ಸಾರಾಂಶ
- ಬ್ಯಾಂಕ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷೆ ಬಿ.ಎನ್. ಶೋಭಾ ಶ್ಲಾಘನೆ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಶ್ರಮಿಸುತ್ತಿದೆ. ಈ ಬ್ಯಾಂಕ್ ಆರಂಭಗೊಂಡು 82 ವರ್ಷ ಪೂರೈಸಿ 83ನೇ ವರ್ಷದಲ್ಲಿ ಮುನ್ನಡೆಯುತ್ತಿದೆ. ತಾಲೂಕಿನ ರೈತರಿಗೆ ಸಹಾಯ ಮಾಡುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷೆ ಬಿ.ಎನ್. ಶೋಭಾ ಉಮೇಶ್ ಕುಮಾರ್ ಹೇಳಿದರು.ಪಟ್ಟಣದ ಹೊರವಲಯದ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ಶನಿವಾರ ಬ್ಯಾಂಕ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ಯಾಂಕಿನ ಶ್ರೇಯೋಭಿವೃದ್ದಿಗಾಗಿ ಬೆನ್ನೆಲುಬಾಗಿ ಸಹಕಾರ ನೀಡುತ್ತೀರುವ ಕಸ್ಕರ್ಡ ಬ್ಯಾಂಕಿನ ರಾಜ್ಯಾಧ್ಯಕ್ಷ ಕೆ.ಷಡಾಕ್ಷರಿ ಉಪಾಧ್ಯಕ್ಷ ಕೆ.ಉಳುವಪ್ಪ ತಿಪ್ಪಣ್ಣ ದಾಸನೂರು ಸಹಕಾರ ನೀಡುತ್ತಿದ್ದಾರೆ ಎಂದರು.
2024-25ನೇ ಸಾಲಿನಲ್ಲಿ ₹9.50 ಕೋಟಿಯನ್ನು ರೈತರ ಸಂಕಷ್ಟ ಸಮಯದಲ್ಲಿ ಅಸಲು ಹಣ ಕಟ್ಟಿದರೆ ಬಡ್ಡಿ ಮನ್ನಾ ಎಂಬ ಯೋಜನೆಯನ್ನು ತಂದು ರೈತರಿಗೆ ಸಹಕಾರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರ ಮೇಲಿಟ್ಟಿರುವ ಅಭಿಮಾನದ ಬಗ್ಗೆ ಶ್ಲಾಘಿಸಿದರು.ಪ್ರಸಕ್ತ ವರ್ಷದಲ್ಲಿ ರೈತರಿಗೆ 1 ಎಕರೆಗೆ ₹1.10 ಲಕ್ಷ ಸಾಲ ನೀಡಲು ಹೆಚ್ಚಿಸಲಾಗಿದೆ. ಈ ಹಿಂದೆ ರಾಜ್ಯ ಬ್ಯಾಂಕ್ ನಿರ್ದೇಶಕಿ ಆಗಿದ್ದಾಗ ಸಣ್ಣ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಟ್ರ್ಯಾಕ್ಟರ್ ಖರೀದಿಸಲು, ಕ್ರಮವಾಗಿ ಮಿನಿ ಟ್ರ್ಯಾಕ್ಟರ್ ಖರೀದಿಸಲು 3 ಎಕರೆ ಜಮೀನನ್ನು ನಿಗದಿಪಡಿಸಿ ಕಾರ್ಯರೂಪಕ್ಕೆ ತಂದಿದ್ದೆವು. ಇದರಿಂದ ಸಣ್ಣ ರೈತರು ಸಹಾ ಟ್ರ್ಯಾಕ್ಟರ್‌ಗಳನ್ನು ಹೊಂದಿ, ಕೃಷಿ ಚಟುವಟಿಕೆ ನಡೆಸುತ್ತಿರುವುದು ತೃಪ್ತಿ ತಂದಿದೆ ಎಂದರು.
ಸಭೆಯಲ್ಲಿ 2024-25ನೇ ಸಾಲಿನ ಆಡಳಿತ ವರದಿ ಮಂಡಿಸಿ, ಲೆಕ್ಕ ಪರಿಶೋಧನೆಯಾದ ಜಮಾ-ಖರ್ಚು, ಲಾಭ-ನಷ್ಟ ಸಭೆಯಲ್ಲಿ ಮಂಡಿಸಲಾಯಿತು. ಬಜೆಟ್‌ಗಿಂತ ಹೆಚ್ಚಿಗೆ ಆಗಿರುವ ಹಣವನ್ನು ಮಂಜೂರು ಮಾಡುವ ವಿಚಾರವಾಗಿ ಚರ್ಚೆ ನಡೆಸಿ, 2025-26ನೇ ಸಾಲಿನ ಆಯ-ವ್ಯಯದ ಮಂಜೂರಾತಿ ನೀಡುವ ಬಗ್ಗೆ ಬ್ಯಾಂಕಿನ ಲೆಕ್ಕ ಪರಿಶೋಧಕರನ್ನು ನೇಮಕ ಮಾಡಿಕೊಳ್ಳುವ ವಿಚಾರದ ಬಗ್ಗೆ ಸಮಾಲೋಚಿಸಲಾಯಿತು.ಸಭೆ ಆರಂಭಕ್ಕೂ ಮುನ್ನ ನಿಧನ ಹೊಂದಿದ ಬ್ಯಾಂಕ್ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ಆಡಳಿತ ಮಂಡಳಿ ಉಪಾಧ್ಯಕ್ಷ ದೊಡ್ಡ ಬಸಪ್ಪ, ನಿರ್ದೇಶಕರಾದ ಜಿ.ಆರ್.ಲೋಕೇಶಪ್ಪ, ಎಸ್.ಮಂಜಪ್ಪ, ಶಿವಕುಮಾರ್, ಸತೀಶ್, ಮಹದೇವಪ್ಪ, ಅಜ್ಜಪ್ಪ, ಯೋಗೇಶ್ವರಪ್ಪ, ವಾಸುದೇವಶೆಟ್ಟಿ, ಶಿವಕುಮಾರ್, ಉಷಾ, ಕುಬೇಂದ್ರಪ್ಪ, ಶಶಿಧರ್ ನಾಯ್ಕ್, ಸರ್ಜಿರಮೇಶ್, ಕಸ್ಕರ್ಡ ಬ್ಯಾಂಕ್ ನ ಪ್ರತಿನಿಧಿ ಶ್ವೇತಾ, ವ್ಯವಸ್ಥಾಪಕ ಜಿ.ಟಿ.ತಿಪ್ಪೇಸ್ವಾಮಿ ಸೇರಿದಂತೆ ಬ್ಯಾಂಕ್ ನ ಸದಸ್ಯರುಗಳು ಹಾಜರಿದ್ದರು.
- - --30ಕೆಸಿಎನ್‌ಜಿ1: ಬ್ಯಾಂಕ್ ಅಧ್ಯಕ್ಷೆ ಬಿ.ಎನ್.ಶೋಭಾ ಕಾರ್ಯಕ್ರಮ ಉದ್ಘಾಟಿಸಿದರು.