ಸಾರಾಂಶ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ತಾಲೂಕಿನ 6 ಗ್ರಾಮ ಪಂಚಾಯಿತಿಗೆ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಪ್ರಶಸ್ತಿ ಲಭಿಸಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ ತಿಳಿಸಿದರು.ಪತ್ರಿಕಾ ಹೇಳಿಕೆ ನೀಡಿ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಅಭಿಯಾನ ನಡೆಸಲಾಗಿದ್ದು ಇದರಲ್ಲಿ 6 ಗ್ರಾಮ ಪಂಚಾಯಿತಿ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಎಂದು ಆಯ್ಕೆಯಾಗಿದೆ. ಸರ್ಕಾರ ನಿಗದಿ ಪಡಿಸಿದ ಸೂಚ್ಯಂಕದ ಪ್ರಕಾರ ಕ್ಷಯ ರೋಗ ನಿಯಂತ್ರಿಸುವಲ್ಲಿ ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯಕೇಂದ್ರ ವ್ಯಾ ಪ್ತಿಯ ಬನ್ನೂರು ಗ್ರಾಪಂಗೆ ಕಂಚಿನ ಪ್ರತಿಮೆ, ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಆಡುವಳ್ಳಿ ಗ್ರಾಮ ಪಂಚಾಯಿತಿಗೆ ಬೆಳ್ಳಿಯ ಪ್ರತಿಮೆ, ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕಡಹಿನಬೈಲು ಗ್ರಾಮ ಪಂಚಾಯಿತಿಗೆ ಬೆಳ್ಳಿ ಪ್ರತಿಮೆ, ಸೀತೂರು ಗ್ರಾಮ ಪಂಚಾಯಿತಿಗೆ ಕಂಚಿನ ಪ್ರತಿಮೆ, ನರಸಿಂಹರಾಜಪುರ ಸಾರ್ವಜನಿಕ ಆಸ್ಪತ್ರೆ ವ್ಯಾಪ್ತಿಗೆ ಒಳಪಡುವ ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿಗೆ ಬೆಳ್ಳಿ ಪ್ರತಿಮೆ ಹಾಗೂ ಮಾಗುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಮಾಗುಂಡಿ ಗ್ರಾಮ ಪಂಚಾಯಿತಿಗೆ ಬೆಳ್ಳಿ ಗಾಂಧೀಜಿ ಪ್ರತಿಮೆ ಲಭಿಸಿದೆ.
ಚಿಕ್ಕಮಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಶ್ವತ್ ಬಾಬು ಸಂಬಂಧಪಟ್ಟ 6 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಪಿಡಿಒ ಹಾಗೂ ವೈದ್ಯಾಧಿಕಾರಿಗಳಿಗೆ ಗಾಂಧೀಜಿ ಪ್ರತಿಮೆ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು ಎಂದು ತಿಳಿಸಿದರು.ಈ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಪ್ರಶಸ್ತಿ ಲಭಿಸಲು ಕ್ಷೇತ್ರಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ವೈಧ್ಯಾಧಿಕಾರಿಗಳು,ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ತಾಲೂಕು ಕ್ಷಯ ರೋಗ ಘಟಕದ ಮೇಲ್ವೀಚಾರಕರು ಹಾಗೂ ಸಾರ್ವಜನಿಕರ ಸಹಕಾರದಿಂದ ಈ ಸಾಧನೆ ಮಾಡಲಾಗಿದೆ. ಮುಂದಿನ ದಿನಗಳಲ್ಲೂ ಕ್ಷಯ ಮುಕ್ತ ತಾಲೂಕನ್ನಾಗಿ ನಿರ್ಮಾಣ ಮಾಡಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.