ಸಾರಾಂಶ
ಹೋಬಳಿಯ ವೆಂಕಟಗಿರಿಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಹೋಟೆಲ್, ಬೇಕರಿ, ವೈದ್ಯಕೀಯ ಮೆಡಿಕಲ್ ತ್ಯಾಜ್ಯಗಳನ್ನು ಸೂಕ್ತ ವಿಲೇವಾರಿ ಮಾಡದೆ ಕೆರೆಗೆ ಸುರಿಯುತ್ತಿದ್ದ ಕಿಡಿಗೇಡಿಗಳ ವಿರುದ್ಧ ಗ್ರಾಪಂ ವಿಶೇಷ ಆಂದೋಲನ ಕೈಗೊಂಡಿದ್ದು, ಕೆರೆಯ ಇಕ್ಕೆಲಗಳಲ್ಲಿ ಸ್ಥಳೀಯ ಮೆಡಿಕಲ್ ಕ್ಲಿನಿಕ್‌ಗಳು, ಹೋಟೆಲ್, ಬೇಕರಿಗಳು ಸುರಿದಿದ್ದ ಕಸ ತುಂಬಿಕೊಂಡು ಬಂದ ಗ್ರಾಪಂ ಸಿಬ್ಬಂದಿ, ಅವರವರ ಕಸ ಅವರ ಅಂಗಡಿ, ಮುಂಗಟ್ಟುಗಳ ಮುಂದೆಯೇ ಸುರಿದು ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಹೋಬಳಿಯ ವೆಂಕಟಗಿರಿಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಹೋಟೆಲ್, ಬೇಕರಿ, ವೈದ್ಯಕೀಯ ಮೆಡಿಕಲ್ ತ್ಯಾಜ್ಯಗಳನ್ನು ಸೂಕ್ತ ವಿಲೇವಾರಿ ಮಾಡದೆ ಕೆರೆಗೆ ಸುರಿಯುತ್ತಿದ್ದ ಕಿಡಿಗೇಡಿಗಳ ವಿರುದ್ಧ ಗ್ರಾಪಂ ವಿಶೇಷ ಆಂದೋಲನ ಕೈಗೊಂಡಿದ್ದು, ಕೆರೆಯ ಇಕ್ಕೆಲಗಳಲ್ಲಿ ಸ್ಥಳೀಯ ಮೆಡಿಕಲ್ ಕ್ಲಿನಿಕ್‌ಗಳು, ಹೋಟೆಲ್, ಬೇಕರಿಗಳು ಸುರಿದಿದ್ದ ಕಸ ತುಂಬಿಕೊಂಡು ಬಂದ ಗ್ರಾಪಂ ಸಿಬ್ಬಂದಿ, ಅವರವರ ಕಸ ಅವರ ಅಂಗಡಿ, ಮುಂಗಟ್ಟುಗಳ ಮುಂದೆಯೇ ಸುರಿದು ಎಚ್ಚರಿಕೆ ನೀಡಿದರು.ವೆಂಕಟಗಿರಿಕೋಟೆ ಗ್ರಾಪಂ ಪಿಡಿಒ ಬಸವನಗೌಡ ಗಂಗಪ್ಪಳವರ್ ಮಾತನಾಡಿ, ಈಗಾಗಲೇ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಂಗಡಿ ಮುಂಗಟ್ಟುಗಳು ಕಾನೂನು ಬಾಹಿರವಾಗಿ ಕಸ ವಿಲೇವಾರಿ ಮಾಡದಂತೆ ಮೂರು ಬಾರಿ ಸಂಬಂಧಪಟ್ಟ ಮಾಲೀಕರಿಗೆ ತಿಳಿಸಲಾಗಿದೆ. ಸಾಕಷ್ಟು ಬಾರಿ ಮೌಖಿಕವಾಗಿ ತಿಳಿಸಿದ್ದರೂ, ಕಸ ಕೆರೆಯಂಗಳಕ್ಕೆ ಸುರಿಯುತ್ತಿದ್ದದರಿಂದ ಕೆರೆಯ ನೀರು ಕಲುಷಿತವಾಗುವ ಜೊತೆಗೆ ಕೆರೆಯಲ್ಲಿ ನೀರು ಕುಡಿಯುವ ದನಕರುಗಳಿಗೂ ತೊಂದರೆಯಾಗುತ್ತದೆ. ಆದ್ದರಿಂದ ಈ ರೀತಿಯ ಕ್ರಮಕ್ಕೆ ಮುಂದಾಗಬೇಕಾಗಿದೆ ಎಂದು ಹೇಳಿದರು.
ಪಂಚಾಯಿತಿ ವತಿಯಿಂದಲೇ ಕಸ ವಿಲೇವಾರಿ ಮಾಡಲು ಕಸದ ಗಾಡಿಗಳನ್ನು ವ್ಯವಸ್ಥೆ ಮಾಡಿದ್ದೇವೆ. ಸೂಕ್ತ ಕಸ ವಿಂಗಡಿಸಿ ಪೌರ ಕಾರ್ಮಿಕರಿಗೆ ನೀಡಿ ಎಂದು ಸಾಕಷ್ಟು ಪ್ರಚಾರ ಮಾಡಿದ್ದೇವೆ. ಆದರೂ ಬೇಕರಿ, ಹೋಟೆಲ್‌ನವರು ತ್ಯಾಜ್ಯವನ್ನು ಕೆರೆಗೆ ಸುರಿದು ಪರಿಸರ ನಾಶ ಮಾಡುತ್ತಿದ್ದಾರೆ. ಆದಕಾರಣ ಅವರು ಹಾಕಿದ್ದ ಕಸವನ್ನು ಅವರ ಅಂಗಡಿಗೆ ಸುರಿದಿದ್ದೇವೆ ಎಂದರು.ಪ್ರತಿಯೊಬ್ಬರು ವಾಣಿಜ್ಯ ವಹಿವಾಟು ಮಾಡುವ ಅಂಗಡಿ ಮುಂಗಟ್ಟುಗಳನ್ನು ನಡೆಸಲು ಕಡ್ಡಾಯವಾಗಿ ಗ್ರಾಮ ಪಂಚಾಯಿತಿಯಿಂದ ಪರವಾನಗಿ ಪಡೆದುಕೊಳ್ಳಬೇಕು. ಬೇಕರಿ, ಹೊಟೇಲ್‌ಗಳಲ್ಲಿ ಉತ್ಪತ್ತಿಯಾಗುವ ಕಸದ ಆಧಾರದಲ್ಲಿ ನಾವು ಶುಲ್ಕ ನಿಗಡಿ ಮಾಡುತ್ತೇವೆ ಎಂದು ವಿವರಿಸಿದರು.