ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
2025ರ ಮಾರ್ಚ್ 18ರಿಂದ ನಡೆಯಲಿರುವ ಗ್ರಾಮದೇವತೆ ಊರಮ್ಮದೇವಿ ಹಬ್ಬದ ಉತ್ಸವ ಸಮಿತಿಯ ಮಹಜೇನಹಳ್ಳಿ ಭಾಗದ ಅಧ್ಯಕ್ಷರಾಗಿ ಹಾರ್ನಳ್ಳಿ ಮಂಜುನಾಥ, ಕಾರ್ಯದರ್ಶಿಯಾಗಿ ಬಿ.ಕೆ. ಗಿರೀಶ್, ಸಹ ಕಾರ್ಯದರ್ಶಿಯಾಗಿ ದೊಗ್ಗಳ್ಳಿ ಸಿದ್ದಪ್ಪ ಅವರನ್ನು ಮಂಗಳವಾರ ಆಯ್ಕೆ ಮಾಡಲಾಯಿತು.ನಗರದ ಶಿವಮೊಗ್ಗ ರಸ್ತೆಯ ಮಹಜೇನಹಳ್ಳಿ ಗ್ರಾಮದೇವತೆ ದೇವಸ್ಥಾನದಲ್ಲಿ ಭಾಗದ ಗೌಡ್ರು, ಶಾನುಭೋಗರ ಸಮ್ಮುಖದಲ್ಲಿ ಸ್ಥಳೀಯ ಮುಖಂಡರು ಸಭೆ ಸೇರಿ ಪದಾಧಿಕಾರಿಗಳ ಆಯ್ಕೆಗೊಳಿಸಿದರು. ಪದಾಧಿಕಾರಿಗಳ ಹೆಸರನ್ನು ಘೋಷಣೆ ಮಾಡುತ್ತಿದ್ದಂತೆ ಅಭಿಮಾನಿಗಳು ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಭಂಡಾರವನ್ನು ಹಚ್ಚಿ ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸಭೆಯಲ್ಲಿ ಗೌಡರ ಚನ್ನಬಸಪ್ಪ, ಶಾನಭೋಗರ ಗಿರೀಶ್, ಬಣಕಾರ ಆಂಜನೇಯ, ಮಾಜಿ ಶಾಸಕ ಎಸ್. ರಾಮಪ್ಪ, ಶೇರಾಪುರದ ರಾಜಶೇಖರ, ಹಂಚಿನ ನಾಗಣ್ಣ, ಎಚ್.ಎಂ. ಶಿವಾನಂದಪ್ಪ ದಿನೇಶ್ ಬಾಬು, ಎಸ್.ಎಂ. ವಸಂತ, ಕಳ್ಳೇರ್ ಮಂಜುನಾಥ, ಬ್ಯಾಂಕ್ ಶಿವಪ್ಪ, ಮಂಕ್ರಿ ಪಾಲಾಕ್ಷಪ್ಪ, ಡಿ. ಸಿದ್ದೇಶ ಹಾಗೂ ಇತರರು ಭಾಗವಹಿಸಿದ್ದರು.ಅಧ್ಯಕ್ಷ ಮಂಜುನಾಥ ಹರಿಹರದವರಲ್ಲ: ಆಕ್ಷೇಪ
ಮಹಜೇನಹಳ್ಳಿ ಗ್ರಾಮದೇವತೆ ಉತ್ಸವ ಸಮಿತಿಗೆ ಹಾರ್ನಳ್ಳಿ ಮಂಜುನಾಥ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ದೇವಸ್ಥಾನ ಭಕ್ತರು ಹಾಗೂ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಈ ಕುರಿತು ಹಿಂದಿನ ಅವಧಿಯ ಉತ್ಸವ ಸಮಿತಿ ಖಜಾಂಚಿಯಾಗಿದ್ದ ಶೇರಾಪುರದ ರಾಜಶೇಖರ್ ಸುದ್ದಿಗೋಷ್ಠಿ ನಡೆಸಿದರು. ಹಾರ್ನಳ್ಳಿ ಮಂಜುನಾಥ ಮೂಲತಃ ಹರಿಹರದವರಲ್ಲ. ಅದರಲ್ಲೂ ಅನೇಕ ವರ್ಷಗಳ ಕಾಲ ಅವರು ಕಸಬಾ ವ್ಯಾಪ್ತಿ ನಿವಾಸಿಯಾಗಿದ್ದಾರೆ. ಇತ್ತೀಚಿಗೆ ಮಹಜೇನಹಳ್ಳಿ ಭಾಗಕ್ಕೆ ಬಂದಿದ್ದು, ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಸರಿಯಲ್ಲ ಎಂದರು.ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆ ನಡೆಯುವಾಗ ಕೆಲ ಮುಖಂಡರು ಪ್ರತ್ಯೇಕ ಕೊಠಡಿಯಲ್ಲಿ ಚರ್ಚಿಸಿ, ಅಧ್ಯಕ್ಷರ ಆಯ್ಕೆ ಮುಂದಿನ ವಾರಕ್ಕೆ ಮುಂದೂಡಲಾಗಿದೆ ಎಂದರು. ಇದರಿಂದ ಆಗಮಿಸಿದ ಬಹುತೇಕ ಭಕ್ತರು ಸಭೆಯಿಂದ ನಿರ್ಗಮಿಸಿದ್ದಾರೆ. ಆದರೆ, ಅನಂತರ ಮುಖಂಡರು ದಿಢೀರನೆ ಹಾರ್ನಳ್ಳಿ ಮಂಜುನಾಥ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಅಧ್ಯಕ್ಷರ ಸ್ಥಾನಕ್ಕೆ ಕಳ್ಳೆರ ಮಂಜುನಾಥ, ಎಸ್.ಎಂ. ವಸಂತ್, ಮಂಕ್ರಿ ಪಾಲಾಕ್ಷಪ್ಪ, ಶ್ರೀಕಾಂತ್ ಮೆಹರ್ವಾಡೆ, ರುದ್ರಣ್ಣ ಸೇರಿದಂತೆ ಅನೇಕರು ಇದ್ದರು. ಅವರಲ್ಲಿ ಯಾರಾದರೊಬ್ಬರನ್ನು ಆಯ್ಕೆ ಮಾಡಬೇಕು ಎಂಬುದು ಭಕ್ತರ ಆಶಯವಾಗಿತ್ತು ಎಂದರು.ಅಧ್ಯಕ್ಷ, ಕಾರ್ಯದರ್ಶಿ, ಸಹ ಕಾರ್ಯದರ್ಶಿ ಆಯ್ಕೆ ಮಾಡುವ ಅಧಿಕಾರ ಚನ್ನಬಸಪ್ಪ ಗೌಡರಿಗೆ ಮಾತ್ರವೇ ಇದೆ. ಆದರೆ, ಅವರ ಬದಲು ಮಾಜಿ ಶಾಸಕ ಎಸ್. ರಾಮಪ್ಪ ಘೋಷಣೆ ಮಾಡಿದ್ದಾರೆ. ಇದರಿಂದ ಆಯ್ಕೆ ಪ್ರಕ್ರಿಯೆ ಅಧಿಕೃತವಲ್ಲ. ಇದೇ ಆಯ್ಕೆ ಮುಂದುವರಿದರೆ ಮಹಜೇನಹಳ್ಳಿ ಭಾಗದ ಮುಖಂಡರು, ಭಕ್ತರು ಹಾಗೂ ರೈತರು ಉತ್ಸವದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಆದ್ದರಿಂದ ಕೂಡಲೇ ಮತ್ತೆ ಸಭೆ ಕರೆದು ಶೀಘ್ರ ನೂತನ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯ ದಿನೇಶ್ ಬಾಬು, ಗಂಗಾಧರ್, ಮಂಕ್ರಿ ಪಾಲಾಕ್ಷಪ್ಪ, ಶ್ರೀಕಾಂತ್ ಮೆಹರ್ವಾಡೆ, ಬೆಳಕೆರೆ ನಾಗಣ್ಣ, ಬಾಂಬೆ ನಾಗಣ್ಣ, ಹಂಚಿನಮನೆ ದೇವೇಂದ್ರಪ್ಪ, ಡಿ.ಸಿದ್ದೇಶ್, ಮಕನೂರು ತಿಪ್ಪೇಶ್, ಬಸವನಗೌಡ, ಕುರ್ಚಿ ಸಿದ್ದೇಶ್‍ಗೌಡ ಇತರರು ಭಾಗವಹಿಸಿದ್ದರು.