ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರ ಇದ್ದಂತೆ. ಇವುಗಳಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ. ಕೇಂದ್ರ- ರಾಜ್ಯ ಸರ್ಕಾರದ ಸಾಕಷ್ಟು ಯೋಜನೆಗಳ ಅನುದಾನ ನೇರವಾಗಿ ಗ್ರಾಪಂಗಳಿಗೆ ಬಿಡುಗಡೆ ಮಾಡಿ ಅನುಷ್ಠಾನಗೊಳಿಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸರ್ಕಾರಿ ಜಾಗ ಗುರುತಿಸಿ ಬಡವರಿಗೆ ನಿವೇಶನ ವಿತರಣೆ ಮಾಡಲು ಗ್ರಾಮ ಪಂಚಾಯಿತಿಗಳು ಜವಾಬ್ದಾರಿ ತೆಗೆದುಕೊಂಡರೆ ಒಳ್ಳೆಯ ಹೆಸರು ಬರುತ್ತದೆ ಎಂದು ಶಾಸಕ ಎಚ್.ಟಿ.ಮಂಜು ಕಿವಿಮಾತು ಹೇಳಿದರು.ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಪಂ ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನಾ ಇಲಾಖೆ (ಕೆಶಿಫ್) ಸಂಯುಕ್ತಾಶ್ರಯದಲ್ಲಿ ನಿರ್ಮಿಸಲಾಗುತ್ತಿರುವ ಗ್ರಾಪಂನ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರ ಇದ್ದಂತೆ. ಇವುಗಳಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ. ಕೇಂದ್ರ- ರಾಜ್ಯ ಸರ್ಕಾರದ ಸಾಕಷ್ಟು ಯೋಜನೆಗಳ ಅನುದಾನ ನೇರವಾಗಿ ಗ್ರಾಪಂಗಳಿಗೆ ಬಿಡುಗಡೆ ಮಾಡಿ ಅನುಷ್ಠಾನಗೊಳಿಸಲಾಗುತ್ತಿದೆ. ಹೀಗಾಗಿ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ಕಾರ್ಯದರ್ಶಿ ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಸರ್ಕಾರಿ ಜಮೀನು ಇದೆ ಎಂಬುದನ್ನು ಕಂದಾಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ನಿವೇಶನ ಹಂಚಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.ಗ್ರಾಮೀಣ ಭಾಗದ ಎಲ್ಲದಕ್ಕೂ ಶಾಸಕರನ್ನೇ ಹೊಣೆ ಮಾಡಬಾರದು. ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸಬಾರದು. ಜಾಬ್‌ಕಾರ್ಡ್ ಹೊಂದಿರುವ ಎಲ್ಲರಿಗೂ ನರೇಗಾ ಕಾಮಗಾರಿ ಮಾಡಲು ಅವಕಾಶ ಕಲ್ಪಿಸಬೇಕು. ಅಗತ್ಯ ಇರುವ ಕಡೆ ಹೊರತುಪಡಿಸಿ ಬೇರೆ ಯಾವುದೇ ಕೆಲಸಕ್ಕೆ ಜೆಸಿಬಿ ಬಳಕೆ ಮಾಡಬಾರದು. ಕೂಲಿ ಕಾರ್ಮಿಕರನ್ನು ಮಾತ್ರ ನರೇಗಾ ಕೆಲಸಕ್ಕೆ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಗ್ರಾಪಂ ಅಧ್ಯಕ್ಷ ಎ.ಸಿ.ದಿವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಕೆ.ಸುಷ್ಮಾ, ತಾಪಂ ಯೋಜನಾಧಿಕಾರಿ ಮೋದೂರು ಶ್ರೀನಿವಾಸ್, ಕೆಶಿಫ್ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್, ಎಇಇ ಶಿವರಾಜು, ಎಂಜಿನಿಯರ್ ಮದನ್‌ಕುಮಾರ್, ಕಸಬಾ ರಾಜಸ್ವ ನಿರೀಕ್ಷಕ ಜ್ಞಾನೇಶ್, ಗ್ರಾಪಂ ಉಪಾಧ್ಯಕ್ಷೆ ಸುನಿತಾದ್ಯಾವಯ್ಯ, ತಾಪಂ ಮಾಜಿ ಅಧ್ಯಕ್ಷ ಮಹದೇವೇಗೌಡ ಇತರರಿದ್ದರು.