ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಗ್ರಾಮ ಪಂಚಾಯಿತಿಗಳು ಸಬಲವಾದಾಗ ಮಾತ್ರ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಗ್ರಾ.ಪಂ. ಅಧಿಕಾರಿಗಳು, ಸಿಬ್ಬಂದಿ ಆಸಕ್ತಿ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಪಿಡಿಒ ಹಾಗೂ ಕಾರ್ಯದರ್ಶಿಗಳಿಗೆ ಆಯೋಜಿಸಿದ್ದ ತಾಲೂಕು ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದು ಜನಪ್ರತಿನಿಧಿಗಳ ಕರ್ತವ್ಯ. ಗ್ರಾಮ ಅಭಿವೃದ್ಧಿಗಾಗಿ ಗ್ರಾಮಪಂಚಾಯಿತಿಯಿಂದ ಸಾಕಷ್ಟು ಅನುದಾನ ಕಲ್ಪಿಸಿಕೊಡಲಾಗುತ್ತಿದೆ. ಅಧಿಕಾರಿ ವರ್ಗದವರು ಇವುಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಬೇಕು. ಒಂದು ಪಕ್ಷ ಅಥವಾ ವ್ಯಕ್ತಿಗೆ ಗ್ರಾ.ಪಂಗಳು ಸೀಮಿತವಾಗಬಾರದು. ಜಾತ್ಯತೀತ ಮನೋಭಾವದಿಂದ ತಂಡದ ರೀತಿ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಸ್ಯೆ ಆಲಿಸಲು ಗ್ರಾಮ ಸಭೆ ಕರೆಯವುದಾಗಿ ತಿಳಿಸಿದ ಶಾಸಕರು ಜನರು ಕೊಟ್ಟಿರುವ ಜವಾಬ್ದಾರಿಯನ್ನು ಅರಿತು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದಾಗ ಗ್ರಾಮ ಸ್ವರಾಜ್ಯ ಆಗಲಿದೆ ಎಂದರು. ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರವಾಗಿದ್ದು ಇಲ್ಲಿನ ಅಧಿಕಾರಿಗಳು ದೂರದೃಷ್ಟಿಯಿಂದ ಪಾರದರ್ಶಕವಾಗಿ ಕೆಲಸ ನಿರ್ವಹಿಸಬೇಕು. ಅಧಿಕಾರಿಗಳು, ಪಿಡಿಓಗಳು ಸಿಬ್ಬಂದಿಗಳು ಹೇಗೆ ಕಾರ್ಯನಿರ್ವಹಿಸಬೇಕು. ನಮ್ಮಲ್ಲಿ ಗ್ರಾಪಂಗಳನ್ನು ಗಟ್ಟಿಗೊಳಿಸಲು ಬೇಕಾದ ಸೌಲಭ್ಯಗಳಿದ್ದು 5ಕೋಟಿ ರು.ವರೆಗೆ ಕೆಲಸ ಮಾಡುವಷ್ಟು ಅನುದಾನಗಳಿವೆ. ಇದನ್ನು ಚುನಾಯಿತ ಪ್ರತಿನಿಧಿಗಳು ಜವಾಬ್ದಾರಿಯಿಂದ ಸಮಪರ್ಕವಾಗಿ ಬಳಸಿಕೊಳ್ಳಬಹುದು. ರಾಜ್ಯದಲ್ಲಿ ತುಮಕೂರು ಜಿಲ್ಲೆ ಎನ್‌ಆರ್‌ಇಜಿ ಯೋಜನೆಯಡಿ ಪ್ರಥಮ ಸ್ಥಾನ ಗಳಿಸಿದ್ದು 650ಕೋಟಿ ರು.ಗಳಷ್ಟು ಅಭಿವೃದ್ಧಿ ಕೆಲಸ ಮಾಡಿದೆ ಎಂದರು.
ತಾ.ಪಂ ಇಓ ಸುದರ್ಶನ್ ಮಾತನಾಡಿ, ಗ್ರಾ ಪಂ ಅಧಿಕಾರಿಗಳು, ಸಿಬ್ಬಂದಿಗಳಿಗಾಗಿಯೇ ಈ ತರಬೇತಿ ಆಯೋಜಿಸಲಾಗಿದೆ. ಗ್ರಾಮಪಂಚಾಯಿತಿಗಳು ಜನರಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಇರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರ ಗ್ರಾಮ ಪಂಚಾಯಿತಿಗೆ ಸ್ಮಶಾನ, ಕೆರೆ ಒತ್ತುವರಿ ಹೀಗೆ ಸಾಕಷ್ಟು ಅಧಿಕಾರ ನೀಡಿದ್ದು ಅದನ್ನು ಬಳಸಿಕೊಳ್ಳಬೇಕು. ಜವಾಬ್ದಾರಿಗಳನ್ನು ಹೇಗೆ ನಿಭಾಯಿಸಬೇಕೆಂಬ ಮಾಹಿತಿ ಚುನಾಯಿತ ಜನಪ್ರತಿನಿಧಿಗಳಿರಬೇಕು. ಜವಾಬ್ದಾರಿ ಮತ್ತು ಕರ್ತವ್ಯ ಅರಿತು ಕೆಲಸ ಮಾಡಿದರೆ ಸರ್ಕಾರಿ ಕೆಲಸಗಳು ಯಶಸ್ವಿಯಾಗಲಿವೆ ಎಂದರು.ಕಾರ್ಯಾಗಾರದಲ್ಲಿ ಪಶು ಇಲಾಖೆ ಸಹಾಯಕ ನಿರ್ದೇಶಕ ನಂದೀಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಪಿ. ಪವನ್, ಸಿಡಿಪಿಒ ದೀಪಾ ಹೆಬ್ಬಳ್ಳಿ, ಕುಡಿಯುವ ನೀರಿನ ಎಇಇ ನಾಗೇಂದ್ರ ಸೇರಿದಂತೆ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿವರ್ಗದವರು ಭಾಗವಹಿಸಿದ್ದರು. ನಂತರ ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಪಟ್ಟ ಕಾಯಕಲ್ಪ ಪುಸ್ತಕ ಬಿಡುಗಡೆ ಮಾಡಲಾಯಿತು.