ಶ್ರೀರಂಗನಾಥ ಸ್ವಾಮಿಯ ಅದ್ಧೂರಿ ಬ್ರಹ್ಮರಥೋತ್ಸವ

| Published : Apr 22 2024, 02:02 AM IST

ಸಾರಾಂಶ

ಮಾಗಡಿ: ಪಟ್ಟಣದ ತಿರುಮಲೆಯ ಐತಿಹಾಸಿಕ ಶ್ರೀ ಪಶ್ಚಿಮ ವೆಂಕಟಾಚಲಪತಿ ಇಂದೇ ಖ್ಯಾತಿ ಪಡೆದಿರುವ ಶ್ರೀ ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿಸಲಾಯಿತು.

ಮಾಗಡಿ: ಪಟ್ಟಣದ ತಿರುಮಲೆಯ ಐತಿಹಾಸಿಕ ಶ್ರೀ ಪಶ್ಚಿಮ ವೆಂಕಟಾಚಲಪತಿ ಇಂದೇ ಖ್ಯಾತಿ ಪಡೆದಿರುವ ಶ್ರೀ ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿಸಲಾಯಿತು.

ಬ್ರಹ್ಮರಥೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಲಂಕಾರ ಏರ್ಪಡಿಸಲಾಗಿತ್ತು. ಶ್ರೀರಂಗನಾಥ ಸ್ವಾಮಿಗೆ ವಜ್ರ ಖಚಿತ ಚಿನ್ನದ ಕಿರೀಟ, ಚಿನ್ನದ ಪಾದುಕೆ, ಚಿನ್ನದ ಅಭಯ ಹಸ್ತಗಳನ್ನು ಅಲಂಕರಿಸಲಾಗಿತ್ತು. ನೂರಾರು ಭಕ್ತರು ಸರದಿಯಲ್ಲಿ ದೇವರ ದರ್ಶನ ಪಡೆದರು.

ಉತ್ಸವ ಮೂರ್ತಿಗಳನ್ನು ಅರವಂಟಿಕೆ ಜಾಗಕ್ಕೆ ಕರೆದು ಪೂಜೆ ಸಲ್ಲಿಸಿ ನಂತರ ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ನಂತರ ರಥದಲ್ಲಿ ಉತ್ಸವ ಮೂರ್ತಿಯನ್ನು ಕೂರಿಸುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ರಥೋತ್ಸವದ ಮೇಲೆ ಗರುಡ ಪಕ್ಷ ಪ್ರದಕ್ಷಿಣೆ ಹಾಕಿ ಬ್ರಹ್ಮರಥೋತ್ಸವ ಎಳೆಯಲು ಶುಭ ಸೂಚನೆ ನೀಡಿತು. ತಹಸೀಲ್ದಾರ್ ಶರತ್ ಕುಮಾರ್ ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ರಥ ಎಳೆಯುತ್ತಿದ್ದಂತೆ ನೂರಾರು ಭಕ್ತರು ರಥಕ್ಕೆ ಬಾಳೆಹಣ್ಣು ದವನ ಎಸೆದು ರಂಗನಾಥಸ್ವಾಮಿಗೆ ಹರಕೆ ಸಲ್ಲಿಸಿದರು. ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು. ಬಳಿಕ ವಿವಿಧ ಜನಾಂಗದಿಂದ ಅನ್ನಸಂತರ್ಪಣೆಗೆ ಅದ್ಧೂರಿ ಚಾಲನೆ ದೊರೆಯಿತು.

ಶಾಸಕ ಬಾಲಕೃಷ್ಣ ಮಾತನಾಡಿ, ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಸಾಕಷ್ಟು ಭಕ್ತರು ಸಾಕ್ಷಿಯಾಗಿದ್ದು ಈ ಬಾರಿ ಶ್ರೀರಂಗನ ಕೃಪೆಯಿಂದ ಮಳೆ ಬೆಳೆ ಸಮೃದ್ಧಿಯಾಗಲಿ. ಚುನಾವಣೆ ಬಳಿಕ ರಂಗನಾಥಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ 5 ಕೋಟಿ ಅನುದಾನ ಬಿಡುಗಡೆಯಾಗಲಿದೆ. ಜೊತೆಗೆ ಅರ್ಚಕರಿಗೆ ಅಲ್ಲಿ ಉಳಿದುಕೊಳ್ಳಲು ಕೊಠಡಿಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಶ್ರೀರಂಗನಾಥ ಸ್ವಾಮಿಯ ಕೃಪೆಯಿಂದ ಈ ಬಾರಿ ವರುಣನ ಕೃಪೆಯಿಂದ ಎಲ್ಲರಿಗೂ ಒಳಿತನ್ನು ಮಾಡಲಿ ಶುಭ ಸೂಚನೆಯಂತೆ ತೇರಿನ ಹಿಂದಿನ ದಿನ ಮಳೆಯಾಗಿರುವುದು ಈ ಬಾರಿಯ ರೈತರಿಗೆ ಸಂತೋಷವಾಗಿದೆ ಎಂದರು. ಫೋಟೋ 21ಮಾಗಡಿ1 :

ಮಾಗಡಿಯ ತಿರುಮಲೆ ಶ್ರೀ ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿಸಲಾಯಿತು.

ಫೋಟೊ 21ಮಾಗಡಿ2 :

ಶ್ರೀ ರಂಗನಾಥಸ್ವಾಮಿ ಮೂಲಕ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.