದೇ ಬೇಸತ್ತು ಸಾವಿಗೆ ಶರಣು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಗ್ರಾಮ ಪಂಚಾಯಿತಿ ನೀರುಗಂಟಿ 11 ತಿಂಗಳಿನಿಂದ ಸಂಬಳ ಇಲ್ಲದೇ, ಸಾಲಗಾರರ ಕಾಟ ತಾಳಲಾರದೇ ಡೆತ್‌ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹುಣಸೇಮಕ್ಕಿ ಗ್ರಾಮದಲ್ಲಿ ನಡೆದಿದೆ.

ಆಣೂರು ಗ್ರಾಪಂನ ನೀರುಗಂಟಿ ರಮೇಶ್ (47) ನೇಣಿಗೆ ಶರಣಾದ ವ್ಯಕ್ತಿ. 11 ತಿಂಗಳಿಂದ ಸಂಬಳ ನೀಡಿಲ್ಲ. ಸಾಲಗಾರರ ಕಾಟ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆಲ್ಲೂರು ಪೊಲೀಸ್‌ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

ಗ್ರಾಪಂನಿಂದ ವೇತನ ನೀಡಿಲ್ಲ ಎಂಬ ಬಗ್ಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ವಿಚಾರಿಸಿದ ವೇಳೆ ಕಳೆದ ಫೆಬ್ರವರಿ ವರೆಗೆ ವೇತನ ಪಾವತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಮೃತನಿಗೆ ಪತ್ನಿ, ಮಗ (19), ಮಗಳು(18) ಇದ್ದಾರೆ.

ಡೆತ್‌ನೋಟ್‌ನಲ್ಲಿ ಏನಿದೆ?

ನನ್ನ ಸಾವಿಗೆ ನಾನೇ ನೇರ ಕಾರಣ ಎಂದು ಮೊದಲ ಸಾಲಿನಲ್ಲಿಯೇ ಬರೆಯಲಾಗಿದೆ. ಮುಂದೆ, ಹಲವು ವರ್ಷದಿಂದ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, 11 ತಿಂಗಳ ವೇತನ ಕೊಟ್ಟಿಲ್ಲ. ಸಂಘದವರು ಮನೆಗೆ ಬಂದು ಹಣ ಕಟ್ಟುವಂತೆ ನನಗೆ ಮತ್ತು ನಮ್ಮ ಮನೆಯವರಿಗೆ ತೊಂದರೆ ಕೊಡುತ್ತಿದ್ದಾರೆ. ಹಾಗಾಗಿ ನನಗೆ ತುಂಬಾ ಮನಸ್ಸಿಗೆ ಬೇಜಾರಾಗಿದೆ.

ಫೈನಾನ್ಸ್‌ನಲ್ಲಿ ಸಾಲ ಮಾಡಿರುವೆ. ಸಂಬಳ ನೀಡದಿದ್ದಕ್ಕೆ ಸಾಲಕಟ್ಟಲು ಆಗುತ್ತಿಲ್ಲ. ಆರ್‌ಬಿಎಲ್‌, ಎಸ್‌ಕೆಎಸ್‌ ಗ್ರಾಮಿಣಕೂಟ, ಮುತ್ತೂಟ್ ಫೈನಾನ್ಸ್‌ ಸಿಬ್ಬಂದಿ ಮನೆಗೆ ಬಂದು ಮನೆಯವರಿಗೂ ಕಿರುಕುಳ ನೀಡುತ್ತಿದ್ದಾರೆ. ಇನ್ನು ಗ್ರಾಪಂ ಕಚೇರಿಯಲ್ಲೂ ಕೆಲವರು ಕೆಲಸ ಮಾಡಲು ಬಿಡುತ್ತಿಲ್ಲವೆಂದು ಅವರ ಹೆಸರನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ.