ಸಾರಾಂಶ
ಗ್ರಾಮ ಪಂಚಾಯಿತಿಗೆ ೧೫ನೇ ಹಣಕಾಸು ಹೊರತುಪಡಿಸಿ ಇನ್ನುಳಿದ ಅನುದಾನಗಳು ದೊರೆಯದಿರುವ ಕಾರಣ ಅಭಿವೃದ್ಧಿ ಕೆಲಸಗಳು ಹಾಗೂ ವಿಪತ್ತು ನಿರ್ವಹಣೆ ಮುಂತಾದವು ಸಾಧ್ಯವಾಗುತ್ತಿಲ್ಲ ಎಂದು ಸಿದ್ದಾಪುರ ತಾಲೂಕಿನ ಶಿರಳಗಿ ಗ್ರಾಪಂ ಅಧ್ಯಕ್ಷ ಮಾರುತಿ ನಾಯ್ಕ ಹೇಳಿದರು.
ಸಿದ್ದಾಪುರ: ಗ್ರಾಮ ಪಂಚಾಯಿತಿಗೆ ೧೫ನೇ ಹಣಕಾಸು ಹೊರತುಪಡಿಸಿ ಇನ್ನುಳಿದ ಅನುದಾನಗಳು ದೊರೆಯದಿರುವ ಕಾರಣ ಅಭಿವೃದ್ಧಿ ಕೆಲಸಗಳು ಹಾಗೂ ವಿಪತ್ತು ನಿರ್ವಹಣೆ ಮುಂತಾದವು ಸಾಧ್ಯವಾಗುತ್ತಿಲ್ಲ ಎಂದು ಶಿರಳಗಿ ಗ್ರಾಪಂ ಅಧ್ಯಕ್ಷ ಮಾರುತಿ ನಾಯ್ಕ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಪಂಗಳಿಗೆ ಕೋಟಿಗಟ್ಟಲೆ ಅನುದಾನ ಬರುತ್ತದೆ ಎನ್ನುವ ವದಂತಿ ಸಾರ್ವಜನಿಕರಲ್ಲಿದೆಯೇ ಹೊರತು ಪಂಚಾಯತಕ್ಕೆ ಯಾವುದೇ ಅನುದಾನ ಬರುತ್ತಿಲ್ಲ. ಈ ಬಗ್ಗೆ ಹಿರಿಯ ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂದು ಅವರು ಕೋರಿದ್ದಾರೆ.೧೫ನೇ ಹಣಕಾಸಿನ ಕ್ರಿಯಾಯೋಜನೆಯಲ್ಲಿ ₹೨೨ ಲಕ್ಷಗಳ ಅನುದಾನವನ್ನು ನಿರ್ದಿಷ್ಟ ಕಾರ್ಯಗಳಿಗೆ ಬಳಸಬೇಕು ಎನ್ನುವ ಮಾರ್ಗಸೂಚಿ ಇದೆ. ಪ್ರತಿ ಸದಸ್ಯರಿಗೂ ತಲಾ ₹೩೩ ಸಾವಿರ ದೊರೆಯುತ್ತದೆ. ಇದರಿಂದ ಯಾವ ರೀತಿ ಅಭಿವೃದ್ಧಿ ಮಾಡಲು ಸಾಧ್ಯ? ಕೊಟ್ಟಿಗೆ ಮನೆ ನಿರ್ಮಾಣ ಮುಂತಾದ ವೈಯುಕ್ತಿಕ ಕಾಮಗಾರಿಗಳ ಬೇಡಿಕೆ ₹೧ ಕೋಟಿ ಇದ್ದರೆ ದೊರೆಯುವುದು ಅದರ ಅರ್ಧಕ್ಕಿಂತ ಕಡಿಮೆ. ಅದರಲ್ಲಿ ವೈಯಕ್ತಿಕ ಮತ್ತು ಸಾರ್ವಜನಿಕ ಕಾಮಗಾರಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದರು.ಕೆಲವು ದಿನಗಳ ಹಿಂದೆ ಬಿಕ್ಕಳಸೆಯಲ್ಲಿ ಮನೆ ಸಂಪೂರ್ಣ ಸುಟ್ಟುಹೋಗಿತ್ತು. ಆ ಕುಟುಂಬಕ್ಕೆ ಗ್ರಾಪಂನಿಂದ ಸಾಧ್ಯವಾದ ಸಹಾಯ ಒದಗಿಸಿದ್ದೇವೆ. ಮನೆಯನ್ನೂ ಮಂಜೂರು ಮಾಡಲಾಗಿದೆ. ಆದರೆ ವಿಪತ್ತು ನಿರ್ವಹಣೆಯಲ್ಲಿ ದೊರೆಯುವ ಯಾವುದೇ ಸಹಾಯ ಆ ಕುಟುಂಬಕ್ಕೆ ದೊರಕಿಲ್ಲ. ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ಗ್ರಾಪಂನಿಂದ ಕೊಡಿ ಎನ್ನುತ್ತಾರೆ ಎಂದರು.
ಪಿಡಿಒಗಳಿಗೆ ಎರಡು ಗ್ರಾಪಂಗಳ ಜವಾಬ್ದಾರಿ ಇರುವ ಕಾರಣ ಕೆಲಸಗಳು ವಿಳಂಬವಾಗುತ್ತದೆ. ಕಾಯಂ ಆಗಿ ಪಿಡಿಒಗಳಿದ್ದರೆ ಗ್ರಾಪಂ ಕೆಲಸಗಳಿಗೆ ವೇಗ ಸಿಗುತ್ತದೆ. ರೇಶನ್ ಕಾರ್ಡ್, ಮನೆ ನಂಬರ್ ಒದಗಿಸುವ ಮತ್ತು ಇ- ಸ್ವತ್ತಿನ ಸಮಸ್ಯೆ ನಮಗೆ ನಿರಂತರವಾಗಿದೆ. ಹೆಚ್ಚುವರಿ ಗ್ರಂಥಾಲಯ ಮಂಜೂರಾಗಿದ್ದು, ಅಲ್ಲಿನ ಸಿಬ್ಬಂದಿಗೆ ಸಂಬಳ ನೀಡಲು ನಮ್ಮಲ್ಲಿ ಅನುದಾನವಿಲ್ಲ. ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಮೂರು ಬಾರಿ ಪತ್ರ ಬರೆದರೂ ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ. ಶಾಸಕರು, ಸಂಸದರು ಈ ಬಗ್ಗೆ ಗಮನಹರಿಸಬೇಕು ಎಂದು ಮಾರುತಿ ನಾಯ್ಕ ಆಗ್ರಹಿಸಿದರು.ಉಪಾಧ್ಯಕ್ಷೆ ಮಹಾಲಕ್ಷ್ಮೀ ನಾಯ್ಕ ಸದಸ್ಯರಾದ ಧನಂಜಯ ನಾಯ್ಕ, ಶ್ರೀಕಾಂತ ಭಟ್ಟ, ರಾಮಚಂದ್ರ ನಾಯ್ಕ, ಶಶಿಕಲಾ ಹರಿಜನ, ಲತಾ ನಾಯ್ಕ, ನೇತ್ರಾವತಿ ಮಡಿವಾಳ ಇದ್ದರು.